ದಾವಣಗೆರೆ, ಮೇ 29: ಚನ್ನಗಿರಿ (Channagiri) ಘಟನೆ ವೇಳೆ ಯಾರೂ ಪಾಕಿಸ್ತಾನ ಜಿಂದಾಬಾದ್ ಎಂದು ಹೇಳಿಲ್ಲವೆಂದು ದಾವಣಗೆರೆ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸ್ಪಷ್ಟನೆ ನೀಡಿದ್ದಾರೆ. ಮೇ 24ರಂದು ಚನ್ನಗಿರಿ ಠಾಣೆ ಮುಂದೆ ಪ್ರತಿಭಟನೆ ವೇಳೆ ಕಲ್ಲುತೂರಾಟ ಮಾಡಲಾಗಿತ್ತು. ಈ ವೇಳೆ ಪಾಕಿಸ್ತಾನ ಜಿಂದಾಬಾದ್ (Pakistan Zindabad) ಎಂದು ಘೋಷಣೆ ಕೂಗಿದ ಆರೋಪ ಕೂಡ ಕೇಳಿಬಂದಿತ್ತು. ಜೊತೆಗೆ ಘೋಷಣೆ ಕೂಗಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡುತ್ತಿದೆ.
ಈ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಪರಿಶೀಲಿಸಿದ್ದು ಮೇಲ್ನೋಟಕ್ಕೆ ಪಾಕ್ ಜಿಂದಾಬಾದ್ ಎಂದು ಘೋಷಿಸಿಲ್ಲ. ಪರಿಶೀಲಿಸಲಾದ ವಿಡಿಯೋದಲ್ಲಿ ‘ಪೊಲೀಸರಿಗೆ ಧಿಕ್ಕಾರ’ ಎಂದು ಕೂಗಿದ್ದಾರೆ. ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ ವಿಡಿಯೋ ಲಭ್ಯವಿದ್ದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ಅಥವಾ ಸ್ಥಳೀಯ ಠಾಣೆಗೆ ಮಾಹಿತಿ ನೀಡಿದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಚನ್ನಗಿರಿ ಲಾಕಪ್ ಡೆತ್ ಪ್ರಕರಣ: ಡಿವೈಎಸ್ಪಿ ಸೇರಿ ಮೂವರು ಪೊಲೀಸ್ ಅಧಿಕಾರಿಗಳ ಸಸ್ಪೆಂಡ್
ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಬಾರದು ಎಂದು ಸಾರ್ವಜನಿಕರಿಗೆ ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ಸೂಚನೆ ನೀಡಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಲಾಕಪ್ ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆದಿಲ್ ಮರಣೋತ್ತರ ಪರೀಕ್ಷಾ ವರದಿ ಮಾಹಿತಿ ಟಿವಿ9ಗೆ ಲಭ್ಯವಾಗಿದೆ. ಲೋಬಿಪಿಯಿಂದ ಹೃದಯಾಘಾತವಾಗಿ ಆದಿಲ್ ಸಾವನ್ನಪ್ಪಿದ್ದು, ವರದಿಯಲ್ಲಿ ಕಾರ್ಡಿಯಾ ಫಲ್ಮನರಿ ಎಂದು ಉಲ್ಲೇಖಿಸಲಾಗಿದೆ. ಸದ್ಯ ಮರಣೋತ್ತರ ವರಿದಯನ್ನು ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಸಲ್ಲಿಸಿದ್ದಾರೆ. ಮೇ 24ರಂದು ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಆದಿಲ್ ಮೃತಪಟ್ಟಿದ್ದ.
ಪ್ರಕರಣ ಬಗ್ಗೆ ದಾವಣಗೆರೆಯಲ್ಲಿ ಎಡಿಜಿಪಿ ಆರ್.ಹಿತೇಂದ್ರ ಪ್ರತಿಕ್ರಿಯಿಸಿದ್ದು, ಈ ಘಟನೆ ಸಂಬಂಧ 108 ಆರೋಪಿಗಳನ್ನ ಗುರುತಿಸಲಾಗಿದೆ. ಕಲ್ಲು ತೂರಾಟ ಮಾಡಿದ 30 ಆರೋಪಿಗಳನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು. ಈಗಾಗಲೇ ಈ ಘಟನೆ ಸಂಬಂಧ ಎಫ್ಐಆರ್ ಸಹ ದಾಖಲಾಗಿದೆ. ಪೊಲೀಸರ ಮೇಲೆ ಕೂಡ ದಾಳಿ ಆಗಿದೆ, ಈ ಬಗ್ಗೆ ತನಿಖೆ ಆಗುತ್ತಿದೆ ಎಂದಿದ್ದಾರೆ.
ಇದನ್ನೂ ಓದಿ: ಚನ್ನಗಿರಿ ಲಾಕಪ್ ಡೆತ್ಗೆ ಬಿಗ್ ಟ್ವಿಸ್ಟ್: ಮರಣೋತ್ತರ ಪರೀಕ್ಷೆಯಲ್ಲಿ ಆದಿಲ್ ಸಾವಿನ ರಹಸ್ಯ ಬಯಲು
ಪೊಲೀಸ್ ವಶದಲ್ಲಿದ್ದ ವ್ಯಕ್ತಿ ಸಾವಿನ ಬಗ್ಗೆ ಸಿಐಡಿಯಿಂದ ತನಿಖೆ ಮಾಡಲಾಗುತ್ತಿದೆ. ವೈದ್ಯಕೀಯ ವರದಿ ಬಗ್ಗೆ ಸಿಐಡಿ ಅಧಿಕಾರಿಗಳನ್ನೇ ಕೇಳಬೇಕು. ಕೆಲವು ಅಧಿಕಾರಿಗಳನ್ನು ಅಮಾನತು ಮಾಡುವುದು ಸಾಮಾನ್ಯ. ಅಮಾನತು ಅಂದ್ರೆ ಅದೇನು ದೊಡ್ಡ ಶಿಕ್ಷೆಯಲ್ಲ. ತನಿಖೆಯಲ್ಲಿ ತಪ್ಪಿಲ್ಲ ಅಂತಾ ಗೊತ್ತಾದ್ರೆ ಮತ್ತೆ ಸೇವೆಗೆ ಬರಬಹುದು ಎಂದರು.
ರಾಜ್ಯದಲ್ಲಿ ಯಾವುದೇ ಕೋಮು ಗಲಭೆ ನಡೆದಿಲ್ಲ. ಕೋಮುಭಾವನೆ ಕೆರಳಿಸುವ ಘಟನೆ ನಡೆದಿಲ್ಲ. ಕಳೆದ ವರ್ಷಕ್ಕೆ ಹೊಲಿಸಿದರೆ ಈ ವರ್ಷ ಗಂಭೀರ ಪ್ರಕರಣ ನಡೆದಿಲ್ಲ. ಈ ಬಗ್ಗೆ ನಮ್ಮ ಬಳಿ ಅಂಕಿ ಸಂಖ್ಯೆಗಳಿವೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.