ಚನ್ನಗಿರಿ ಲಾಕಪ್ ಡೆತ್ಗೆ ಬಿಗ್ ಟ್ವಿಸ್ಟ್: ಮರಣೋತ್ತರ ಪರೀಕ್ಷೆಯಲ್ಲಿ ಆದಿಲ್ ಸಾವಿನ ರಹಸ್ಯ ಬಯಲು
channagiri lockup death Case: ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಮೇರೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭದಲ್ಲಿ ನಡೆದಿದ್ದ ಆದಿಲ್ ಖಲೀಂ ಸಾವು ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದೆ. ಇದರ ಬೆನ್ನಲ್ಲೇ ಇದೀಗ ಮೃತ ಆದಿಲ್ ಅದಿಲ್ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಅದು ಟಿವಿ9ಗೆ ಲಭ್ಯವಾಗಿದೆ. ಹಾಗಾದ್ರೆ, ವರದಿಯಲ್ಲಿ ಏನಿದೆ? ಆದಿಲ್ ಸಾವನ್ನಪ್ಪಿದ್ದೇಗೆ ಎನ್ನುವ ವಿವರ ಇಲ್ಲಿದೆ.
ದಾವಣಗೆರೆ, (ಮೇ 29): ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ(Davanagere) ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭ ಆದಿಲ್ ಖಲೀಂ ಏಕಾಏಕಿ ಮೃತಪಟ್ಟಿದ್ದಾನೆ. ಠಾಣೆಗೆ ಕರೆತಂದು 7 ನಿಮಿಷದೊಳಗೆ ಆರೋಗ್ಯದಲ್ಲಿ ಏರುಪೇರು ಆಗಿ ಆದಿಲ್ ಮೃತಪಟ್ಟಿದ್ದಾನೆ. ಇದೊಂದು ಲಾಕಪ್ ಡೆತ್. ಪೊಲೀಸರೇ ಸಾಯಿಸಿದ್ದಾರೆ ಎಂದು ಮೃತ ಆದಿಲ್ ಸಂಬಂಧಿಕರು ಆರೋಪಿಸಿದ್ದಾರೆ. ಅಲ್ಲದೇ ಆಕ್ರೋಶಗೊಂಡು ಠಾಣೆಗೆ ನುಗ್ಗಿ ದಾಂಧಲೆ ಮಾಡಿದ್ದರು. ಇದೀಗ ಆದಿಲ್ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಆ ವರದಿ ಅದು ಟಿವಿ9ಗೆ ಲಭ್ಯವಾಗಿದೆ. ಲೋ ಬಿಪಿಯಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಮರಣೋತ್ತರ ಪರೀಕ್ಷಾ ವರದಿಯಿಂದ ತಿಳಿದುಬಂದಿದೆ.
ಮೇ 24ರಂದು ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಸಾವನ್ನಪ್ಪಿದ ಅದಿಲ್ ಮೃತದೇಹವನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇಂದು (ಮೇ 29) ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಇದೀಗ ಆ ವರದಿಯನ್ನು ಸ್ಥಳೀಯ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಇನ್ನು ವರದಿ ಟಿವಿ9ಗೆ ಲಭ್ಯವಾಗಿದ್ದು, ಲೋಬಿಪಿಯಿಂದ ಹೃದಯಾಘಾತವಾಗಿ ಆದಿಲ್ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ.
ಇದನ್ನೂ ಓದಿ: ಚನ್ನಗಿರಿ ಲಾಕಪ್ ಡೆತ್: ಠಾಣೆಗೆ ನುಗ್ಗಿ ದಾಂಧಲೆ ಪ್ರಕರಣ ಸಿಐಡಿ ಹೆಗಲಿಗೆ
ಲಾಕಪ್ ಡೆತ್, ಠಾಣೆ ಬಳಿ ದಾಂಧಲೆ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದ್ದು, ಸಿಐಡಿ ಅಧಿಕಾರಿಗಳು ಸಹ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಇನ್ನು ಚನ್ನಗಿರಿ ಡಿವೈಎಸ್‌ಪಿ ಪ್ರಶಾಂತ್ ಮುನ್ನೊಳ್ಳಿ, ಸರ್ಕಲ್ ಇನ್‌ಸ್ಪೆಕ್ಟರ್ ನಿರಂಜನ. ಬಿ ಹಾಗೂ ಪಿಎಸ್‌ಐ ಅಕ್ತರ್ ಅವರನ್ನು ಅಮಾನತು ಗೃಹ ಸಚಿವ ಪರಮೇಶ್ವರ್ ಆದೇಶ ಹೊರಡಿಸಿದ್ದಾರೆ. ಪ್ರಕರಣ ಸಂಬಂಧ ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಮೇರೆಗೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು, ಮೇ 24ರಂದು ಆದಿಲ್ನನ್ನು ವಶಕ್ಕೆ ಪಡೆದುಕೊಂಡಿದ್ದರು. ವಶಕ್ಕೆ ಪಡೆದ ಏಳೇ ನಿಮಿಷದಲ್ಲಿ ಪೊಲೀಸರ ಕಸ್ಟಡಿಯಲ್ಲಿ ಇದ್ದ ವೇಳೆ ಆದಿಲ್ ಮೃತಪಟ್ಟಿದ್ದ. ಇದು ಆದಿಲ್ ಸಂಬಂಧಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಪೊಲೀಸರೇ ಹಲ್ಲೆ ಮಾಡಿ ಆದಿಲ್ನನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ ಆದಿಲ್ ಸಾವಿನಿಂದ ರೊಚ್ಚಿಗೆದ್ದ ಸಂಬಂಧಿಕರು ಪ್ರತಿಭಟನೆ ಮಾಡಿ ಏಕಾಏಕಿ ಪೊಲೀಸ್ ಠಾಣೆಗೆ ನುಗ್ಗಿ ಕೈಗೆ ಸಿಕ್ಕ ವಸ್ತುಗಳನ್ನು ಧ್ವಂಸ ಮಾಡಿದ್ದರು. ಅಲ್ಲದೇ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿ ಆಕ್ರೋಶ ಹೊರ ಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:31 pm, Wed, 29 May 24