ಸರ್ಕಾರದ ಕೆಲಸವನ್ನು ಈ ಖಾಸಗಿ ಸಂಸ್ಥೆಯೇ ಮಾಡುತ್ತಿದೆ, 53 ಶಾಲೆಗಳಿಗೆ ಸುಣ್ಣಬಣ್ಣ ಬಳಿದಿದೆ- ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯುತಿದೆ!

ಸುಮನಾ ಫೌಂಡೇಶನ್ ಸದಸ್ಯರ ಶ್ರಮದ ಮೂಲಕ ಇಡೀ ಶಾಲೆಗೆ ಹೊಸ ಲುಕ್ ಬಂದಿದೆ. ಇನ್ನು ಶಾಲೆಯು ಅರಿಶಿಣ ಕುಂಕುಮ ಬಣ್ಣದಲ್ಲಿ ಮಿಂಚುತ್ತಿದ್ದು, ಶಾಲೆಯ ಮುಖ್ಯ ದ್ವಾರದಲ್ಲಿ ಬಿಡಿಸಲಾದ ಮಕ್ಕಳ ಚಿತ್ರಗಳು ಇತರೆ ಗ್ರಾಫಿಕ್‌ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಿವೆ.

ಸರ್ಕಾರದ ಕೆಲಸವನ್ನು ಈ ಖಾಸಗಿ ಸಂಸ್ಥೆಯೇ ಮಾಡುತ್ತಿದೆ, 53 ಶಾಲೆಗಳಿಗೆ ಸುಣ್ಣಬಣ್ಣ ಬಳಿದಿದೆ- ವಿದ್ಯಾರ್ಥಿಗಳನ್ನು ಶಾಲೆಯತ್ತ ಸೆಳೆಯುತಿದೆ!
ಖಾಸಗಿ ಸಂಸ್ಥೆಯಿಂದ 53 ಶಾಲೆಗಳಿಗೆ ಸುಣ್ಣಬಣ್ಣ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jan 11, 2023 | 4:56 PM

ಬಣ್ಣ ಕಾಣದೆ ಹಾಳುಕೊಂಪೆಯಂತಾಗಿದ್ದ ಸರ್ಕಾರಿ ಶಾಲೆಗೆ ಹೊಸ ಲುಕ್ ನೀಡಿವೆ ಆ ಕೈಗಳು. ವಿದ್ಯಾರ್ಥಿಗಳನ್ನಂತೂ ಕೈಬೀಸಿ ಕರೆಯುತ್ತಿದೆ‌ ಆ ಸರ್ಕಾರಿ ಶಾಲೆ. ಸಾಮಾನ್ಯವಾಗಿ ಹತ್ತಾರು ಲಕ್ಷ ಅನುದಾನ ಹಾಕಿಸಿಕೊಂಡು ಕಮಿಷನ್ ದಂದೆಯಲ್ಲಿ ಮುಳುಗಿ, ಸಕಾಲಕ್ಕೆ ಬಣ್ಣ ಕಾಣದೇ ಇರುವುದೇ ಹೆಚ್ಚು. ಆದ್ರೆ ಇದಕ್ಕೆ ಅಪವಾದವೆಂಬಂಯತೆ, ಅಪರೂಪಕ್ಕೆ ಹತ್ತು ಪೈಸೆ ಖರ್ಚಿಲ್ಲದೆ ಹಳ್ಳಿಯ ಶಾಲೆಯೊಂದು ಮದುವಣಗಿತ್ತಿಯಂತೆ ಸಜ್ಜಾಗಿದೆ. ಇಲ್ಲಿದೇ ನೋಡಿ ಸುಂದರ ಮನಸ್ಸಿನ ನಾಗರಿಕರ ಕೈ ಚಳಕದ ಸ್ಟೋರಿ. ಅವರು ದೂರದ ಬೆಂಗಳೂರಿನವರು, ತಮ್ಮದೇ ಆದ ಒಂದು ಫೌಂಡೇಶನ್ ಮಾಡಿಕೊಂಡು ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು (rural govt schools) ಉಳಿಸುವ ಕೆಲಸವನ್ನು ಸದ್ದಿಲ್ಲದೆ ಮಾಡ್ತಿದ್ದಾರೆ. ವರ್ಷಾನುಗಟ್ಟಲೆ ಸುಣ್ಣಬಣ್ಣ ಕಾಣದ ಅದೇಷ್ಟೋ ಸರ್ಕಾರಿ ಶಾಲೆಗಳಿಗೆ ಈ ತಂಡ ಹೊಸ‌‌ ಲುಕ್‌ ನೀಡ್ತಿದೆ. ಶಾಲೆಯ ಗೋಡೆಗಳ‌ ಮೇಲೆ ಬಣ್ಣ ಬಣ್ಣದ ಚಿತ್ರಗಳನ್ನು (Paint) ಬಿಡಿಸಿ ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳತ್ತ ಆಕರ್ಷಿಸುವಂತೆ ಮಾಡಿದ್ದಾರೆ.‌

ಬೆಂಗಳೂರಿನ‌ ಸಂಜಯನಗರದ ಸುಮನಾ ಫೌಂಡೇಶನ್ (Bangalore Sumana Foundation) ತಂಡವೊಂದು ಸರ್ಕಾರ ಮಾಡಬೇಕಾದ ಕೆಲಸವನ್ನು ಸದ್ದಿಲ್ಲದೆ ತಾನೇ ಮಾಡ್ತಿದೆ. ಸುಣ್ಣಬಣ್ಣ ಕಾಣದ ಅದೆಷ್ಟೋ ರಾಜ್ಯದ ಸರ್ಕಾರಿ ಶಾಲೆಗಳಿಗೆ ಈ ತಂಡ ವಾರಗಟ್ಟಲೇ ಶಾಲೆಯಲ್ಲೇ ಉಳಿದುಕೊಂಡು ಶಾಲೆಗಳಿಗೆ ಹೊಸ ಲುಕ್ ನೀಡ್ತಿದೆ. ಇದರ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯ (Davanagere) ಹರಿಹರ ತಾಲೂಕಿನ ದೇವರಬೆಳಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೂಡ ಒಂದಾಗಿದೆ. ಈ ಶಾಲೆಯನ್ನು ಕೂಡ ಹೊಸ ಲುಕ್‌‌ ನೀಡಿ ಮಾದರಿ ಶಾಲೆಯನ್ನಾಗಿ ಮಾಡುವ ಮೂಲಕ ಎಲ್ಲರೂ ಅದರತ್ತ ತಿರುಗಿ ನೋಡುವಂತೆ ಮಾಡಿದ್ದಾರೆ.

ಇದಲ್ಲದೆ ರಾಜ್ಯಾದ್ಯಂತ ಸಂಚರಿಸುವ ಈ ಸುಮನಾ ಫೌಂಡೇಶನ್ ಸದಸ್ಯರು ಇಲ್ಲಿಯ ತನಕ ಒಟ್ಟು 53 ಸರ್ಕಾರಿ ಶಾಲೆಗಳಿಗೆ ಹೊಸ ಲುಕ್‌ ನೀಡಿದ್ದಾರೆ. ಈ ತಂಡ ದೇವರಬೆಳಕೆರೆ ಗ್ರಾಮದಲ್ಲಿರುವ‌ ಸರ್ಕಾರಿ ಶಾಲೆಯಲ್ಲಿ ಉಳಿದುಕೊಂಡು ತಮ್ಮ ಸ್ವಂತ ಖರ್ಚಿನಲ್ಲಿ ಬಣ್ಣ ಬಳಿದು,‌ ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಬಿಡಿಸಿ ಇಡೀ ಶಾಲೆಯ ಚಿತ್ರಣವನ್ನು ಬದಲಿಸಿದ್ದಾರೆ. ಇನ್ನು ಇವರ ಈ ಕೆಲಸಕ್ಕೆ ದೇವರಬೆಳಕೆರೆ ಗ್ರಾಮಸ್ಥರು ಕೂಡ ಸಾಥ್ ನೀಡಿದ್ದು, ಅವರಿಗೆ ಉಳಿದುಕೊಳ್ಳಲು, ಆಹಾರದ ವ್ಯವಸ್ಥೆ ಮಾಡಿದ್ದಾರೆ ಎಂದು ಡಾ. ಸುನೀತಾ ಮಂಜುನಾಥ್, ಅಧ್ಯಕ್ಷರು, ಸುಮನಾ ಫೌಂಡೇಷನ್-ಬೆಂಗಳೂರು ಅವರು ಮಾಹಿತಿ ನೀಡಿದ್ದಾರೆ.

2೦ ಜನರ ತಂಡ ಬಂದಿದ್ದು, ಸುಮನಾ ಸುಂದರ ಮನಸ್ಸಿನ ನಾಗರಿಕರು ಎಂಬ ಅರ್ಥದಲ್ಲಿ ಈ ಕಾರ್ಯಕ್ರಮಗಳನ್ನು ಮಾಡ್ತಾ ಬಂದಿದ್ದೇವೆ. ಇಲ್ಲಿ ತನಕ 53 ಶಾಲೆಗಳನ್ನು ಸುಂದರೀಕರಣ ಮಾಡಿದ್ದು, ದೇವರಬೆಳಕೆರೆ ಶಾಲೆಯ ಗೋಡೆಗಳ‌ ಮೇಲೆ ಮಕ್ಕಳನ್ನು ಆಕರ್ಷಿಸುವ ಚಿತ್ರಗಳನ್ನು ಚಿತ್ರಿಸಲಾಗಿದೆ. ಇನ್ನು ಈ ಶಾಲೆಯನ್ನು ನಿರ್ಮಾಣ ಮಾಡಿದಾಗ ಮಾತ್ರ ಶಾಲೆ ಸುಣ್ಣಬಣ್ಣ ಕಂಡಿತ್ತಂತೆ. ಅಲ್ಲಿಂದ ಇಲ್ಲಿ ತನಕ ಗೋಡೆಗಳು ಬಣ್ಣ ಕಾಣದೆ ಕರಕಲಾಗಿದ್ದರಿಂದ ಈ ಗ್ರಾಮದ ವೀರೇಶ್ ಎಂಬ ಯುವಕ ಸುಮನಾ ಫೌಂಡೇಶನ್ ರವರಿಗೆ ಸಂಪರ್ಕಿಸಿ, ತಮ್ಮ ಊರಿಗೆ ಕರೆಸಿಕೊಂಡಿದ್ದಾರೆ.

ಸುಮನಾ ಫೌಂಡೇಶನ್ ಸದಸ್ಯರ ಶ್ರಮದ ಮೂಲಕ ಇಡೀ ಶಾಲೆಗೆ ಹೊಸ ಲುಕ್ ಬಂದಿದೆ. ಇನ್ನು ಶಾಲೆಯು ಅರಿಶಿಣ ಕುಂಕುಮ ಬಣ್ಣದಲ್ಲಿ ಮಿಂಚುತ್ತಿದ್ದು, ಶಾಲೆಯ ಮುಖ್ಯ ದ್ವಾರದಲ್ಲಿ ಬಿಡಿಸಲಾದ ಮಕ್ಕಳ ಚಿತ್ರಗಳು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೋರ್ಡ್, ವೀಣೆ‌ ಹಿಡಿದು ಕೂತಿರುವ ಸರಸ್ವತಿ ಹಾಗೂ ಹುಲ್ಲು ತಿನ್ನುತ್ತಿರುವ ಜಿರಾಫೆಯ ಗ್ರಾಫಿಕ್‌ ಚಿತ್ರಗಳು ಮಕ್ಕಳನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ:

ಜನ ಮೊದಲೇ ಇಲಿ ಹೋದರೆ ಹುಲಿ ಹೋಯ್ತು ಅಂತಿದ್ದಾರೆ… ಅಂಥದ್ದರಲ್ಲಿ ಈ ರೈತ ನಾಯಿಗೆ ಹುಲಿ ಪಟ್ಟೆ ಬಳಿದು ನಾಡಿಗೆ ಬಿಟ್ಟ! ಮುಂದೇನಾಯ್ತು?

ಇನ್ನು ಶಾಲೆಯ ಕೊಠಡಿಗಳು ಕಂದು ಹಳದಿ ಬಣ್ಣದಿಂದ ಕಂಗೊಳಿಸುತ್ತಿದ್ದು, ಶಾಲೆಯ ಮೆಟ್ಟಿಲುಗಳು ನೀಲಿ ಬಣ್ಣದಿಂದ ಮಕ್ಕಳನ್ನು ಸ್ವಾಗತಿಸುತ್ತಿದೆ. ಶಾಲೆ ಸುಂದರವಾಗಿ ಕಾಣಲು ಇದರ ಹಿಂದೆ ನಮ್ಮ ಸುಮನಾ ಫೌಂಡೇಶನ್ ಸದಸ್ಯರ ಶ್ರಮ‌ ಇದೆ, ಬಣ್ಣ ಇಲ್ಲದೆ ಕರಕಲಾಗಿದ್ದ ಶಾಲೆಯ ಗೋಡೆಗಳಿಗೆ ಹೊಸ ಲುಕ್ ನೀಡಿ ಜನ ತಿರುಗಿ ನೋಡುವಂತೆ ಮಾಡಿದ್ದಾರೆ ಎನ್ನುತ್ತಾರೆ ಗ್ರಾಮದ ಪ್ರಮುಖರಾದ ಕರಿಬಸಪ್ಪ ಅವರು.

ಒಟ್ಟಾರೆ ಅದೆಷ್ಟೋ ಶಾಲೆಗಳು ಪ್ರಸ್ತುತ ದಿನಗಳಲ್ಲಿ ಹಾಜರಾತಿ ಇಲ್ಲದೆ, ಶಾಲೆಗಳಲ್ಲಿ ಸೂಕ್ತ ಮೂಲಸೌಕರ್ಯ ವ್ಯವಸ್ಥೆ ಇಲ್ಲದೆ ಮುಚ್ಚಲ್ಪಟ್ಟಿರುವ ಉದಾಹರಣೆಗಳು ನಮ್ಮ‌ ಕಣ್ಣ ಮುಂದಿವೆ. ಅಂತಹುದರಲ್ಲಿ ಸರ್ಕಾರ ಮಾಡ್ಬೇಕಾದ ಕೆಲಸವನ್ನು ಈ ಸುಮನಾ ಫೌಂಡೇಶನ್ ನ ಸದಸ್ಯರು ಯಾವುದೇ ಪ್ರಚಾರ ಇಲ್ಲದೆ ಒಟ್ಟು 53 ಶಾಲೆಗಳಿಗೆ ಸುಂದರ ರೂಪ ನೀಡಿ ಮಕ್ಕಳನ್ನು ಶಾಲೆಯತ್ತ ಹೆಜ್ಜೆ ಹಾಕುವಂತೆ ಮಾಡಿರುವುದು ವಿಶೇಷವೆ ಸರಿ.

ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ

Published On - 4:55 pm, Wed, 11 January 23