ದಾವಣಗೆರೆ: ಬೊಮ್ಮಾಯಿ ಸರ್ಕಾರದ ಒಳ ಮೀಸಲಾತಿಗೆ ವಿರೋಧಿಸಿ ಬಂಜಾರಾ ಸಮಾಜದ(Banjara Community) ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ಬೃಹತ್ ಪ್ರತಿಭಟನೆ(Protest) ನಡೆಯುತ್ತಿದೆ. ಲಂಬಾಣಿ ಸಮಾಜದ ಶಾಸಕರ ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಹೊನ್ನಾಳಿ ಪಟ್ಟಣದ ಟಿಬಿ ಸರ್ಕಲ್ನಿಂದ ತಾಲೂಕು ಕಚೇರಿವರೆಗೆ ಪ್ರತಿಭಟನೆ ನಡೆಯುತ್ತಿದೆ. ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ ಬಳಿಕ ಶಾಸಕ ರೇಣುಕಾಚಾರ್ಯ ಮನೆಗೆ ಮುತ್ತಿಗೆ ಹಾಕುವ ಸಾಧ್ಯತೆ ಇದೆ.
ಹೊನ್ನಾಳಿ ಪಟ್ಟಣದ ನ್ಯಾಮತಿ ರಸ್ತೆಯಲ್ಲಿ ಇರುವ ಶಾಸಕ ರೇಣುಕಾಚಾರ್ಯ ಮನೆಗೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತೀಚಿಗೆ ಶಿಕಾರಿಪುರದಲ್ಲಿನಡೆದ ಘಟನೆ ಹೊನ್ನಾಳಿಯಲ್ಲಿ ಮರುಕಳಿಸದಂತೆ ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದಾರೆ. ಇನ್ನು ಬಾಗಲಕೋಟೆಯಲ್ಲೂ ಬಂಜಾರಾ ಸಮುದಾಯದವರ ಆಕ್ರೋಶ ಹೆಚ್ಚಾಗಿದೆ. ಬಾಗಲಕೋಟೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ವಿರುದ್ಧ ಘೋಷಣೆ ಕೂಗಲಾಗುತ್ತಿದೆ. ದಲಿತ ವಿರೋಧಿ, ದಲಿತರನ್ನು ಒಡೆದು ಆಳುವ ಬಿಜೆಪಿ ಸರಕಾರಕ್ಕೆ ಧಿಕ್ಕಾರ ಎಂದು ಕೂಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಬೊಮಾಯಿ ಜೇನು ಕಚ್ಚಿಸಿಕೊಂಡು ಜೇನು ಕೊಟ್ಟಿದ್ದೀನಿ ಅಂತಾರೆ. ವಿಷ ಕೊಟ್ಟು ಹೋಗಿಬಿಡಿ ಪುಣ್ಯಾತ್ಮ ಎಂದು ಬಂಜಾರಾ ಮುಖಂಡರು ಗೋಳಾಡಿದರು. ಸಿಎಂ ಬೊಮ್ಮಾಯಿ ಮತ್ತೆ ಸಿಎಂ ಆದರೆ ನಾ ವಿಷ ಕುಡಿತೀನಿ ಎಂದು ಬಂಜಾರಾ ಮುಖಂಡ ಬಲರಾಮ ನಾಯಕ್ ಪ್ರತಿಭಟನೆ ವೇಳೆ ಗುಡುಗಿದರು.
ಬಾಗಲಕೋಟೆ: ಒಳಮೀಸಲಾತಿಗೆ ಲಂಬಾಣಿ ಸಮುದಾಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿದ್ದು ಒಳಮೀಸಲಾತಿ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ಲಂಬಾಣಿ ತಾಂಡಾದೊಳಗೆ ಬಿಜೆಪಿ ರಾಜಕೀಯ ಮುಖಂಡರಿಗೆ ಪ್ರವೇಶ ನಿಷೇಧ ಹೇರಿದ್ದಾರೆ. ಬಾಗಲಕೋಟೆ ತಾಲೂಕಿನ ಮುಚಖಂಡಿ ತಾಂಡಾದಲ್ಲಿ ಮನೆ ಹಾಗೂ ವಿದ್ಯುತ್ ಕಂಬಗಳಿಗೆ ಕಟ್ಟಿದ್ದ ಬಿಜೆಪಿ ಧ್ವಜ ತೆರವುಗೊಳಿಸಿ ಲಂಬಾಣಿ ಸಮುದಾಯಕ್ಕೆ ಸರ್ಕಾರದಿಂದ ಅನ್ಯಾಯ ಆಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ತಾಂಡಾದಲ್ಲಿ ಯಾವ ಬಿಜೆಪಿ ಎಮ್ಎಲ್ಎ ಹಾಗೂ ಬಿಜೆಪಿ ನಾಯಕರನ್ನು ಒಳಗೆ ಬಿಡುವುದಿಲ್ಲ. ಬಿಜೆಪಿ ಸರಕಾರ ಲಂಬಾಣಿ ಸಮುದಾಯದವರಿಗೆ ಅನ್ಯಾಯ ಮಾಡಿದೆ. ಚುನಾವಣೆಯಲ್ಲಿ ತಕ್ಕ ಪಾಠ ಕಲಿಸೋದಾಗಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ. ಹಾಗೂ ನಮ್ಮ ತಾಂಡಕ್ಕೆ ಬಿಜೆಪಿ ರಾಜಕೀಯ ಮುಖಂಡರ ಪ್ರವೇಶ ನಿರ್ಬಂಧಿಸಲಾಗಿದೆ ಎಂದು ತಿಳಿಸಿದರು. ಹುನಗುಂದ ತಾಲೂಕಿನ ಅಮೀನಗಢ ತಾಂಡಾದಲ್ಲಿ ಕರ್ನಾಟಕ ಸರಕಾರ ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ಒಳಮೀಸಲಾತಿ ಹಿಂಪಡೆಯಬೇಕು ಎಂದು ಲಂಬಾಣಿ ಜನರು ಬ್ಯಾನರ್ ಅಂಟಿಸಿದ್ದಾರೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:18 pm, Wed, 29 March 23