ಶಾಮನೂರು ಶಿವಶಂಕರಪ್ಪ ಹೇಳಿಕೆ ವಿರೋಧಿಸಲು ಆಗಲ್ಲ: ಶಾಸಕ ಶಿವಗಂಗಾ ಬಸವರಾಜ
ದಾವಣಗೆರೆ ಜಿಲ್ಲೆಯ ಚನ್ನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ, ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆ ನಾವು ವಿರೋಧಿಸಲು ಆಗಲ್ಲ. ಯಾವ ಜಾತಿಯವರು ಯಾರಿಗೆ ಮತ ನೀಡಿದ್ದಾರೆಂದು ಹೇಳುವುದು ಕಷ್ಟ. ಆದರೆ ಅಲ್ಪಸಂಖ್ಯಾತ ಸಮಾಜ ಕಾಂಗ್ರೆಸ್ ಪಕ್ಷದ ಜೊತೆ ಇದೆ ಎಂದು ಹೇಳಿದ್ದಾರೆ.
ದಾವಣಗೆರೆ, ಅಕ್ಟೋಬರ್ 08: ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಹೇಳಿಕೆ ನಾವು ವಿರೋಧಿಸಲು ಆಗಲ್ಲ. ಯಾವ ಜಾತಿಯವರು ಯಾರಿಗೆ ಮತ ನೀಡಿದ್ದಾರೆಂದು ಹೇಳುವುದು ಕಷ್ಟ. ಆದರೆ ಅಲ್ಪಸಂಖ್ಯಾತ ಸಮಾಜ ಕಾಂಗ್ರೆಸ್ ಪಕ್ಷದ ಜೊತೆ ಇದೆ ಎಂದು ಕಾಂಗ್ರೆಸ್ ಶಾಸಕ ಶಿವಗಂಗಾ ಬಸವರಾಜ ಹೇಳಿದ್ದಾರೆ. ಜಿಲ್ಲೆಯ ಚನ್ನಗಿರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯ ಪ್ರಕಾಶ್ ರಾಥೋಡ್ ಹೇಳಿದ್ದು ನಿಜ ಇದೆ. ಕಾಂಗ್ರೆಸ್ ಪಕ್ಷ ಎಲ್ಲ ಜಾತಿ ಜನಾಂಗದ ಪಕ್ಷವಾಗಿದೆ. ಜಾತಿ ನೋಡಿ ಅಧಿಕಾರಿಗಳನ್ನು ವರ್ಗಾವಣೆ ಮಾಡುವುದಕ್ಕೆ ಆಗಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಕೆಲ ಸಚಿವರು ಕರೆ ಸ್ವೀಕರಿಸಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಎಲ್ಲ ಸಚಿವರು ಕೂಡ ನನ್ನ ಫೋನ್ ಕಾಲ್ ಸ್ವೀಕರಿಸುತ್ತಿದ್ದಾರೆ ಎಂದರು.
ಸಚಿವ ಎಸ್ಎಸ್ ಮಲ್ಲಿಕಾರ್ಜುನಗೆ ಟಾಂಗ್ ಕೊಟ್ಟ ಶಾಸಕ ಶಿವಗಂಗಾ ಬಸವರಾಜ್
ಕಳೆದ ಚುನಾವಣೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ ಅವರಿಗೆ ಟಿಕೆಟ್ ನೀಡಲಾಗಿತ್ತು. ಒಂದುವರೆ ಲಕ್ಷ ಮತಗಳಿಂದ ಸೋಲು ಕಂಡರು. ಆಪತ್ತಿಗೆ ಆದನೇ ನೆಂಟ್, ಈಗ ಪ್ರತಿಭಾನ್ವಿತ ಯುವಕ ವಿನಯ ಕುಮಾರ ಬಂದಿದ್ದಾರೆ. ಅವರಿಗೆ ಅವಕಾಶ ಆಗಲಿ ಎಂದು ಹೇಳುವ ಮೂಲಕ ಪರೋಕ್ಷವಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್ ಜಿ. ಮಂಜಪ್ಪ ಹಾಗೂಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನಗೆ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಹಿಂದಿನ ಉದ್ದೇಶ ಬಹಿರಂಗಪಡಿಸಿದ ಮಾಜಿ ಸಚಿವ CP ಯೋಗೇಶ್ವರ್
ನಾನು, ನಮ್ಮಣ್ಣ, ನನ್ನ ಮಕ್ಕಳು ಮಾತ್ರ ಶಾಸಕ ಸಂಸದರಾಗಬಾರದು. ಬದಲಿಗೆ ಬ್ಯಾನರ್ ಕಟ್ಟುವಂತಹ ಯುವಕ ಸಹ ಶಾಸಕ ಆಗಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಸ್ಪರ್ಧಿಸಲು ಅದಕ್ಕೆ ನಮ್ಮ ವಿರೋಧವಿಲ್ಲ. ಆದರೆ ರಾಜಕೀಯಕ್ಕೆ ಹೊಸ ಮುಖಗಳು ಬರಲಿ. ವಿನಯಕುಮಾರನಂತವರು ಮುಂದೆ ಪಕ್ಷಕ್ಕೆ ಆಸ್ತಿ ಆಗುತ್ತಾರೆ ಎಂದಿದ್ದಾರೆ.
ವರಿಷ್ಠರು ಹೇಳಿದ ಹಿನ್ನೆಲೆ ಕ್ಷೇತ್ರದಲ್ಲಿ ಓಡಾಡುತ್ತಿರುವೆ: ವಿನಯಕುಮಾರ
ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಹಾಗೂ ಇನ್ಸೈಟ್ಸ್ ಐಎಎಸ್ ತರಬೇತಿ ಕೇಂದ್ರದ ನಿರ್ದೇಶಕ ವಿನಯಕುಮಾರ ಪ್ರತಿಕ್ರಿಯೆ ನೀಡಿದ್ದು, ನನಗೆ ಕಾಂಗ್ರೆಸ್ ಪಕ್ಷದ ವರಿಷ್ಠರು ಹೇಳಿದ ಹಿನ್ನೆಲೆ ಕ್ಷೇತ್ರದಲ್ಲಿ ಓಡಾಡುತ್ತಿರುವೆ. ನನ್ನಂತವರು ಪಕ್ಷಕ್ಕೆ ಬಂದರೆ ಶಾಲು, ಹಾರ ಹಾಕಿ ಸ್ವಾಗತಿಸಬೇಕು. ಆದರೆ ಕೆಲವರು ವಿರೋಧಿಸುತ್ತಿರುವುದು ಈ ದೇಶದ ರಾಜಕೀಯ ದುರಂತ ಎಂದಿದ್ದಾರೆ.
ಇದನ್ನೂ ಓದಿ: ಪಕ್ಷಕ್ಕೆ ದುಡಿದವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್: ಸಚಿವ ಎನ್ ಚಲುವರಾಯಸ್ವಾಮಿ
ನಾನು ಈಗಾಗಲೇ ಇಡಿ ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರ ಸುತ್ತಿದ್ದೇನೆ. ಕೆಲ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡಲು ನಿರ್ಧರಿಸಿದ್ದೇನೆ. ನಾನು ಇದೇ ದಾವಣಗೆರೆ ತಾಲೂಕಿನ ಕಕ್ಕಗೋಳ್ ಗ್ರಾಮದ ನಿವಾಸಿ ದೇವರಹಳ್ಳಿ ನವೋದಯ ಶಾಲೆಯ ವಿದ್ಯಾರ್ಥಿ. ನನಗೆ ಟಿಕೆಟ್ ಸಿಕ್ಕೆ ಸಿಗುತ್ತದೆ ಎಂಬ ವಿಶ್ವಾಸ ಇದೆ. ನಾನು ಮೊದಲಿನಿಂದಲೂ ಕಾಂಗ್ರೆಸ್ ಪಕ್ಷದ ಕಟ್ಟಾಳು. ಈಗಲೂ ಸಹ ಕಾಂಗ್ರೆಸ್ ಕಟ್ಟಾಳು ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.