
ದಾವಣಗೆರೆ, ನವೆಂಬರ್ 29: ಅಡಿಕೆಗೆ ಈಗ ಚಿನ್ನದ ಬೆಲೆ ಬಂದಿದೆ. ಒಂದು ಕ್ವಿಂಟಾಲ್ ಅಡಿಕೆ ಬೆಲೆ ಬರೋಬರಿ 65 ಸಾವಿರ ರೂ. ಆದರೆ ಅಡಿಕೆ ಸಿಪ್ಪೆ (Arecanut Husk) ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ. ಅಡಿಕೆ ಸುಲಿದ ಮೇಲೆ ಸಿಪ್ಪೆ ರಸ್ತೆಗೆ ಸುರುವಿ ಬೆಂಕಿ ಹಚ್ಚುತ್ತಾರೆ. ಹೀಗೆ ಬೇಡವಾದ ವಸ್ತುವಿನಿಂದ ಬಟ್ಟೆ ತಯಾರಿಸಬಹುದು. ಕುರ್ತಾ ಹೊಲಿಸಿಕೊಳ್ಳಬಹುದು. ಅಷ್ಟೇ ಅಲ್ಲ ತಿಪ್ಪೆ ಸೇರುವ ಸಿಪ್ಪೆಯಿಂದ ಸ್ಯಾನಿಟರಿ ಪ್ಯಾಡ್ (Sanitary Pads) ಸಹ ಮಾಡಬಹುದು. ವಿದ್ಯಾರ್ಥಿಗಳ ಇದೊಂದು ಸಂಶೋಧನೆ ಅಚ್ಚರಿಗೆ ಕಾರಣವಾಗಿದೆ.
ಸದ್ಯ ಅಡಿಕೆಗೆ ಬಂಗಾರದ ಬೆಲೆ ಇದೆ. ಅಡಿಕೆ ಸಿಪ್ಪೆ ಮಾತ್ರ ತಿಪ್ಪೆಗೆ ಹೋಗುತ್ತದೆ. ಇಂತಹ ಸಿಪ್ಪೆ ಬಳಸಿಕೊಂಡು ದಾವಣಗೆರೆ ಬಾಪೂಜಿ ತಾಂತ್ರಿಕ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸಂಶೋಧನೆ ಮಾಡಿದ್ದಾರೆ. ಇದರಿಂದ ತಿಪ್ಪೆ ಸೇರುವ ಅಡಿಕೆ ಸಿಪ್ಪೆಗೆ ಮರ್ಯಾದೆ ತರುವ ಕೆಲಸ ಮಾಡಿದ್ದಾರೆ.
ಇದನ್ನೂ ಓದಿ: ಬೀಸುವ ಗಾಳಿಯಿಂದಲೇ ಬಾಟಲ್ಗೆ ನೀರು ತುಂಬಿಕೊಳ್ಳಬಹುದು! ದಾವಣಗೆರೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳ ವಿಶಿಷ್ಟ ಸಂಶೋಧನೆ
ಅಡಿಕೆ ಸಿಪ್ಪೆ ಮೇಲೆ ಹಲವಾರು ಸಂಶೋಧನೆ ನಡೆಸಿದ್ದಾರೆ. ಕೆಲ ವರ್ಷಗಳಿಂದ ಅಡಿಕೆ ಸಿಪ್ಪೆ ಮೇಲೆ ಸಾಗಿರುವ ಸಂಶೋಧನೆಗಳು ಅಂತಿಮ ಘಟ್ಟಕ್ಕೆ ತಲುಪಿದೆ. ಅಡಿಕೆ ಸಿಪ್ಪೆಯ ನಾರು ಬಳಸಿ ಶರ್ಟ್, ಮಹಿಳೆಯರ ಕುರ್ತಾ ಹೊಲಿಸಬಹುದು. ಸಿಪ್ಪೆಯಲ್ಲಿ ತಯಾರಿಸಿದ ಕಾಂಪೋಜಿಟ್ಸ್ ಮತ್ತು ಮಹಿಳೆಯರು ಬಳಸುವ ಸ್ಯಾನಿಟರಿ ಪ್ಯಾಡ್ ಸಹ ಸಿದ್ಧಪಡಿಸಬಹುದು. ಸದ್ಯ 10 ಪ್ಯಾಡ್ ಸಿದ್ಧಗೊಂಡಿವೆ.
ಅಡಿಕೆ ಕಾಲೇಜಿನ ಟೆಕ್ಸ್ ಟೈಲ್ ತಂತ್ರಜ್ಞಾನ ವಿಭಾಗದಲ್ಲಿ ಅಡಿಕೆ ನಾರಿನಲ್ಲಿ ಬಿಟ್ಟೆ ತಯಾರಿಸುವುದು, ಸ್ಪಿನ್ನಬಲ್ ಎಂಬ ವೇಸ್ಟ್ನ್ನು ಬಳಕೆ ಮಾಡಿ ವುಡನ್ ಶೀಟ್‌ಗಳನ್ನು ರೆಡಿ ಮಾಡಿದ್ದಾರೆ. ಈ ಕ್ಲಿಷ್ಟಕರ ಸಂಶೋಧನೆಯಲ್ಲಿ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಟೆಕ್ಸ್ ಟೈಲ್ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ. ವೈ.ಎನ್. ದಿನೇಶ್ ನೇತೃತ್ವದಲ್ಲಿ ಪ್ರಾಧ್ಯಾಪಕ ಡಾ.ಎಸ್. ಎಂ. ಚಂದ್ರಶೇಖರ್, ಡಾ.ಕೆ.ಬಿ. ರವೀಂದ ಸೇರಿದಂತೆ ವಿಭಾಗದ ವಿದ್ಯಾರ್ಥಿಗಳ ತಂಡದ ಪರಿಶ್ರಮ ಇದರ ಹಿಂದಿದೆ.
ಮೊದಲ ಪ್ರಯತ್ನದ ಫಲವಾಗಿ ಅಡಕೆ ನಾರಿನಲ್ಲಿ ಶರ್ಟ್, ಮಹಿಳೆಯರು ಧರಿಸುವ ಕುರ್ತಾ, ವುಡನ್ ಶೀಟ್ ಗಳನ್ನು ಸಿದ್ಧಪಡಿಸಿದ್ದಾರೆ. ಅಲ್ಲದೆ ಶೇ.30ರಷ್ಟು ಅಡಿಕೆ ನಾರನ್ನು ಹತ್ತಿ ನೂಲಿನೊಂದಿಗೆ ಬೆರೆಸಿ ಮೃದುವಾದ ಬಟ್ಟೆಗಳನ್ನು ಸಿದ್ದಪಡಿಸಲಾಗುತ್ತಿದೆ.
ಕಸ ಹಾಗೂ ಅಡಿಕೆ ಸಿಪ್ಪೆ ಬಳಕೆ ಮಾಡಿ ಕಸದಂತೆ ತಯಾರು ಮಾಡಿ ವುಡನ್ ಶೀಟ್‌ಗಳನ್ನು ಸಿದ್ಧಪಡಿಸಲಾಗಿದೆ. ಇನ್ನು ನಾರನ್ನು ಸಿದ್ಧಪಡಿಸಲು ಮತ್ತು ಅಡಿಕೆ ಸಿಪ್ಪೆಯಿಂದ ಅಡಿಕೆ ಫೈಬರ್ ಬೇರ್ಪಡಿಸುವ ಯಂತ್ರ ಕೂಡ ಇವರೇ ಕಂಡು ಹಿಡಿದಿದ್ದಾರೆ. ಇದೇ ಯಂತ್ರದ ಮೂಲಕ ಅಡಿಕೆ ಸಿಪ್ಪೆ ಹಾಕಿ ನೂಲಾಗಿ ಪರಿವರ್ತಿಸಿ ಬಟ್ಟೆಯಾಗಿ ಮಾಡಲಾಗುತ್ತಿದೆ. 2017 ರಿಂದ ಆರಂಭವಾದ ಸಂಶೋಧನೆ ಇಲ್ಲಿಗೆ ಬಂದು ನಿಂತಿದೆ. ಈಗ ಸರ್ಕಾರ ಇಂತಹ ಸಂಶೋಧನೆ ಗುರುತಿಸಬೇಕಿದೆ.
ಅಂಗಿ, ಕುರ್ತಾ, ವುಡನ್ ಶೀಟ್ ಸಿದ್ಧಪಡಿಸಲು ಮೊದಲು ಒಣಗಿದ ಅಡಿಕೆ ಸಿಪ್ಪೆಗಳನ್ನು ನೀರಿನಲ್ಲಿ ನೆನಸಿಟ್ಟ ಮೂರು ದಿನದ ಬಳಿಕ ಸಿಪ್ಪೆಯ ನಾರು ಅಥವಾ ಫೈಬರ್ ಸಂಪೂರ್ಣ ಬೇರ್ಪಡುತ್ತದೆ. ಸಿಪ್ಪೆಯಿಂದ ಎಳೆಎಳೆಯಾಗಿ ಬೇರ್ಪಟ್ಟ ನಾರನ್ನು ಮತ್ತೊಮ್ಮೆ ಚೆನ್ನಾಗಿ ಒಣಗಿಸಿ, ಬಳಿಕ ಅದನ್ನು ಬೋ ರೂಮ್‌ಗೆ ಕೊಂಡೊಯ್ದು, ನಾರಿನ ಪ್ರತಿ ಎಳೆಯನ್ನೂ ಕೂಂಬ್ ಮಾಡಿ, ನೇಯ್ಕೆಗೆ ಯೋಗ್ಯವಾದ ನಾರನ್ನು ಪ್ರತ್ಯೇಕಿಸಲಾಗುತ್ತದೆ. ನಂತರ ನಾರನ್ನು ದಾರವನ್ನಾಗಿ ಮಾಡಿಕೊಂಡು, ಆ ದಾರವನ್ನು ನೇಯ್ಕೆಗೆ ಬಳಸಲಾಗುತ್ತದೆ. ಬ್ಲೋ ರೂಮಿನಲ್ಲಿ ಎಲ್ಲೋಯಿಂಗ್ ಮಾದರಿ ಯಂತ್ರವು, ಅಡಕೆ ಸಿಪ್ಪೆ ಫೈಬರ್‌ಗಳನ್ನು ಒಂದೊಂದಾಗಿ ಪ್ರತ್ಯೇಕಿಸಿ, ಕಸ ಕಡ್ಡಿ ಮತ್ತು ಅನುಪಯುಕ್ತ ಅಂಶಗಳನ್ನು ಬೇರ್ಪಡಿಸುತ್ತದೆ. ಬಳಿಕ ಕಾರ್ಡಿಂಗ್ ಯಂತ್ರವು ಫೈಬರ್‌ಗಳನ್ನು ಕೂಂಬ್ ಮಾಡಿ ನೇರವಾಗಿಸುತ್ತದೆ. ಕೇವಲ ಅಡಕೆ ನೂಲು ಅಥವಾ ದಾರ ಬಳಸಿ ತಯಾರಿಸುವ ಬಟ್ಟೆ ಒರಟಾಗುತ್ತದೆ. ಮೃದುತ್ವ ನೀಡಲು ಅಡಕೆ ನೂಲಿನ ಜತೆ ಹತ್ತಿದಾರ ಬೆರೆಸಿದ್ರೇ ಮಾತ್ರ ಈ ಉತ್ಪನ್ನಗಳು ಸಿದ್ಧವಾಗುತ್ತವೆ.
ಇದನ್ನೂ ಓದಿ: ವಿಶ್ವ ದಾಖಲೆಗಾಗಿ 7 ಕಿ.ಮೀ ಉದ್ದದ ಕನ್ನಡ ಧ್ವಜ; ವಿಶಿಷ್ಟ ರಾಜ್ಯೋತ್ಸವಕ್ಕೆ ಸಾಕ್ಷಿಯಾದ ದಾವಣಗೆರೆ
200 ರೂ. ವೆಚ್ಚದಲ್ಲಿ ಒಂದು ಮೀಟರ್ ಬಟ್ಟೆ ತಯಾರಾಗುತ್ತದೆ. ಜೊತೆಗೆ ಈಗಾಗಲೇ 10 ಸಾವಿರ ಸ್ಯಾನಿಟರಿ ಪ್ಯಾಡ್ ಸಹ ಸಿದ್ಧ ಪಡಸಲಾಗಿದೆ. ತಿಪ್ಪೆಗೆ ಬಿದ್ದು ಸರ್ವನಾಶವಾಗಿ ಹೋಗುವ ಅಡಿಕೆ ಸಿಪ್ಪೆಗೆ ಡಿಮ್ಯಾಂಡ್ ಬರುತ್ತಿದೆ. ಆದರೆ ಸರ್ಕಾರ ಸಂಕಲ್ಪ ಮಾಡಬೇಕಿದೆ. ಮಾರುಕಟ್ಟೆಯಲ್ಲಿ ಇರುವ ಬಟ್ಟೆಗಿಂತ ಹಾಗೂ ಸ್ಯಾನಿಟರಿ ಪ್ಯಾಡ್ಗಿಂತ ಗುಣಮಟ್ಟ ಹಾಗೂ ದರದ ಪೈಪೋಟಿ ಮಧ್ಯೆ ಅಡಿಕೆ ಸಿಪ್ಪೆ ಗೆಲ್ಲುತ್ತಾ ಎಂಬುದು ಈಗಿರುವ ಪ್ರಶ್ನೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.