‘ಕೈ’ ನಾಯಕರಿಗೆ ಶಾಕ್​​ ಕೊಟ್ಟ ಖಾಕಿ: ದಾವಣಗೆರೆಯಲ್ಲಿ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಕೋರರು!

ಸಚಿವರ ಆಪ್ತರೇ ಭಾಗಿಯಾಗಿದ್ದ ಬೃಹತ್ ಡ್ರಗ್ಸ್ ದಂಧೆಯನ್ನು ದಾವಣಗೆರೆ ಪೊಲೀಸರು ಭೇದಿಸಿದ್ದಾರೆ. ಪ್ರಕರಣ ಸಂಬಂಧ ಒಟ್ಟು ಎಂಟು ಮಂದಿಯನ್ನು ಬಂಧಿಸಲಾಗಿದ್ದು, ಲಕ್ಷಾಂತರ ಮೌಲ್ಯದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ನಿರ್ಭೀತಿಯಿಂದ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿರೋದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಕೈ ನಾಯಕರಿಗೆ ಶಾಕ್​​ ಕೊಟ್ಟ ಖಾಕಿ: ದಾವಣಗೆರೆಯಲ್ಲಿ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಕೋರರು!
ಅನ್ವರ್ ಬಾಷಾ
Edited By:

Updated on: Dec 29, 2025 | 4:54 PM

ದಾವಣಗೆರೆ, ಡಿಸೆಂಬರ್​​ 29: ರಾಜ್ಯ ಸರ್ಕಾರದಲ್ಲಿನ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಯಲ್ಲಿ ಭಾಗಿಯಾಗಿರೋದನ್ನು ದಾವಣಗೆರೆ ಪೊಲೀಸರು ಬಟಾಬಯಲು ಮಾಡಿದ್ದಾರೆ. ಡಿ.23ರಂದು ನಡೆದಿದ್ದ ಡ್ರಗ್ಸ್ ದಂಧೆಕೋರರ ಗ್ಯಾಂಗ್​​ ಮೇಲಿನ ದಾಳಿ ಪ್ರಕರಣ ಸಂಬಂಧ ಮತ್ತೊಬ್ಬ ಸಚಿವರ ಪರಮಾಪ್ತನನ್ನು ಖಾಕಿ ಹೆಡೆಮುರಿ ಕಟ್ಟಿದೆ. ಆ ಮೂಲಕ ಸಿಂಥೆಟಿಕ್ ಡ್ರಗ್ಸ್ ಕೇಸ್‌ನಲ್ಲಿ ಈವರೆಗೆ ಒಟ್ಟು 8 ಆರೋಪಿಗಳ ಬಂಧನ ಆದಂತಾಗಿದೆ.

ದಾವಣಗೆರೆ ಡ್ರಗ್ಸ್‌ ಕೇಸ್‌ನಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​​ ಪಕ್ಷದ ಘಟಾನುಘಟಿಗಳೇ ಬಂಧನ ಆಗಿರೋದು ಜನ ಹುಬ್ಬೇರಿಸುವಂತೆ ಮಾಡಿದೆ. ಡಿ.23ರಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್‌ ಮೇಲೆ ಪೊಲೀಸರ ದಾಳಿ ವೇಳೆ ಕಾಂಗ್ರೆಸ್ ಮುಖಂಡ, ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿ ನಾಲ್ವರ ಬಂಧನವಾಗಿತ್ತು. ಬಂಧಿತರಿಂದ 90 ಗ್ರಾಂ ಎಂಡಿಎಂಎ , ಸಿಂಥೆಟಿಕ್ ಸೇರಿದಂತೆ ಲಕ್ಷಾಂತರ ಮೌಲ್ಯದ ಡ್ರಗ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ಎಂಜಿನಿಯರ್ ಮಾಸ್ಟರ್ ಮೈಂಡ್?

ಇದೇ ಪ್ರಕರಣದಲ್ಲೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾ ಕೂಡ ಅರೆಸ್ಟ್‌ ಆಗಿದ್ದಾರೆ. ಜೊತೆಗೆ ಪಾರಸ್‌, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನು ಕೂಡ ಬಂಧಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ನಿರ್ಭೀತಿಯಿಂದ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿದ್ದಾರೆ. ಎಸ್ಪಿ ಉಮಾ ಪ್ರಶಾಂತ್‌ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಡ್ರಗ್ಸ್ ಹಾವಳಿ​ ನಿಯಂತ್ರಿಸಲು ಸರ್ಕಾರಕ್ಕೆ ಧಮ್ ಇಲ್ಲ’

ಕರ್ನಾಟಕಕ್ಕೆ 500-600 ಕೋಟಿ ಮೌಲ್ಯದ ಡ್ರಗ್ಸ್ ಬಂದಿದ್ದು, ಡ್ರಗ್ಸ್ ಹಂಚಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಇನ್ನು ಎರಡು ದಿನಗಳಲ್ಲಿ ಎಲ್ಲಾ ಡ್ರಗ್ಸ್​ ವಿಲೇವಾರಿ ಆಗಲಿದೆ. ಡ್ರಗ್ಸ್ ಹಾವಳಿ​ ನಿಯಂತ್ರಿಸಲು ಈ ಸರ್ಕಾರಕ್ಕೆ ಧಮ್, ತಾಕತ್ತು ಇಲ್ಲ. ಆಂಧ್ರ, ತೆಲಂಗಾಣ ಪೊಲೀಸರು ದಾಳಿ ಮಾಡೋದು ಬಾಕಿ ಇದ್ದು, ಬೇರೆ ರಾಜ್ಯದವರೇ ನಮ್ಮನ್ನು ಆಳುತ್ತಿದ್ದಾರೆ. ಹೊರ ರಾಜ್ಯದ ಪೊಲೀಸರು ನಮ್ಮ ಕಾನೂನು ವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಅಶೋಕ್​​ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.