AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂತ್ರಸ್ತರ ಗೌಪ್ಯತೆ ಇನ್ನು ಕಡ್ಡಾಯ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹತ್ವದ ಬದಲಾವಣೆ ತಂದ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ

ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಅಪ್ರಾಪ್ತರ ಗುರುತು ರಕ್ಷಣೆಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸುಪ್ರೀಂಕೋರ್ಟ್ ನಿರ್ದೇಶನದಂತೆ, ಸಂತ್ರಸ್ತರ ಹೆಸರು, ವಿಳಾಸ ಸಾರ್ವಜನಿಕವಾಗಿ ಬಹಿರಂಗಪಡಿಸುವಂತಿಲ್ಲ. ಎಫ್‌ಐಆರ್ ಹಾಗೂ ಎಲ್ಲಾ ದಾಖಲೆಗಳಲ್ಲಿ ಸಾಂಕೇತಿಕ ಹೆಸರನ್ನು ಬಳಸಬೇಕು ಮತ್ತು ಮುಚ್ಚಿದ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಇದು ಸಂತ್ರಸ್ತರ ಸಾಮಾಜಿಕ ಮುಜುಗರ ತಪ್ಪಿಸಿ, ನ್ಯಾಯಾಂಗ ಹೋರಾಟಕ್ಕೆ ನೆರವಾಗಲಿದೆ.

ಸಂತ್ರಸ್ತರ ಗೌಪ್ಯತೆ ಇನ್ನು ಕಡ್ಡಾಯ: ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಹತ್ವದ ಬದಲಾವಣೆ ತಂದ ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ
ಸಾಂದರ್ಭಿಕ ಚಿತ್ರ
Shivaprasad B
| Edited By: |

Updated on: Feb 17, 2026 | 3:58 PM

Share

ಬೆಂಗಳೂರು, ಫೆ.17: ಮಹಿಳೆಯರು ಮತ್ತು ಅಪ್ರಾಪ್ತರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ಪ್ರಕರಣಗಳ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸಂತ್ರಸ್ತರ ಗುರುತನ್ನು ರಕ್ಷಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಅವರು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಸುಪ್ರೀಂಕೋರ್ಟ್ ನೀಡಿದ ನಿರ್ದೇಶನಗಳನ್ನು ಉಲ್ಲೇಖಿಸಿ ಈ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತರಲಾಗಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರು ಅಥವಾ ಅಪ್ರಾಪ್ತ ಸಂತ್ರಸ್ತರ ಹೆಸರು, ವಿಳಾಸ ಹಾಗೂ ಯಾವುದೇ ರೀತಿಯ ಗುರುತನ್ನು ಸಾರ್ವಜನಿಕವಾಗಿ ಅಥವಾ ದಾಖಲೆಗಳಲ್ಲಿ ಬಹಿರಂಗಪಡಿಸುವಂತಿಲ್ಲ.

ದೂರು ಸ್ವೀಕರಿಸಿದ ನಂತರ ಠಾಣಾಧಿಕಾರಿ ಅಥವಾ ತನಿಖಾಧಿಕಾರಿಯು ಮೂಲ ಹೆಸರನ್ನು ಬದಲಾಯಿಸಿ, ಸಾಂಕೇತಿಕ ಹೆಸರನ್ನು (Pseudo Name) ಬಳಸಬೇಕು. FIR ನಲ್ಲೂ ಈ ಬದಲಾದ ಹೆಸರನ್ನೇ ನಮೂದಿಸಬೇಕು ಮತ್ತು ಜತೆಗೆ ಇದರಲ್ಲಿ ‘ಹೆಸರು ಬದಲಿಸಲಾಗಿದೆ’ ಎಂದು ಸ್ಪಷ್ಟಪಡಿಸಬೇಕು. ನ್ಯಾಯಾಲಯಕ್ಕೆ ಸಲ್ಲಿಸುವ ದೂರು ಪ್ರತಿ, ಮಹಜರು ವರದಿ ಹಾಗೂ ಚಾರ್ಜ್‌ಶೀಟ್ (ದೋಷಾರೋಪ ಪಟ್ಟಿ) ಸೇರಿದಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ‘ಮುಚ್ಚಿದ ಲಕೋಟೆಯಲ್ಲಿ’ (Sealed Cover) ಸಲ್ಲಿಸುವುದು ಇನ್ನು ಮುಂದೆ ಕಡ್ಡಾಯವಾಗಿದೆ.

ಇದನ್ನೂ ಓದಿ: ಚಾಮರಾಜನಗರ: ತನಗೆ ತಾನೇ ಬೆಂಕಿ ಹಚ್ಚಿಕೊಂಡ ಕುಡುಕ! ಮುಂದೇನಾಯ್ತು ನೋಡಿ

ಕೇವಲ ನ್ಯಾಯಾಲಯದಲ್ಲಿ ಮಾತ್ರವಲ್ಲದೆ, ತನಿಖೆಯ ಯಾವುದೇ ಹಂತದಲ್ಲೂ ಸಂತ್ರಸ್ತರ ವಿವರಗಳು ಸೋರಿಕೆಯಾಗದಂತೆ ತನಿಖಾಧಿಕಾರಿಗಳು ಎಚ್ಚರ ವಹಿಸಬೇಕು. ಅನೇಕ ಪ್ರಕರಣಗಳಲ್ಲಿ ಸಂತ್ರಸ್ತರ ಗುರುತು ಬಹಿರಂಗವಾಗುವುದರಿಂದ ಅವರು ಸಾಮಾಜಿಕವಾಗಿ ಮುಜುಗರ ಮತ್ತು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದರು. ಇದು ಅವರ ನ್ಯಾಯಾಂಗ ಹೋರಾಟದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿತ್ತು. ಸುಪ್ರೀಂಕೋರ್ಟ್‌ನ ಆಶಯದಂತೆ ಸಂತ್ರಸ್ತರಿಗೆ ಸಂಪೂರ್ಣ ಸುರಕ್ಷತೆ ನೀಡಲು ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ