AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವೆಲ್ಲಾ ಇಷ್ಟಪಟ್ಟು ತಿನ್ನೋ ಮದ್ದೂರು ವಡೆ ಹುಟ್ಟಿದ್ದು ಹೇಗೆ ಗೊತ್ತಾ? ಇಲ್ಲಿದೆ ರೋಚಕ ಕಥೆ!

ನೀವೆಲ್ಲರೂ ಇಷ್ಟಪಟ್ಟು ತಿನ್ನುವ ಪ್ರಸಿದ್ಧ ಮದ್ದೂರು ವಡೆ ಹುಟ್ಟಿದ್ದು ಹೇಗೆ ಗೊತ್ತಾ? ಸುಮಾರು 1917ರಲ್ಲಿ ಮದ್ದೂರು ರೈಲು ನಿಲ್ದಾಣದ ಉಪಾಹಾರ ಗೃಹದಲ್ಲಿ ರೈಲು ಬರುವ ಅವಸರದಲ್ಲಿ ಆಕಸ್ಮಿಕವಾಗಿ ಈ ಹೊಸ ತಿಂಡಿಯನ್ನು ಸಿದ್ಧಪಡಿಸಲಾಯಿತು. ರಾಮಚಂದ್ರ ಬುಧ್ಯ ಅವರ ಈ ಪ್ರಯೋಗ ಇಂದು ಮೈಸೂರು ರಾಜಮನೆತನದ ಮೆಚ್ಚುಗೆ ಪಡೆದು, ನೂರು ವರ್ಷ ಕಳೆದರೂ ಕರ್ನಾಟಕದ ಮನೆಮಾತಾಗಿ ಜನರ ನಾಲಿಗೆಯ ಮೇಲೆ ಅಚ್ಚಳಿಯದೆ ಉಳಿದಿದೆ.

ನೀವೆಲ್ಲಾ ಇಷ್ಟಪಟ್ಟು ತಿನ್ನೋ ಮದ್ದೂರು ವಡೆ ಹುಟ್ಟಿದ್ದು ಹೇಗೆ ಗೊತ್ತಾ? ಇಲ್ಲಿದೆ ರೋಚಕ ಕಥೆ!
ಮದ್ದೂರು ವಡೆImage Credit source: gettyimages.com
ಭಾವನಾ ಹೆಗಡೆ
|

Updated on: Nov 06, 2026 | 11:23 AM

Share

ಮುಖ್ಯಾಂಶಗಳು

  • ರೈಲು ಬರುವ ಅವಸರದಲ್ಲಿ ಆಕಸ್ಮಿಕವಾಗಿ ಹುಟ್ಟಿಕೊಂಡಿತು ಪ್ರಸಿದ್ಧ ಮದ್ದೂರು ವಡೆ.
  • ಮದ್ದೂರು ರೈಲು ನಿಲ್ದಾಣದ ಉಪಾಹಾರ ಗೃಹದಲ್ಲಿ ರಾಮಚಂದ್ರ ಬುಧ್ಯರಿಂದ ಪ್ರಯೋಗ.
  • ಮೈಸೂರು ರಾಜಮನೆತನದ ಮೆಚ್ಚುಗೆ ಗಳಿಸಿ ನೂರು ವರ್ಷ ದಾಟಿದ ವಡೆ.

ಬಿಸಿ ಬಿಸಿ ಮದ್ದೂರು ವಡೆ, ಅದರ ಘಮಘಮಿಸುವ ಪರಿಮಳ, ಹೊರಭಾಗದ ಗರಿಗರಿ ವಿನ್ಯಾಸ, ಒಳಗಿನ ಮೃದುವಾದ ಹದ… ಅಬ್ಬಾ! ಮದ್ದೂರು ವಡೆಯ ಹೆಸರನ್ನು ಕೇಳಿದರೆ ಸಾಕು ಬಾಯಲ್ಲಿ ನೀರೂರುತ್ತದೆ. ಬೆಂಗಳೂರು-ಮೈಸೂರು ನಡುವೆ ರೈಲಿನಲ್ಲಿ ಪ್ರಯಾಣಿಸುವವರಿಗೆ ಮದ್ದೂರು ವಡೆ ಕೇವಲ ತಿಂಡಿಯಲ್ಲ, ಅದೊಂದು ಮರೆಯಲಾಗದ ನೆನಪು. ಇಂದಿಗೂ ರೈಲಿನಲ್ಲಿ ‘ಮದ್ದೂರು ವಡೆ’ ಎಂಬ ಕೂಗು ಕೇಳಿದಾಕ್ಷಣ ಪ್ರಯಾಣಿಕರು ಮುಗಿಬಿದ್ದು ಖರೀದಿಸುತ್ತಾರೆ. ಆದರೆ ಕರ್ನಾಟಕದ ಮನೆಮಾತಾಗಿರುವ ಈ ಪ್ರಸಿದ್ಧ ತಿಂಡಿ ಹುಟ್ಟಿದ್ದು ಯಾವುದೋ ದೊಡ್ಡ ಹೋಟೆಲ್‌ನ ಕಿಚನ್​ನಲ್ಲಿ ಅಲ್ಲ, ಬದಲಿಗೆ  ಮಂಡ್ಯ ಜಿಲ್ಲೆಯ ಮದ್ದೂರು ರೈಲು ನಿಲ್ದಾಣದ ಪುಟ್ಟ ಉಪಾಹಾರ ಗೃಹದಲ್ಲಿ. ಮದ್ದೂರು ವಡೆಯಂತೆಯೆ ಅದರ ಹಿಂದಿರುವ ಕಥೆಯೂ ಅಷ್ಟೇ ಸ್ವಾರಸ್ಯಕರ!

ರೈಲು ಬರುವ ಅವಸರದಲ್ಲಿ ಹುಟ್ಟಿದ ಹೊಸ ರುಚಿ!

ಬಾಯಿ ರುಚಿಗೆ ಮದ್ದೂರು ವಡೆ ತಿನ್ನುವವರು ಹಲವರು. ಆದರೆ ಅದರ ಇತಿಹಾಸವನ್ನು ಬಲ್ಲವರು ತೀರಾ ವಿರಳ. ಸುಮಾರು 1917ರ ಕಾಲಘಟ್ಟದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ರೈಲು ನಿಲ್ದಾಣದಲ್ಲಿ ರಾಮಚಂದ್ರ ಬುಧ್ಯ ಎಂಬುವವರು ‘ವೆಜಿಟೇರಿಯನ್ ಟಿಫಿನ್ ರೂಮ್’ ಎಂಬ ಉಪಾಹಾರ ಗೃಹ ನಡೆಸುತ್ತಿದ್ದರು. ಬೆಂಗಳೂರು-ಮೈಸೂರು ನಡುವೆ ಸಂಚರಿಸುತ್ತಿದ್ದ ರೈಲುಗಳ ಪ್ರಯಾಣಿಕರಿಗೆ ಇಡ್ಲಿ, ವಡೆ, ಪಕೋಡ ಸೇರಿದಂತೆ ವಿವಿಧ ತಿಂಡಿಗಳನ್ನು ಮಾರಾಟ ಮಾಡುತ್ತಿದ್ದರು.

ಒಂದು ದಿನ ರೈಲು ನಿಗದಿತ ಸಮಯಕ್ಕಿಂತ ಬೇಗ ನಿಲ್ದಾಣಕ್ಕೆ ಆಗಮಿಸುವ ಸೂಚನೆ ಸಿಕ್ಕಿತು. ಆದರೆ ಪ್ರಯಾಣಿಕರಿಗೆ ಮಾರಾಟ ಮಾಡಲು ತಯಾರಿಸುತ್ತಿದ್ದ ಪಕೋಡ ಇನ್ನೂ ಸಿದ್ಧವಾಗಿರಲಿಲ್ಲ. ರೈಲು ನಿಲುಗಡೆ ಅವಧಿಯಲ್ಲಿ ಪ್ರಯಾಣಿಕರಿಗೆ ತಿಂಡಿ ನೀಡದಿದ್ದರೆ ವ್ಯಾಪಾರ ಕೈತಪ್ಪುವ ಆತಂಕವೂ ಇತ್ತು. ಆಗ ರಾಮಚಂದ್ರ ಬುಧ್ಯ ಅವರು ಅಡುಗೆಮನೆಯಲ್ಲಿದ್ದ ಪದಾರ್ಥಗಳನ್ನೆಲ್ಲ ಒಟ್ಟಿಗೆ ಸೇರಿಸಿ ತಕ್ಷಣವೇ ಹೊಸ ತಿಂಡಿಯೊಂದನ್ನು ಸಿದ್ಧಪಡಿಸುವ ಉಪಾಯ ಮಾಡಿದರು. ಸಾಮಾನ್ಯ ಪಕೋಡದಂತೆ ಉಂಡೆ ಮಾಡದೆ, ಮಿಶ್ರಣವನ್ನು ಚಪ್ಪಟೆಯಾಗಿ ತಟ್ಟಿ ಎಣ್ಣೆಯಲ್ಲಿ ಕರಿದರು. ಕಡಿಮೆ ಸಮಯದಲ್ಲಿ ಸಿದ್ಧವಾದ ಈ ಹೊಸ ತಿಂಡಿ ಪ್ರಯಾಣಿಕರ ಮೆಚ್ಚುಗೆ ಗಳಿಸಿತು. ಹೀಗೆ ಅವಸರದಲ್ಲಿ ಹುಟ್ಟಿದ ತಿಂಡಿಯೇ ಮುಂದೆ ಮದ್ದೂರು ವಡೆಯಾಗಿ ಪ್ರಸಿದ್ಧಿ ಪಡೆಯಿತು.

ಅಕ್ಕಿ ಹಿಟ್ಟು, ರವೆ, ಈರುಳ್ಳಿ… ಇದೇ ರುಚಿಯ ಗುಟ್ಟು!

ಮದ್ದೂರು ವಡೆಯ ವಿಶೇಷತೆ ಅದರ ತಯಾರಿಕೆಯಲ್ಲಿದೆ. ಸಾಮಾನ್ಯ ಮೆದುವಡೆ ಅಥವಾ ಮಸಾಲೆ ವಡೆಯಂತೆ ಉದ್ದಿನಬೇಳೆ, ಕಡಲೆಬೇಳೆ ಪ್ರಧಾನ ಪದಾರ್ಥಗಳಲ್ಲ. ಬದಲಿಗೆ ಅಕ್ಕಿ ಹಿಟ್ಟು, ಮೈದಾ ಮತ್ತು ರವೆ ಇದರ ಪ್ರಮುಖ ಆಧಾರ. ಇದಕ್ಕೆ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ, ಗೋಡಂಬಿ ಅಥವಾ ಕಡಲೆಕಾಯಿ, ಇಂಗು ಮತ್ತು ಉಪ್ಪನ್ನು ಸೇರಿಸಲಾಗುತ್ತದೆ. ಕೆಲವರು ಮಸಾಲೆಯ ಪ್ರಮಾಣದಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ತಮ್ಮದೇ ಆದ ರುಚಿಯನ್ನು ನೀಡುತ್ತಾರೆ.

ಎಲ್ಲ ಪದಾರ್ಥಗಳನ್ನು ಸರಿಯಾದ ಪ್ರಮಾಣದಲ್ಲಿ ಬೆರೆಸಿ, ಸ್ವಲ್ಪ ಬಿಸಿ ಎಣ್ಣೆ ಮತ್ತು ನೀರು ಸೇರಿಸಿ ಹದವಾದ ಹಿಟ್ಟನ್ನು ತಯಾರಿಸಲಾಗುತ್ತದೆ. ನಂತರ ಸಣ್ಣ ಉಂಡೆಗಳನ್ನು ಮಾಡಿ ಚಪ್ಪಟೆಯಾದ ವೃತ್ತಾಕಾರಕ್ಕೆ ತಟ್ಟಿ ಕಾದ ಎಣ್ಣೆಯಲ್ಲಿ ಕರಿಯಲಾಗುತ್ತದೆ. ಹೊರಭಾಗ ಗರಿಗರಿಯಾಗಿದ್ದು, ಒಳಭಾಗ ಸ್ವಲ್ಪ ಮೃದುವಾಗಿರುವುದೇ ಇದರ ವಿಶೇಷ. ತೆಂಗಿನಕಾಯಿ ಚಟ್ನಿಯೊಂದಿಗೆ ತಿಂದರೂ, ಬಿಸಿ ಕಾಫಿ ಅಥವಾ ಚಹಾದೊಂದಿಗೆ ಸವಿದರೂ ಇದರ ರುಚಿಯೇ ಬೇರೆ.

ರೈಲು ನಿಲ್ದಾಣದಿಂದ ರಾಜಮನೆತನದವರೆಗೆ ಬೆಳೆದ ಖ್ಯಾತಿ!

ರಾಮಚಂದ್ರ ಬುಧ್ಯ ಅವರ ಪ್ರಯೋಗದಿಂದ ಜನಪ್ರಿಯವಾದ ಮದ್ದೂರು ವಡೆಗೆ ದಿನ ಕಳೆದಂತೆ ಬೇಡಿಕೆ ಹೆಚ್ಚಾಯಿತು. ಅವರು 1917ರಿಂದ 1937ರವರೆಗೆ ರೈಲು ನಿಲ್ದಾಣದ ಉಪಹಾರ ಗೃಹ ನಡೆಸಿದರು. ಬಳಿಕ ಅವರ ಕುಟುಂಬದವರು 1948ರವರೆಗೆ ಈ ವ್ಯಾಪಾರ ಮುಂದುವರಿಸಿದರು. ನಂತರ ಎಚ್.ಡಿ. ಹೆಬ್ಬಾರ್ ಅವರ ಕುಟುಂಬ ಈ ತಿಂಡಿಯ ಪರಂಪರೆಯನ್ನು ಮುಂದುವರಿಸಿ ಅದರ ರುಚಿ ಮತ್ತು ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.

ಮೈಸೂರು ರಾಜಮನೆತನದವರಿಗೂ ಮದ್ದೂರು ವಡೆಯ ರುಚಿ ಇಷ್ಟವಾಗಿತ್ತು ಎಂಬ ಸ್ವಾರಸ್ಯಕರ ಸಂಗತಿಯಿದೆ. ಅರಮನೆಗೂ ಬೆಳ್ಳಿಯ ತಟ್ಟೆಗಳಲ್ಲಿ ವಡೆಗಳನ್ನು ಕಳುಹಿಸಲಾಗುತ್ತಿತ್ತು ಎಂಬ ಉಲ್ಲೇಖಗಳಿವೆ. ಬಳಿಕ ಈ ತಿಂಡಿ ರೈಲು ನಿಲ್ದಾಣದ ವ್ಯಾಪ್ತಿಯನ್ನು ಮೀರಿ ಹೆದ್ದಾರಿಯ ಹೋಟೆಲ್‌ಗಳು, ತಿಂಡಿ ಅಂಗಡಿಗಳು ಮತ್ತು ರಾಜ್ಯದ ವಿವಿಧ ಭಾಗಗಳಿಗೆ ಹರಡಿತು. 1987ರಲ್ಲಿ ಆರಂಭವಾದ ಮದ್ದೂರು ಟಿಫನ್ಸ್ ಕೂಡ ಈ ತಿಂಡಿಯ ಜನಪ್ರಿಯತೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು.

ಇದನ್ನೂ ಓದಿ ಫೈಬರ್ ಅಂಶದ ಕೊರತೆ ಮಲಬದ್ಧತೆ ಮತ್ತು ಜೀರ್ಣಕ್ರಿಯೆ ಸಮಸ್ಯೆಗೆ ಕಾರಣವೇ? ಈ ತಪ್ಪುಗಳನ್ನು ಸರಿಪಡಿಸಿಕೊಳ್ಳಿ

ನೂರು ವರ್ಷ ದಾಟಿದರೂ ಕಡಿಮೆಯಾಗದ ಬೇಡಿಕೆ!

2017ರಲ್ಲಿ ಮದ್ದೂರು ವಡೆಯ ರುಚಿಗೆ ಶತಮಾನವಾಗಿದ್ದರೂ ಇಂದಿಗೂ ಜೀವಂತವಾಗಿದೆ. ಅದೇ ವರ್ಷ ಮದ್ದೂರು ರೈಲು ನಿಲ್ದಾಣದಲ್ಲಿದ್ದ ಐತಿಹಾಸಿಕ ವೆಜಿಟೇರಿಯನ್ ಟಿಫಿನ್ ರೂಮ್ ಕೂಡ ಮುಚ್ಚಲ್ಪಟ್ಟಿತು. ಆದರೆ ಆ ತಿಂಡಿಯ ಜನಪ್ರಿಯತೆ ಮಾತ್ರ ನಿಂತಿಲ್ಲ. ಇಂದು ಮದ್ದೂರು ಪಟ್ಟಣದ ಹಲವು ಹೋಟೆಲ್‌ಗಳು ಮತ್ತು ಅಂಗಡಿಗಳಲ್ಲಿ ವಡೆ ಸಿಗುತ್ತದೆ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುವ ಪ್ರವಾಸಿಗರು ಮದ್ದೂರಿನಲ್ಲಿ ನಿಂತು ವಡೆ ಸವಿಯುವುದು ಒಂದು ಸಂಪ್ರದಾಯದಂತಾಗಿದೆ. ದೇಶದ ವಿವಿಧ ಭಾಗಗಳಿಗೂ ಇದರ ಖ್ಯಾತಿ ಹರಡಿದೆ.

ಒಟ್ಟಿನಲ್ಲಿ, ಸಮಯದ ಅಭಾವದಲ್ಲಿ ಹುಟ್ಟಿದ ಒಂದು ಸಣ್ಣ ಪ್ರಯೋಗ ಇಂದು ಕರ್ನಾಟಕದ ಆಹಾರ ಸಂಸ್ಕೃತಿಯ ಹೆಮ್ಮೆಯ ಗುರುತಾಗಿದೆ. ಒಂದು ರೈಲು ನಿಲ್ದಾಣದ ಪುಟ್ಟ ಉಪಾಹಾರ ಗೃಹದಲ್ಲಿ ಆರಂಭವಾದ ಈ ರುಚಿಯ ಪಯಣ, ತಲೆಮಾರುಗಳನ್ನು ದಾಟಿ ಇಂದಿಗೂ ಮುಂದುವರಿದಿದೆ. ಅವಸರದಲ್ಲಿ ಸಿದ್ಧಪಡಿಸಿದ ತಿಂಡಿಯೊಂದು ಶತಮಾನಕ್ಕೂ ಹೆಚ್ಚು ಕಾಲ ಜನರ ನಾಲಿಗೆಯ ಮೇಲೆ ಉಳಿಯಬಹುದು ಎಂಬುದಕ್ಕೆ ಮದ್ದೂರು ವಡೆಯೇ ಸಾಕ್ಷಿ!

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More