ಬೆಂಗಳೂರಲ್ಲಿ ಒಂದೇ ಕುಟುಂಬದ 7 ಜನರ ಹತ್ಯೆಗೆ ಅಸಲಿಗೆ ಕಾರಣವೇನು ಗೊತ್ತಾ?
ಬೆಂಗಳೂರಿನ ರಾಜಾಜಿನಗರದಲ್ಲಿ ಪತ್ನಿ ಸೇರಿದಂತೆ ಏಳು ಜನರ ಭೀಕರ ಕೊಲೆ ಪ್ರಕರಣ ನಡೆದಿದೆ. ಆರೋಪಿ ಇಂದುಶೇಖರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಸ್ತಿ ವಿಚಾರ ಅಥವಾ ಮಗಳ ಪ್ರೇಮ ಪ್ರಕರಣವೇ ಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. ನಂದಿಬೆಟ್ಟ ಸೇರಿ ಹಲವೆಡೆ ಮೃತದೇಹಗಳು ಪತ್ತೆಯಾಗಿವೆ. ಪೊಲೀಸರಿಂದ ಹೆಚ್ಚಿನ ವಿಚಾರಣೆ ಮುಂದುವರಿದಿದೆ.
ಬೆಂಗಳೂರು, ನವೆಂಬರ್ 06: ಬೆಂಗಳೂರಿನ ರಾಜಾಜಿನಗರದ ಪಾರ್ಶ್ವಸ್ಥಳದಲ್ಲಿ ಪತ್ನಿ ಸೇರಿದಂತೆ ಒಂದೇ ಕುಟುಂಬದ ಏಳು ಜನರ ಭೀಕರ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಈ ಕೃತ್ಯ ಎಸಗಿರುವ ಆರೋಪಿ ಇಂದುಶೇಖರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಗೆ ಪ್ರಮುಖ ಕಾರಣ ಆಸ್ತಿ ವಿವಾದ ಎಂದು ಪ್ರಾಥಮಿಕವಾಗಿ ಕೇಳಿಬರುತ್ತಿದ್ದು, ಮತ್ತೊಂದೆಡೆ ಮಗಳ ಪ್ರೇಮ ಪ್ರಕರಣವೂ ಕಾರಣವಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಸ್ಥಳೀಯರ ಮಾಹಿತಿ ಪ್ರಕಾರ, ಸುಮಾರು 15 ರಿಂದ 20 ದಿನಗಳ ಹಿಂದೆ ಈ ಘಟನೆ ಸಂಭವಿಸಿದೆ. ಆರೋಪಿ ಒಬ್ಬೊಬ್ಬರನ್ನೇ ಕೊಲೆ ಮಾಡಿ, ಮೃತದೇಹಗಳನ್ನು ನಂದಿಬೆಟ್ಟ, ಚಾರ್ಮಾಡಿ ಘಾಟ್ ಮತ್ತು ಚಾಮುಂಡಿಬೆಟ್ಟ ಸೇರಿದಂತೆ ಹಲವು ಕಡೆಗಳಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ. ನಂದಿಬೆಟ್ಟದಲ್ಲಿ ಅವರ ಬಾಮೈದನ ಪುತ್ರನ ಮೃತದೇಹ ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಇಂದುಶೇಖರ್ ಈ ಹಿಂದೆ ಮಾದನಾಯಕನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸರಗಳ್ಳತನ ಪ್ರಕರಣದಲ್ಲೂ ಬಂಧಿತನಾಗಿದ್ದ ಎಂದು ತಿಳಿದುಬಂದಿದೆ. ಕೊಲೆಯ ನಿಖರ ಕಾರಣ ಪತ್ತೆಗೆ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

