ನಿಮ್ಮ ಏರಿಯಾದ ಮೊಬೈಲ್, ಬ್ರಾಡ್‌ಬ್ಯಾಂಡ್ ನೆಟ್ವರ್ಕ್ ಗುಣಮಟ್ಟ ಪರಿಶೀಲನೆಗೆ ಟ್ರಾಯ್ನಿಂದ ನೆಟ್ವರ್ಕ್ ಅನುಭವ್ ಪ್ಲಾಟ್‌ಫಾರ್ಮ್
ಗ್ರಾಹಕರು ತಮ್ಮ ಪ್ರದೇಶದ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ವೇಗವನ್ನು ಪರಿಶೀಲಿಸಲು, ಟೆಲಿಕಾಂ ಸಂಸ್ಥೆಗಳ ನೆಟ್ವರ್ಕ್ ಗುಣಮಟ್ಟವನ್ನು ಹೋಲಿಕೆ ಮಾಡಲು ಹಾಗೂ ಡಿಎನ್‌ಡಿ (DND) ಸೇವೆಗಳನ್ನು ಪಡೆಯಲು ಟ್ರಾಯ್ 'ನೆಟ್‌ವರ್ಕ್ ಅನುಭವ್' ಪ್ಲಾಟ್‌ಫಾರ್ಮ್ ಪರಿಚಯಿಸಿದೆ. ಲೊಕೇಶನ್ ಆಧಾರಿತ ಡ್ಯಾಶ್‌ಬೋರ್ಡ್ ಇದಾಗಿದ್ದು, ತಮ್ಮ ಅನುಭವವನ್ನು ದಾಖಲಿಸಬಹುದು. ಇತರರ ಅನುಭವದ ದತ್ತಾಂಶವನ್ನೂ ನೋಡಬಹುದು.

ನವದೆಹಲಿ, ನವೆಂಬರ್ 6: ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರವಾದ ಟ್ರಾಯ್ (TRAI) ವಿವಿಧ ಪ್ರದೇಶದಲ್ಲಿನ ಮೊಬೈಲ್ ಮತ್ತು ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಕ್ಷಮತೆಯನ್ನು ನೇರವಾಗಿ ಪರಿಶೀಲಿಸಲು ನೆರವಾಗುವ ‘ನೆಟ್‌ವರ್ಕ್ ಅನುಭವ್’ (Network Anubhav) ಎಂಬ ನೂತನ ಡಿಜಿಟಲ್ ಜಿಯೋಸ್ಪೇಷಿಯಲ್ ಪ್ಲಾಟ್‌ಫಾರ್ಮ್ ಅನ್ನು ಪ್ರಾರಂಭಿಸಿದೆ.
ನೆಟ್ವರ್ಕ್ ಅನುಭವ್ ಎಂಬುದು ಸ್ಥಳ-ಆಧಾರಿತ (Location-based) ಡ್ಯಾಶ್‌ಬೋರ್ಡ್ ಆಗಿದೆ. ಟ್ರಾಯ್‌ನ ‘ಮೈಸ್ಪೀಡ್’ (MySpeed) ಮತ್ತು ‘ಮೈಕಾಲ್’ (MyCall) ಆಪ್‌ಗಳು ಹಾಗೂ ಸ್ವತಂತ್ರ ಡ್ರೈವ್ ಟೆಸ್ಟ್‌ಗಳ ಮೂಲಕ ಸಂಗ್ರಹಿಸಿದ ದತ್ತಾಂಶವನ್ನು ಬಳಸಿ, ಗ್ರಾಹಕರು ವಿವಿಧ ಪ್ರದೇಶಗಳಲ್ಲಿನ ಇಂಟರ್ನೆಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗ ಹಾಗೂ ನೆಟ್‌ವರ್ಕ್ ಗುಣಮಟ್ಟವನ್ನು ಉಚಿತವಾಗಿ ಪರಿಶೀಲಿಸಬಹುದು.
ಟೆಲಿಕಾಂ ಆಪರೇಟರ್ಗಳ ಹೋಲಿಕೆ: ಗ್ರಾಹಕರು ತಮ್ಮ ಏರಿಯಾದಲ್ಲಿ ನಿರ್ದಿಷ್ಟವಾಗಿ ಜಿಯೋ, ಏರ್‌ಟೆಲ್, ಬಿಎಸ್ಎನ್‌ಎಲ್ ಸೇರಿದಂತೆ ವಿವಿಧ ಟೆಲಿಕಾಂ ಸಂಸ್ಥೆಗಳ ನೆಟ್‌ವರ್ಕ್ ಸೇವೆಯನ್ನು ಹೋಲಿಕೆ ಮಾಡಿ ನೋಡಬಹುದು. ಅಲ್ಲದೆ, P50 (ಮಧ್ಯಮ ವೇಗ), P80 ಹಾಗೂ P90 ಮಾಪನಗಳ ಮೂಲಕ ಆಯಾ ಪ್ರದೇಶದ ನೈಜ ನೆಟ್‌ವರ್ಕ್ ಸ್ಥಿತಿಯನ್ನು ತಿಳಿಯಬಹುದು.
ಇದನ್ನೂ ಓದಿ: ಲ್ಯಾಪ್‌ಟಾಪ್‌ಗೂ ಚಾರ್ಜ್ ಮಾಡಬಹುದಾದ ಪವರ್ ಬ್ಯಾಂಕ್ ಖರೀದಿಸುವುದು ಹೇಗೆ?
ಡಿಎನ್‌ಡಿ ಮತ್ತು ದೂರು ಸೌಲಭ್ಯ: ಈ ಪ್ಲಾಟ್‌ಫಾರ್ಮ್ ಮೂಲವೇಬ್ ಇಂಟರ್‌ಫೇಸ್ ಮೂಲಕ ‘ಡು ನಾಟ್ ಡಿಸ್ಟರ್ಬ್’ (DND) ಸೇವೆಗಳನ್ನು ಒದಗಿಸುತ್ತದೆ. ಗ್ರಾಹಕರು ಅನಗತ್ಯ ವಾಣಿಜ್ಯ ಕರೆಗಳು/ಸಂದೇಶಗಳನ್ನು (Spam calls & messages) ನಿರ್ಬಂಧಿಸಲು ನೋಂದಾಯಿಸಿಕೊಳ್ಳಬಹುದು ಮತ್ತು ದೂರುಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಬಹುದು.
ಟೆಲಿಕಾಂ ಕಂಪನಿಗಳಿಗೆ ನೆಟ್ವರ್ಕ್ ಅನುಭವ್ ಹೇಗೆ ನೆರವಾಗುತ್ತದೆ?
ಸೇವಾ ಪೂರೈಕೆದಾರರು ತಮ್ಮ ನೆಟ್‌ವರ್ಕ್ ಸಮಸ್ಯೆಯಿರುವ ಪ್ರದೇಶಗಳನ್ನು (Blackspots) ನಿಖರವಾಗಿ ಗುರುತಿಸಿ, ಕರೆಗಳ ಗುಣಮಟ್ಟ ಮತ್ತು ಇಂಟರ್ನೆಟ್ ವೇಗವನ್ನು ಸುಧಾರಿಸಲು ಈ ಸುರಕ್ಷಿತ ಪ್ಲಾಟ್‌ಫಾರ್ಮ್‌ನ ದತ್ತಾಂಶವನ್ನು ಬಳಸಿಕೊಳ್ಳಬಹುದು ಎಂದು ಟ್ರಾಯ್ ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ತಿಳಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಮೊಬೈಲ್ನಲ್ಲಿ ಚಾರ್ಜ್ 100 ರಿಂದ ದಿಢೀರ್ 30-40ಕ್ಕೆ ಇಳಿಯುತ್ತಾ?: ಹಾಗಾದ್ರೆ ಈ ಸಮಸ್ಯೆ ಖಂಡಿತಾ ಇದೆ
ನೆಟ್ವರ್ಕ್ ಅನುಭವ್ ಪ್ಲಾಟ್‌ಫಾರ್ಮ್ ಲಿಂಕ್: anubhav.trai.gov.in
ಹಾಗೆಯೇ, ಮೈಕಾಲ್ ಮತ್ತು ಮೈಸ್ಪೀಡ್ ಸರ್ವಿಸ್ಗಳಿಗೆ ಪ್ರತ್ಯೇಕ ಅಪ್ಲಿಕೇಶನ್ಗಳೂ ಇವೆ. ಮೊಬೈಲ್ನಲ್ಲಿ ಅವನ್ನು ಡೌನ್‌ಲೋಡ್ ಮಾಡಿ, ಟೆಲಿಕಾಂ ಆಪರೇಟರ್ಗಳ ಸರ್ವಿಸ್ ಗುಣಮಟ್ಟದ ದತ್ತಾಂಶವನ್ನು ಟ್ರಾಯ್ಗೆ ಸಲ್ಲಿಸಬಹುದು. ಈ ಮೂಲಕ ನೆಟ್ವರ್ಕ್ ಗುಣಮಟ್ಟ ಹೆಚ್ಚಿಸಲು ಎಲ್ಲರ ಜೊತೆ ನಿಮ್ಮ ಕೊಡುಗೆಯೂ ಸೇರಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




