ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ಎಂಜಿನಿಯರ್ ಮಾಸ್ಟರ್ ಮೈಂಡ್?
ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ ಭೇದಿಸಲಾಗಿದ್ದು, 55.88 ಕೋಟಿ ರೂ. ಮೌಲ್ಯದ MDMA ವಶಪಡಿಸಿಕೊಳ್ಳಲಾಗಿತ್ತು. ಮಹಾರಾಷ್ಟ್ರ ANTF, ಬೆಂಗಳೂರು ಪೊಲೀಸರು ಮತ್ತು ಎನ್‌ಸಿಬಿ ಜಂಟಿ ಕಾರ್ಯಾಚರಣೆಯಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿಗಳು ಪತ್ತೆಯಾಗಿದ್ದು, ಇದೆಲ್ಲದರ ಮಾಸ್ಟರ್ ಮೈಂಡ್ ಕೆಮಿಕಲ್ ಇಂಜಿನಿಯರ್ ಪ್ರಶಾಂತ್ ಪಾಟೀಲ್ ಆಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.

ಬೆಂಗಳೂರು, ಡಿಸೆಂಬರ್ 29: ಮಹಾರಾಷ್ಟ್ರ ANTF, ಬೆಂಗಳೂರು ಪೊಲೀಸರು ಹಾಗೂ ಎನ್‌ಸಿಬಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಲ್ಲಿ ಬೆಂಗಳೂರಿನ (Bengaluru) ಮೂರು ಕಡೆಗಳಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆಯಾಗಿದ್ದು, 55.88 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಆಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು. ಈತ ಕೆಮಿಕಲ್ ಇಂಜಿನಿಯರ್ ಆಗಿದ್ದು, ಡ್ರಗ್ಸ್ ಜಾಲದಲ್ಲಿ ಈತನೇ ಮಖ್ಯಪಾತ್ರಧಾರಿಯೇ ಎಂಬ ಶಂಕೆ ವ್ಯಕ್ತವಾಗಿದೆ.
ಡ್ರಗ್ಸ್ ತಯಾರಿಕೆಗೆ ಬೇಕಾದ ಫಾರ್ಮುಲಾ ನೀಡುತ್ತಿದ್ದನಾ ಪ್ರಶಾಂತ್?
ಬೆಂಗಳೂರಿನಲ್ಲಿ RJ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾದ ಬೆನ್ನಲ್ಲೇ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ ಡ್ರಗ್ಸ್ನ ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್, ಪ್ರಶಾಂತ್ ಯಲ್ಲಪ್ಪ ಪಾಟೀಲ್ರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಪ್ರಶಾಂತ್, ಕೊಲ್ಲಾಪುರ ಮೂಲದವನಾಗಿದ್ದು, ಕೆಮಿಕಲ್ ಇಂಜಿನಿಯರ್ ಆಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಡ್ರಗ್ಸ್ ತಯಾರಿಕೆಗೆ ಬೇಕಾದ ರಾಸಾಯನಿಕಗಳ ಸಾಗಣೆ, ಫಾರ್ಮುಲಾ ನೀಡುವಲ್ಲಿ ಪ್ರಶಾಂತ್ ಪ್ರಮುಖ ಪಾತ್ರ ವಹಿಸಿದ್ದಾನೆಯೇ ಎಂಬ ಅನುಮಾನ ತನಿಖಾಧಿಕಾರಿಗಳ ತಲೆ ಹೊಕ್ಕಿದೆ.
ಈ ಡ್ರಗ್ಸ್ ಜಾಲದಲ್ಲಿ ರಾಜಸ್ಥಾನ ಮೂಲದ ಉದ್ಯಮಿಗಳಾದ ಯೋಗಿರಾಜ್ ಕುಮಾರ್ ಮತ್ತು ನಯಾನ್ ಪವರ್ ಕಿಂಗ್‌ಪಿನ್‌ಗಳಾಗಿದ್ದು, ಫ್ಯಾಕ್ಟರಿಗೆ ಬೇಕಾದ ಯಂತ್ರೋಪಕರಣ ಹಾಗೂ ಕಟ್ಟಡ ವ್ಯವಸ್ಥೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ. ರಾಮಲಾಲ್ ಬಿಷ್ಣೋಯ್ ಪ್ರಶಾಂತ್ ಸೂಚನೆ ಮೇರೆಗೆ ಡ್ರಗ್ಸ್ ತಯಾರಿಸುತ್ತಿದ್ದರೆ, ಯರಪ್ಪನಹಳ್ಳಿಯಿಂದ ವಿವಿಧ ಕಡೆಗಳಿಗೆ ಅಬ್ದುಲ್ ಎಂಬಾತ ಸರಬರಾಜು ಮಾಡುತ್ತಿದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ ಡ್ರಗ್ಸ್ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?: 55.88 ಕೋಟಿ ರೂ. ಮೌಲ್ಯದ MDMA ಸೀಜ್; ನಾಲ್ವರು ಅರೆಸ್ಟ್
ಹೇಗಿತ್ತು ಆರೋಪಿಗಳ ಮಾಸ್ಟರ್ ಪ್ಲಾನ್!
ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣದಲ್ಲಿ ಆರೋಪಿಗಳ ಮಾಸ್ಟರ್ ಪ್ಲಾನ್ ಬಯಲಾಗಿದೆ. ಪೊಲೀಸರಿಗೆ ಅನುಮಾನ ಬಾರದಂತೆ ಡ್ರಗ್ಸ್ ತಯಾರಿಸಲು ಅವರು ಅತೀ ಸೂಕ್ಷ್ಮವಾಗಿ ಸ್ಥಳ ಆಯ್ಕೆ ಮಾಡಿಕೊಂಡಿದ್ದು, ಎರಡು ಪೊಲೀಸ್ ಡಿವಿಷನ್‌ಗಳ ವ್ಯಾಪ್ತಿಯಲ್ಲಿ ಮೂರು ಪೊಲೀಸ್ ಠಾಣೆಗಳ ನಡುವೆ ಸುಮಾರು 8 ಕಿಲೋಮೀಟರ್ ಅಂತರದಲ್ಲಿ ಫ್ಯಾಕ್ಟರಿ ಹಾಗೂ ಗೋಡೌನ್‌ಗಳನ್ನು ಸ್ಥಾಪಿಸಲಾಗಿತ್ತು.
ಅವಲಹಳ್ಳಿ, ಬಾಗಲೂರು ಮತ್ತು ಕೊತ್ತನೂರು ಠಾಣೆಗಳ ಗಡಿ ಭಾಗದಲ್ಲೇ ಫ್ಯಾಕ್ಟರಿಯನ್ನು ತೆರೆಯಲಾಗಿದ್ದು, ಮೂರು ಠಾಣೆಗಳ ಪೊಲೀಸರು ಸುಲಭವಾಗಿ ಪ್ರವೇಶಿಸದ ನಿರ್ಜನ ಪ್ರದೇಶವನ್ನು ಟಾರ್ಗೆಟ್ ಮಾಡಲಾಗಿತ್ತು. ಗಸ್ತು ಕಡಿಮೆ ಇರುವುದನ್ನು ಗಮನಿಸಿ ಆರೋಪಿಗಳು ಧೈರ್ಯವಾಗಿ ಡ್ರಗ್ಸ್ ಉತ್ಪಾದನೆ ನಡೆಸಿದ್ದರು. ಠಾಣಾ ವ್ಯಾಪ್ತಿಗಳ ಗಡಿ ಪ್ರದೇಶಗಳನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಿಕೊಂಡು, ಪೊಲೀಸರ ಕಣ್ಣೆದುರೇ ತಪ್ಪಿಸಿಕೊಳ್ಳುವ ಮಾಸ್ಟರ್ ಪ್ಲಾನ್ ಮೂಲಕ ಫ್ಯಾಕ್ಟರಿ ನಡೆಸಿದ್ದುದಾಗಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ ಬೆಂಗಳೂರಲ್ಲಿ 55 ಕೋಟಿ ರೂ ಡ್ರಗ್ಸ್ ಪತ್ತೆ: ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಜಂಟಿ ಕಾರ್ಯಾಚರಣೆ, ಬೆಂಗಳೂರು ಪೊಲೀಸರ ಸ್ಪಷ್ಟನೆ
ಬೆಂಗಳೂರಿನ ಮೂರು ಕಡೆಗಳಲ್ಲಿ ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ. ಇದು ಕೇವಲ ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಅಲ್ಲದೆ, ಬೆಂಗಳೂರು ಪೊಲೀಸರು ಹಾಗೂ ಎನ್‌ಸಿಬಿ ಅಧಿಕಾರಿಗಳ ಜಂಟಿ ಕಾರ್ಯಾಚರಣೆಯಾಗಿದೆ. ದಾಳಿ ವೇಳೆ ಸುರೇಶ್ ಯಾದವ್ ಮತ್ತು ಮಲ್ಟಾನ್ ರಾಮಲಾಲ್ ಬಿಷ್ಟೋಯಿ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಯರಪ್ಪನಹಳ್ಳಿ ಗ್ರಾಮದ ಮನೆಯೊಂದರಲ್ಲಿ 4.2 ಕಿಲೋಗ್ರಾಂ ಮೆಫೆಡೋನ್, ದ್ರವ ರೂಪದಲ್ಲಿದ್ದ 17 ಕೆಜಿ ಕಚ್ಚಾ ವಸ್ತು ಹಾಗೂ ತಯಾರಿಕಾ ಉಪಕರಣಗಳನ್ನು ಸೀಜ್ ಮಾಡಲಾಗಿದೆ. ಮಾವಿನ ತೋಪಿನಲ್ಲಿ ಮತ್ತೊಂದು ಮಿಕ್ಸರ್ ವಶಪಡಿಸಿಕೊಳ್ಳಲಾಗಿದೆ. ದಾಳಿ ವೇಳೆ ಆರೋಪಿಗಳು ನಿರ್ವಹಿಸುತ್ತಿದ್ದ ಕಾರ್ಖಾನೆ ಪತ್ತೆಯಾಗಿಲ್ಲ. ಬಾಗಲೂರಿನ ಶೆಡ್‌ನಲ್ಲಿ ಸಂಗ್ರಹಿಸಿದ್ದ ಕಚ್ಚಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. SOCO ತಂಡದ ಪರೀಕ್ಷೆಯಲ್ಲಿ MD ಡ್ರಗ್ಸ್ ವಿಶೇಷ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದಿದ್ದು, ಅಶುದ್ಧ ವಸ್ತುವಾಗಿರಬಹುದೆಂದು ತಿಳಿಸಲಾಗಿದೆ. ವಶಪಡಿಸಿಕೊಂಡ ಮೆಫೆಡೋನ್ ಮೌಲ್ಯ 1.2 ಕೋಟಿ ರೂ.ಎಂದು ಅಂದಾಜಿಸಲಾಗಿದೆ.
ಪ್ರದೀಪ್, ಟಿವಿ9 ಬೆಂಗಳೂರು
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:33 am, Mon, 29 December 25




