AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ; 41 ಗ್ರಾಹಕರಿಗೆ ಟೋಪಿ ಹಾಕಿ ಮ್ಯಾನೇಜರ್ ಎಸ್ಕೇಪ್!

ಬೆಂಗಳೂರು ಮಲ್ಲೇಶ್ವರಂನ 15 ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹಿರಿಯ ಮ್ಯಾನೇಜರ್ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿ 3.11 ಕೋಟಿ ರೂ. ವಂಚನೆ ಮಾಡಿದ ಆರೋಪ ಕೇಳಿಬಂದಿದೆ. ವಂಚನೆಗೊಳಪಟ್ಟ 41 ಖಾತೆಗಳನ್ನು ಫ್ರೀಜ್ ಮಾಡಲಾಗಿದ್ದು, ಮಲ್ಲೇಶ್ವರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ನಕಲಿ ಗೋಲ್ಡ್​​ ಲೋನ್​​ ಸೃಷ್ಟಿಸಿ ಕೋಟಿ ಕೋಟಿ ವಂಚನೆ; 41 ಗ್ರಾಹಕರಿಗೆ ಟೋಪಿ ಹಾಕಿ ಮ್ಯಾನೇಜರ್ ಎಸ್ಕೇಪ್!
ನಕಲಿ ಗೋಲ್ಡ್​​ ಲೋನ್​​ ಸೃಷ್ಟಿ ಮಾಡಿ ಕೋಟಿ ಕೋಟಿ ವಂಚನೆ
Vinay Kashappanavar
| Edited By: |

Updated on:Dec 29, 2025 | 12:42 PM

Share

ಬೆಂಗಳೂರು, ಡಿಸೆಂಬರ್ 29: ಬೆಂಗಳೂರಿನ (Bengaluru) ಕೆನರಾ ಬ್ಯಾಂಕ್ ಶಾಖೆಯಲ್ಲಿ ಭಾರೀ ವಂಚನೆ ನಡೆದಿದ್ದು, ನಗರವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಬ್ಯಾಂಕ್​ನ ಹಿರಿಯ ಮ್ಯಾನೇಜರ್ ವಿರುದ್ಧವೇ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿದ ಆರೋಪ ಕೇಳಿಬಂದಿದ್ದು, ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

3 ಕೋಟಿ ರೂ.ಗೂ ಹೆಚ್ಚು ವಂಚನೆ

ಮಲ್ಲೇಶ್ವರಂನ 15ನೇ ಕ್ರಾಸ್‌ನಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ನಕಲಿ ಗೋಲ್ಡ್ ಲೋನ್‌ಗಳನ್ನು ಸೃಷ್ಟಿಸಿ ಕೋಟಿ ಕೋಟಿ ರೂ. ಹಣ ಲೂಟಿ ಮಾಡಿರುವ ಆರೋಪ ಬ್ಯಾಂಕ್‌ನ ಹಿರಿಯ ವ್ಯವಸ್ಥಾಪಕ ಎನ್. ರಘು ವಿರುದ್ಧ ಕೇಳಿಬಂದಿದೆ. 2025ರ ಅಕ್ಟೋಬರ್ 4ರಿಂದ ಡಿಸೆಂಬರ್ 9ರವರೆಗೆ ಒಟ್ಟು 41 ಗ್ರಾಹಕರ ಖಾತೆಗಳಲ್ಲಿ ಚಿನ್ನವೇ ಇರದೆ ನಕಲಿ ಗೋಲ್ಡ್ ಲೋನ್‌ಗಳನ್ನು ಓಪನ್ ಮಾಡಿ, ಸುಮಾರು 3.11 ಕೋಟಿ ರೂ. ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎನ್ನಲಾಗಿದೆ.

ವಯೋವೃದ್ಧರು, ಪಿಂಚಣಿದಾರರು, ಅರ್ಚಕರು ಹಾಗೂ ಹೋಲ್‌ಸೇಲ್ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿದ ಆರೋಪವಿದ್ದು, ಬ್ಯಾಂಕ್ ಕೆಲಸಕ್ಕೆ ಅಗತ್ಯವೆಂದು ಸುಳ್ಳು ಹೇಳಿ ಅವರಿಂದ ಒಟಿಪಿ ಮತ್ತು ಚೆಕ್ ಪಡೆದು ನಂಬಿಕೆ ದ್ರೋಹ ಮಾಡಲಾಗಿದೆ. ಗ್ರಾಹಕರಿಗೆ ತಿಳಿಯದೇ ಅವರ ಖಾತೆಗಳಲ್ಲಿ ಗೋಲ್ಡ್ ಲೋನ್ ತೆರೆದು ಹಣವನ್ನು ಡ್ರಾ ಮಾಡಿ ತನ್ನ ಖಾತೆಗೆ ವರ್ಗಾಯಿಸಿಕೊಂಡು ಎಸ್ಕೇಪ್ ಆಗಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಹೆಚ್ಚಿನ ಮಾಹಿತಿಗೆ ಈ ವೀಡಿಯೋ ನೋಡಿ

ಗ್ರಾಹಕರು ಎಚ್ಚರದಿಂದಿರುವಂತೆ ಸೂಚನೆ

ಈಗಾಗಲೇ ಕೆನರಾ ಬ್ಯಾಂಕ್ 41 ಖಾತೆಗಳನ್ನು ಫ್ರೀಜ್ ಮಾಡಿದ್ದು, ಯಾವುದೇ ಚಿನ್ನವಿಲ್ಲದೇ ಗ್ರಾಹಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಈ ಘಟನೆಯ ನಂತರ ತಮ್ಮ ಖಾತೆಗಳಲ್ಲಿ ಯಾವುದೇ ಅನುಮಾನಾಸ್ಪದ ಲೋನ್ ಇದೆಯೇ ಎಂಬುದನ್ನು ತಕ್ಷಣ ಪರಿಶೀಲಿಸುವಂತೆ ಗ್ರಾಹಕರಿಗೆ ಸೂಚನೆ ನೀಡಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:26 am, Mon, 29 December 25