ವಾರ ಪೂರ್ತಿ ದುಡಿಮೆ ಮಾಡಿ ಒಂದು ದಿನ ಸಮಾಜ ಸೇವೆಗೆ ಮುಡಿಪಾಗಿಟ್ಟ ದಾವಣಗೆರೆ ಯುವಕರು
ದಾವಣಗೆರೆಯ ಯುವ ಬ್ರಿಗೇಡ್ ಯುವಕರು ಪ್ರತಿ ವಾರಕ್ಕೆ ಒಂದು ದಿನವನ್ನು ಸಮಾಜದ ಸ್ವಚ್ಚತೆಗೆ ಮುಡಿಪಾಗಿಟ್ಟಿದ್ದಾರೆ. ತಾನಾಯಿತು ತನ್ನ ಕೆಲಸವಾಯುತು ಎನ್ನುವ ಈ ಕಾಲದಲ್ಲಿ ವಾರ ಪೂರ್ತಿ ಕೆಲಕ್ಕೆ ಹೋಗಿ ಭಾನುವಾರದ ಇಡೀ ದಿನವನ್ನು ಸಮಾಜಕ್ಕೆ ಮೀಸಲಿಟ್ಟಿದ್ದಾರೆ.
ದಾವಣಗೆರೆ: ಸಾಮಾನ್ಯವಾಗಿ ಯುವಕರು ಅಂದ್ರೆ ಕಾಲೇಜ್ಗೆ ಹೋಗುವುದು, ಮಜಾ ಮಾಡುವುದು, ಸಮಾಜದ ಬಗ್ಗೆ ಒಂದಿಷ್ಟು ಕಾಳಜಿ ಇರುವುದಿಲ್ಲ, ಅದರಲ್ಲೂ ಆಗ ತಾನೇ ಕಾಲೇಜು ಮುಗಿಸಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುವ ಕೆಲ ಯುವಕರು ಅವರದ್ದೇ ಆದ ಲೋಕದಲ್ಲಿ ಮುಳುಗಿ ಹೋಗಿದ್ದಾರೆ. ಇನ್ನೂ ಕೆಲವರು ಮುಂದೆ ದುಡಿಯಬೇಕು ಹಣ ಮಾಡಬೇಕು ಅನ್ನುವ ಹಂಬಲದಲ್ಲಿ ಇದ್ದಾರೆ. ಆದರೆ ಈ ಯುವಕರ ತಂಡ ವಾರ ಪೂರ್ತಿ ದುಡಿಮೆ ಮಾಡಿ ಒಂದು ದಿನ ಸಮಾಜ ಸೇವೆಗೆ ಮುಡಿಪಾಗಿಟ್ಟಿದ್ದಾರೆ. ಯಾವುದೇ ಫಲಾಪೇಕ್ಷೆ ಇಲ್ಲದೆ ತಮಗಾದಷ್ಟು ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡಿಕೊಂಡು ಹೋಗುತ್ತಿದ್ದಾರೆ.
ಯಾವುದೇ ಫಲಾಪೇಕ್ಷೆ ಬಯಸದೇ ಕೆಲಸ ಮಾಡುತ್ತಿರುವ ಯುವಕರು
ಸರ್ಕಾರಿ ಶಾಲೆಗಳಿಗೆ ಹೊಸ ಹೊಳಪನ್ನು, ಪಾಳು ಬಿದ್ದ ದೇವಸ್ಥಾನಗಳ ಜೀರ್ಣೋದ್ದಾರ ಮಾಡುತ್ತಿರುವ ಯುವಪಡೆ, ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿರುವ ದೇವರ ಫೋಟೋ ಹಾಗೂ ಮೂರ್ತಿಗಳನ್ನು ಸಂರಕ್ಷಿಸುವುದು ಸೇರಿದಂತೆ ಇಂತಹ ಹಲವಾರು ಕಾರ್ಯಗಳನ್ನು ಯುವ ಬ್ರಿಗೇಡ್ನ ಹತ್ತಕ್ಕೂ ಹೆಚ್ವು ಯುವಕರು ಪ್ರತಿ ವಾರ ಒಂದೊಂದು ಕಾರ್ಯಕ್ರಮವನ್ನು ಹಮ್ಮಿಕೊಂಡು ಸ್ವಚ್ಚತೆಯನ್ನು ಮಾಡುತ್ತಾ ಬಂದಿದ್ದಾರೆ. ಪುರಾತನ ದೇವಸ್ಥಾನಗಳ ಸ್ವಚ್ಚತೆ ಮಾಡುತ್ತಾರೆ. ಅಲ್ಲದೆ ಜನರು ಮನೆಗಳಲ್ಲಿ ಒಡೆದು ಹೋದ ದೇವರ ಫೋಟೋಗಳು, ವಿಘ್ನವಾಗಿರುವ ಮೂರ್ತಿಗಳನ್ನು ರಸ್ತೆ ಬದಿ ಬಿಸಾಕಿ ಹೋಗಿರುತ್ತಾರೆ. ಅವುಗಳನ್ನು ಈ ಯುವ ಬ್ರಿಗೇಡ್ನ ಯುವ ಪಡೆ ಅವುಗಳನ್ನು ವ್ಯವಸ್ಥಿತವಾಗಿ ಗುಂಡಿ ತೆಗೆದು ಸಂಸ್ಕಾರ ಮಾಡುತ್ತಾರೆ. ಅಲ್ಲದೆ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಬಣ್ಣ ಹಚ್ಚುವ ಹಾಗೂ ಮೇಲ್ಛಾವಣಿ ಸರಿಪಡಿಸುವ ಕೆಲಸವನ್ನು ಮಾಡುತ್ತಾರೆ. ಇದರಿಂದ ನಮಗೆ ನೆಮ್ಮದಿ ಸಿಗುತ್ತದೆ. ಅಲ್ಲದೆ ಯಾರಿಂದಲೂ ನಾವು ಹಣ ಪಡೆದು ಯಾವುದೋ ಪಕ್ಷಕ್ಕಾಗಿ ನಾವು ಕೆಲಸ ಮಾಡುತ್ತಿಲ್ಲ. ಸ್ವಾಮಿ ವಿವೇಕಾನಂದರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದೇವೆ ಎಂದು ಯುವ ಬ್ರಿಗೇಡ್ ಯುವಕರು ಹೇಳುತ್ತಾರೆ.
ದಾವಣಗೆರೆಯ ಮಾಜಿ ಮೇಯರ್ ಟಿ.ವೀರೇಶ ಮಾತನಾಡಿ, ಯುವ ಬ್ರಿಗೇಡ್ನ ಯುವಕರು ದಾವಣಗೆರೆಯಿಂದ ಕೇವಲ ನಾಲ್ಕು ಕಿಲೋ ಮೀಟರ್ ದೂರು ಇರುವ ಬೇತೂರು ಗ್ರಾಮದ ಪುರಾತನ ದೇವಾಲಯವಾದ ಕಲ್ಲೇಶ್ವರ ದೇವಾಲಯಕ್ಕೆ ಹೊಸದಾದ ಹೊಳಪನ್ನು ನೀಡಿದ್ದಾರೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನವು ಪಾಳು ಬಿದ್ದಿತ್ತು, ಊರಿನ ಗ್ರಾಮಸ್ಥರು ಕೂಡ ಅದರ ಬಗ್ಗೆ ತಲೆ ಕೆಡೆಸಿಕೊಂಡಿರಲಿಲ್ಲ. ಆದರೆ ಯುವ ಬ್ರಿಗೇಡ್ನ ಯುವಕರು ಕಲ್ಲೇಶ್ವರ ದೇವಾಲಯದ ಸುತ್ತಲೂ ಹಾಗೂ ದೇವಸ್ಥಾನದ ಮೇಲೆ ದಟ್ಟವಾಗಿ ಬೆಳೆದಿದ್ದ ಗಿಡಗಳನ್ನು ತೆಗೆದು, ಬಿರುಕು ಬಿದ್ದಿದ್ದ ದೇವರ ವಿಗ್ರಹಗಳನ್ನು ಮರು ಪ್ರತಿಷ್ಠಾಪನೆ ಮಾಡಿದ್ದಾರೆ. ಈಗ ಆ ದೇವಾಲಯದಲ್ಲಿ ನಿತ್ಯ ಪೂಜೆ ಸಲ್ಲಿಸುವ ಹಾಗೇ ಕಾಯಕಲ್ಪ ನೀಡಿದ್ದಾರೆ. ಇವರ ಜೊತೆ ಗ್ರಾಮಸ್ಥರು ಕೂಡ ಸಹಕಾರ ನೀಡಿದ್ದು, ಈ ಐತಿಹಾಸಿಕ ದೇವಾಲಯವನ್ನು ಹೊಸ ಮಾದರಿಯಾಗಿ ನಿರ್ಮಾಣ ಮಾಡಿದ್ದಕ್ಕೆ ಯುವಕರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಒಟ್ಟಾರೆಯಾಗಿ ಕೆಲವು ಯುವಕರು ಇಂತಹ ಕೆಲಸಗಳಿಗೆ ಪಣ ತೊಟ್ಟಿದ್ದು, ಇನಷ್ಟು ಯುವಕರು ಇಂತಹ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಲಿ, ಮತ್ತಷ್ಟು ಕೈಗಳು ಸೇರಿದರೆ ಇಂತಹ ಹಲವು ಕಾರ್ಯಕ್ರಮಗಳನ್ನು ಮಾಡುವುದರಲ್ಲಿ ಸಂದೇಹವಿಲ್ಲ.
ವರದಿ:ಬಸವರಾಜ್ ದೊಡ್ಮನಿ ಟಿವಿ9 ದಾವಣಗೆರೆ
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:40 pm, Wed, 16 November 22