AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಯಗಳು ನಾಟಕ: ಇಟಲಿಯಿಂದ ಶುರುವಾಗುವ ಸನ್ನಿವೇಶ ಶ್ರೀರಂಗಪಟ್ಟಣದಲ್ಲಿ ಅಂತ್ಯ, ಏನಿದರ ತಿರುಳು?

ಇಟಲಿಯ ಸನ್ನಿವೇಶದೊಂದಿಗೆ ಆರಂಭವಾಗುವ ಗಾಯಗಳು ಎಂಬ ನಾಟಕ ಶ್ರೀರಂಗಪಟ್ಟಣದ ಸನ್ನಿವೇಶದೊಂದಿಗೆ ಅಂತ್ಯಗೊಳ್ಳುತ್ತದೆ. ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಸೇರಿದಂತೆ ಹಲವರು ರಚಿಸಿದ ಭಾಗಗಳನ್ನು ಈ ನಾಟಕದಲ್ಲಿ ಬಳಸಿಕೊಳ್ಳಲಾಗಿದೆ.

ಗಾಯಗಳು ನಾಟಕ: ಇಟಲಿಯಿಂದ ಶುರುವಾಗುವ ಸನ್ನಿವೇಶ ಶ್ರೀರಂಗಪಟ್ಟಣದಲ್ಲಿ ಅಂತ್ಯ, ಏನಿದರ ತಿರುಳು?
ಗಾಯಗಳು ನಾಟಕ ಪ್ರದರ್ಶನ
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: Rakesh Nayak Manchi|

Updated on: Aug 18, 2023 | 6:05 PM

Share

ದಾವಣಗೆರೆ, ಆಗಸ್ಟ್ 18: ಇಲ್ಲಿನ ಬಿಐಇಟಿ ಕಾಲೇಜಿನ ಎಸ್‌.ಎಸ್‌. ಮಲ್ಲಿಕಾರ್ಜುನ್ ಸಭಾಂಗಣದಲ್ಲಿ ನಿರ್ದಿಗಂತ ರಂಗಪಯಣದ ಕಲಾವಿದರು ಅಭಿನಯಿಸಿದ ಗಾಯಗಳು (Gayagalu) ಎಂಬ ನಾಟಕ ಜನರ ಮನಸೂರೆಗೊಳಿಸಿತು. ರಂಗ ನಿರ್ದೇಶಕ ಶ್ರೀಪಾದ ಭಟ್ ನಿರ್ದೇಶನದ ಈ ನಾಟಕವನ್ನು ಒಂದು ಮುಕ್ಕಾಲು ಗಂಟೆಗಳ ಕಾಲ ಪ್ರೇಕ್ಷಕರು ಕುತೂಹಲದಿಂದ ವೀಕ್ಷಿಸಿದರು.

ಕಲಾವಿದರು ತಮ್ಮ ಅಭಿನಯದ ಮೂಲಕ ಸಭಾಂಗಣದಲ್ಲಿ ಸೇರಿದ್ದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿದರು. ಉಪನ್ಯಾಸಕರು, ವಿದ್ಯಾರ್ಥಿಗಳು, ವಕೀಲರು, ಕಲಾವಿದರು, ಶಿಕ್ಷಕರು ಕುಟುಂಬ ಸಮೇತ ಬಂದು ಪ್ರದರ್ಶನ ವೀಕ್ಷಿಸಿದರು.

ಇಟಲಿಯ ಸನ್ನಿವೇಶದೊಂದಿಗೆ ಆರಂಭವಾಗುವ ನಾಟಕವು ಶ್ರೀರಂಗಪಟ್ಟಣದ ಸನ್ನಿವೇಶದೊಂದಿಗೆ ಅಂತ್ಯಗೊಳ್ಳುತ್ತದೆ. ಕುವೆಂಪು ಅವರ ಸ್ಮಶಾನ ಕುರುಕ್ಷೇತ್ರ, ‘ಅಜ್ಞಾತನೊಬ್ಬನ ಆತ್ಮಚರಿತ್ರೆ’ ಸೇರಿದಂತೆ ಹಲವರು ರಚಿಸಿದ ಭಾಗಗಳನ್ನು ನಾಟಕದಲ್ಲಿ ಬಳಸಿಕೊಳ್ಳಲಾಗಿದೆ.

ಕೋಮುಗಲಭೆ, ಜಾತಿ, ಹಿಂಸೆಯಿಂದ ಸಮಾಜದಲ್ಲಿ ಗಾಯಗಳು ಆಗಿವೆ. ಈ ಗಾಯಗಳಿಗೆ ಕಾರಣವಾಗಿರುವ ಆಯುಧಗಳನ್ನು ಒಂದು ಶವಪೆಟ್ಟಿಗೆಯಲ್ಲಿ ತುಂಬಿಕೊಂಡು ಹೋಗುವ ಕೊನೆಯ ದೃಶ್ಯರೂಪಕದ ಮೂಲಕ ನಾಟಕ ಅಂತ್ಯವಾಗುತ್ತದೆ. ಆ ಬಳಿಕ ಮಹಿಳೆಯರು ದೀಪ ಹಿಡಿದು ಬರುತ್ತಾರೆ. ಸಮಾಜದಲ್ಲಿ ಹಿಂಸೆ ಬೇಡ, ಶಾಂತಿ ಬೇಕು ಎಂಬುದನ್ನು ಇದು ಬಿಂಬಿಸಿತು.

ಇದನ್ನೂ ಓದಿ: ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ

ನಾಟಕ ವೀಕ್ಷಿಸಿದ ಎಸ್.ಎಸ್. ಕೇರ್ ಲೈಫ್ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್, ಸಮಾಜದಲ್ಲಿ ನಡೆಯುವ ಕೋಮುವಾದ, ಜಾತಿ ಗಲಭೆಯನ್ನು ಕೊನೆಗಾಣಿಸಬೇಕು ಎಂಬ ಧಾಟಿಯಲ್ಲಿ ಈ ನಾಟಕ ಇದೆ. ಯುವಕರೇ ಅಭಿನಯಿಸಿರುವ ಈ ನಾಟಕ ಯುವಜನರ ಮೇಲೆ ಒಳ್ಳೆಯ ಪರಿಣಾಮ ಬೀರಲಿದೆ. ನಾಟಕದ ಕಥಾವಸ್ತು ಉತ್ತಮವಾಗಿದ್ದು, ಪ್ರಸ್ತುತ ಸಮಾಜದ ಸಮಸ್ಯೆಗಳೆಂಬ ಗಾಯಗಳಿಗೆ ಮುಲಾಮು ಹಚ್ಚುವಂತಿದೆ ಎಂದರು.

ಇವತ್ತಿನ ಜ್ವಲಂತ ಸಮಸ್ಯೆಗೆ ಮನುಷ್ಯತ್ವದ ಗುಣಗಳನ್ನು ಇಟ್ಟುಕೊಂಡು ಮಾನವೀಯ ನೆಲೆಗಟ್ಟಿನ ಮೇಲೆ ಸಮಾಜದೊಂದಿಗೆ ಕಲಾವಿದರ ಮೂಲಕ ಸಂವಾದಿಸಿದ್ದೇವೆ. ವಿವಿಧ ನಾಟಕಗಳ ಕಲಾ ಪ್ರಕಾರಗಳು, ತುಣುಕುಗಳನ್ನು, ಕಥೆಗಳನ್ನು ತೆಗೆದುಕೊಂಡು ಹೊಸ ಕಲಾವಿದರು ಅಭಿನಯಿಸಿದ್ದಾರೆ. ಕೋಮುದ್ವೇಷವಾಗಲಿ, ಯುದ್ಧವಾಗಲಿ ಅಥವಾ ಎರಡು ಮನಸ್ಸಿನ ಕಂದಕಗಳಾಗಲಿ, ಇವತ್ತಿನ ಜಗತ್ತಿಗೆ ಅನವಶ್ಯಕ. ನಾಟಕವೂ ಇದನ್ನೇ ಹೇಳುತ್ತಿದೆ ಎಂದು ನಿರ್ದಿಗಂತದ ಸೃಜನಶೀಲ ನಿರ್ದೇಶಕಿ ಪ್ರೀತಿ ನಾಗರಾಜ ತಿಳಿಸಿದರು.

ರಂಗ ಬಳಗ, ಅನ್ವೇಷಕರು ಆರ್ಟ್ಸ್ ಫೌಂಡೇಷನ್, ಎಸ್‌.ಎಸ್.ಕೇರ್ ಟ್ರಸ್ಟ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಈ ನಾಟಕ ಪ್ರದರ್ಶನ ನಡೆಯಿತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಬಸವರಾಜ್​ ದೊಡ್ಡಮನಿ, ದಾವಣಗೆರೆ
ಬಸವರಾಜ್​ ದೊಡ್ಡಮನಿ, ದಾವಣಗೆರೆ

ಬಸವರಾಜ್ ದೊಡಮನಿ. 2007ರಿಂದ ಟಿವಿ9 ಕನ್ನಡದ ದಾವಣಗೆರೆ ಜಿಲ್ಲಾ ವರದಿಗಾರರಾಗಿದ್ದಾರೆ. ಹುಟ್ಟಿದ್ದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತಳಕಟನಾಳದಲ್ಲಿ. ತಂದೆ ಗಂಗಪ್ಪ ದೊಡಮನಿ ಕೃಷಿಕ. ತಾಯಿ ಲಕ್ಕಮ್ಮ ದೊಡಮನಿ. ಇವರದ್ದು ನಾಟಿ ವೈದ್ಯರ ಕುಟುಂಬ. ಜನ ಜಾನುವಾರುಗಳು ರೋಗಕ್ಕೆ ಔಷಧಿ ನೀಡುವುದು ಇವರ ಕುಟುಂಬದ ಕಾಯಕ. 2000 ನಲ್ಲಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನ‌ ಮತ್ತು ಪತ್ರಿಕೋದ್ಯಮದಲ್ಲಿ ಎಂಎ ಪದವಿ ಪಡೆದಿದ್ದಾರೆ. ವೃತ್ತಿ ಜೀವನ ಆರಂಭವಾಗಿದ್ದು ಕನ್ನಡ ಪ್ರಭ ಪತ್ರಿಕೆಯಿಂದ. ಧಾರವಾಡ ಜಿಲ್ಲಾ ವರದಿಗಾರನಾಗಿ ಸೇವೆ. ಹತ್ತಕ್ಕೂ ಹೆಚ್ಚು ಲೋಕಸಭೆ ಹಾಗೂ ವಿಧಾನ ಸಭೆ ಸದನದ ವರದಿ ಮಾಡಿದ ಅನುಭವ. ಪುಸ್ತಕ ಓದುವುದು, ಜಾನಪದ ಕಲೆ ಉಳಿವಿಗೆ ದಾಖಲೆ ಸಂಗ್ರಹಿಸಿವುದು ಇವರ ಹವ್ಯಾಸ.

Read More