ಹರಿಹರ: ಜನವರಿಯಲ್ಲಿ ಶುರುವಾಗಲಿದೆ ತುಂಗ ಭದ್ರಾ ಆರತಿ

ಗಂಗೆಗೆ ನಡೆಯುವ ಪೂಜೆ ಇನ್ನು ಮೇಲೆ ತುಂಗಭದ್ರೆಗೂ ನಡೆಯಲಿದೆ. ಇದಕ್ಕಾಗಿಯೇ ಮೂವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ರೂಪಗೊಂಡಿದೆ. ತುಂಗ ಭದ್ರ ನದಿಯ ದಡದಲ್ಲಿ 108 ಯೋಗ ಮಂಟಪಗಳ ನಿರ್ಮಾಣ ಆಗಲಿದೆ. ಸೂರ್ಯಾಸ್ತವಾದ ಬಳಿಕ ಇಲ್ಲಿ ನಿತ್ಯ ಮಂಗಳಾರತಿ ನಡೆಯಲಿದೆ.

ಹರಿಹರ: ಜನವರಿಯಲ್ಲಿ ಶುರುವಾಗಲಿದೆ ತುಂಗ ಭದ್ರಾ ಆರತಿ
ಕಾಮಗಾರಿ ವೀಕ್ಷಿಸುತ್ತಿರುವ ವಚನಾನಂದ ಸ್ವಾಮೀಜಿ
TV9kannada Web Team

| Edited By: Kiran Hanumant Madar

Nov 25, 2022 | 3:29 PM

ದಾವಣಗೆರೆ: ವರ್ಷದ ಹನ್ನೇರಡು ತಿಂಗಳು ಹರಿಯುವಳು ತುಂಗ ಭದ್ರೆ. ತುಂಗೆ ಮತ್ತೆ ಭದ್ರೆಯ ಸಂಗಮವಾದ ಬಳಿಕ ಸಿಗುವ ದೊಡ್ಡ ನಗರ ಹರಿಹರ. ಹೀಗಾಗಿ ದಾವಣಗೆರೆ ಜಿಲ್ಲೆಯ ಹರಿಹರಕ್ಕೆ ದಕ್ಷಿಣದ ಕಾಶಿ ಎನ್ನುತ್ತಿದ್ದರು. ಇಂದು ಈ ಮಾತು ಸತ್ಯವಾಗಿದೆ. ಜನವರಿ 14 ಅಥವಾ 15 ರಂದು ಅಂದರೆ ಸಂಕ್ರಾಂತಿ ದಿನ ಇಡೀ ದಕ್ಷಿಣ ಭಾರತವೇ ಪುಳಕಗೊಳ್ಳುವಂತಹ ಕ್ಷಣವಾಗಲಿದೆ. ಉತ್ತರ ಭಾರತದ ವಾರಣಾಸಿಯಲ್ಲಿ ನಿತ್ಯ ಗಂಗಾ ನದಿಗೆ ಸಂಜೆ ಮಂಗಳಾರತಿ ಆಗುತ್ತದೆ. ಇದನ್ನು ಗಂಗಾರತಿ ಎನ್ನುತ್ತಾರೆ. ಇದೇ ರೀತಿಯಲ್ಲಿ ದಕ್ಷಿಣ ಭಾರತದಲ್ಲಿ ಹರಿಹರ ನಗರಕ್ಕೆ ಹೊಂದಿಕೊಂಡು ಹರಿಯುತ್ತಿರುವ ತುಂಗಭದ್ರ ನದಿಗೆ, ತುಂಗಭದ್ರಾ ಆರತಿ ಶುರುವಾಗಲಿದೆ. ಇಲ್ಲಿನ ರಾಘವೇಂದ್ರ ಮಠದ ಹಿಂಭಾಗದಲ್ಲಿ ತುಂಗಭದ್ರಾ ಆರತಿಗಾಗಿ 108 ಯೋಗ ಮಂಟಪಗಳು ನಿರ್ಮಾಣ ಆಗಲಿವೆ.

ಕಳೆದ ಫೆಬ್ರುವರಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತುಂಗಭದ್ರ ಆರುತಿ ಕಾಮಗಾರಿಗೆ ಶಂಕು ಸ್ಥಾಪನೆ ಮಾಡಿದ್ದರು. ಈ ಯೋಜನೆಯ ರೂವಾರಿ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯವರು, ಇವರು ಕಾಮಗಾರಿ ವೀಕ್ಷಣೆ ಮಾಡಿ ಬರುವ ಜನವರಿಗೆ ತಿಂಗಳಿನಲ್ಲಿ ತುಂಗಭದ್ರ ಆರತಿ ಉದ್ಘಾಟನೆ ಆಗುತ್ತದೆ ಎಂದು ಸಂತಸ ವ್ಯಕ್ತ ಪಡಿಸಿದ್ದಾರೆ. ವಿಶೇಷವಾಗಿ ಹರಿಹರದ ಹರಿಹರೇಶ್ವರ ಪುಣ್ಯಕ್ಷೇತ್ರ ಇರುವುದು ಇದೇ ನದಿಯ ದಡದಲ್ಲಿ. ರಾಜ್ಯ ನೀರಾವರಿ ನಿಗಮ ಈ ಕಾಮಗಾರಿ ನಡೆಸುತ್ತಿದೆ. ಕಾಶಿಯಲ್ಲಿ ಈಗಾಗಲೇ ಆಗಿರುವ ಕಾರಿಡಾರ್ ರೀತಿಯಲ್ಲಿ ಹರಿಹರೇಶ್ವರ ದೇವಸ್ಥಾನ 108 ಯೋಗ ಮಂಟಪದ ಕಾರಿಡಾರ್ ಆಗಬೇಕು. ದೇಶ ವಿದೇಶದ ಜನ ಇಲ್ಲಿಗೆ ಬಂದು ತುಂಗಭದ್ರೆಗೆ ಆರತಿ ಮಾಡಬೇಕು ಎಂದು ಇಲ್ಲಿನ ಜನ ಹಾಗೂ ವಚನಾನಂದ ಸ್ವಾಮೀಜಿಯವರ ಬೇಡಿಕೆಯಾಗಿದೆ.

ಸದ್ಯ ಇಲ್ಲಿ ತುಂಗ ಭದ್ರಾ ಆರತಿ ಆರಂಭ ಆಗುತ್ತಿರುವುದು ಸಂತಸದ ವಿಚಾರ. ಇಲ್ಲಿ ನಿತ್ಯ ಪುರೋಹಿತರು ಪೂಜಾ ವಿಧಿವಿಧಾನಗಳನ್ನು ನಡೆಸುತ್ತಾರೆ. ವಿಶೇಷವಾಗಿ ಈ ಪರಿಕಲ್ಪನೆ ಹಾಗೂ ಇಂತಹದೊಂದು ತುಂಗಭದ್ರ ಆರತಿ ಮಾಡುಬೇಕು ಎಂದು ಪ್ರಯತ್ನ ಮಾಡಿದವರು ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ. ಹಿಂದಿನ ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಮಾಡಿ ಯೋಜನೆ ಮಂಜೂರು ಮಾಡುವಂತೆ ಒತ್ತಡ ಹಾಕಿದ್ದರು. ಹಾಲಿ ಸಿಎಂ ಒಪ್ಪಿಗೆ ನೀಡಿ ಶಂಕುಸ್ಥಾಪನೆ ಮಾಡಿ ಕಾಮಗಾರಿಗೆ ಹಣ ನೀಡಿದ್ದರು. ಗಂಗಾ ಆರುತಿ ಮಾದರಿಯಲ್ಲಿ ಇಲ್ಲಿ ತುಂಗಭದ್ರಾ ಆರತಿ ಶುರುವಾಗಲಿದೆ. ಅದು ಇಡೀ ದೇಶದ ಗಮನ ಸೆಳೆಯಲಿದೆ. ಮುಂದೆ ಇದರ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಬರುವ ಸಾಧ್ಯತೆ ಸಹ ಇದೆ.

ಇದನ್ನೂ ಓದಿ: ಹಾವೇರಿ: ಕೊಬ್ಬರಿ ಹೋರಿ ಓಟ ಸ್ಪರ್ಧೆಯಲ್ಲಿ ಹೋರಿಗಳ ಮಿಂಚಿನ ಓಟ

ಹೀಗೆ ಇಡಿ ದೇಶದಲ್ಲಿ ಒಂದು ರೀತಿಯಲ್ಲಿ ಸಂಚಲ ಮೂಡಿಸುವ ರೀತಿಯಲ್ಲಿ ತುಂಗಭದ್ರಾ ಆರತಿ ಜನವರಿಯಲ್ಲಿ ಆರಂಭವಾಗಿಲಿದೆ. ಇದರಿಂದ ಇಲ್ಲಿನ ಹರಿಹರೇಶ್ವರ ಪುಣ್ಯಕ್ಷೇತ್ರ, ದಾವಣಗೆರೆ ಜಿಲ್ಲೆಯ ಸೂಳೆಕೆರೆ, ಸಂತೆಬೆನ್ನೂರು ಪುಷ್ಕರ್ಣಿ ಸೇರಿದಂತೆ ಹತ್ತಾರು ಕ್ಷೇತ್ರಗಳು ಇನ್ನಷ್ಟು ಪ್ರಚಾರಕ್ಕೆ ಬರಲಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಒಟ್ಟಿನಲ್ಲಿ ತುಂಗಭದ್ರ ಇನ್ನು ಮುಂದೆ ದೇಶದ ಗಮನ ಸೆಳೆಯುತ್ತಾಳೆ ಎಂಬುದರಲ್ಲಿ ಎರಡು ಮಾತಿಲ್ಲ.

ವರದಿ: ಬಸವರಾಜ್ ದೊಡ್ಮನಿಟಿವಿ9 ದಾವಣಗೆರೆ

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada