ಈಗ ಗ್ಯಾರಂಟಿ ಕೊಡುವ ಕಾಂಗ್ರೆಸ್ಸಿಗರು ಅಧಿಕಾರದಲ್ಲಿದ್ದಾಗ ಕಡುಬು ತಿಂತಾ ಇದ್ದರಾ; ಬಿಎಸ್​ವೈ ಪ್ರಶ್ನೆ

|

Updated on: Mar 25, 2023 | 8:20 PM

ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣಕ್ಕೂ ಮುನ್ನ ಮಾತನಾಡಿದ ಯಡಿಯೂರಪ್ಪ, ಕಾಂಗ್ರೆಸ್ ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನ ಇಲ್ಲ. ಆದರೆ ನಮ್ಮ ಸರ್ಕಾರ ಅದನ್ನೆಲ್ಲ ಮಾಡಿತೋರಿಸುತ್ತಿದೆ ಎಂದರು.

ಈಗ ಗ್ಯಾರಂಟಿ ಕೊಡುವ ಕಾಂಗ್ರೆಸ್ಸಿಗರು ಅಧಿಕಾರದಲ್ಲಿದ್ದಾಗ ಕಡುಬು ತಿಂತಾ ಇದ್ದರಾ; ಬಿಎಸ್​ವೈ ಪ್ರಶ್ನೆ
ಬಿಎಸ್​ ಯಡಿಯೂರಪ್ಪ, ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ
Follow us on

ದಾವಣಗೆರೆ: ಕಾಂಗ್ರೆಸ್​ನವರಿಗೆ ವಿಧಾನಸಭೆ ಚುನಾವಣೆಯಲ್ಲಿ (Karnataka Assembly Election 2023) ಸೋಲುವ ಭಯ ಆರಂಭವಾಗಿದೆ. ಅದಕ್ಕಾಗಿಯೇ ಈಗ ಗ್ಯಾರಂಟಿಗಳನ್ನು (Congress Guarantee Card) ಘೋಷಣೆ ಮಾಡುತ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ಏನು ಕಡುಬು ತಿನ್ನುತ್ತಾ ಇದ್ದರಾ ಎಂದು ಮಾಜಿ ಸಿಎಂ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.​ ಯಡಿಯೂರಪ್ಪ ಅವರು ಪ್ರತಿಪಕ್ಷದ ನಾಯಕರನ್ನು ಪ್ರಶ್ನಿಸಿದರು. ದಾವಣಗೆರೆಯ ಜಿಎಂಐಟಿ ಮೈದಾನದಲ್ಲಿ ನಡೆದ ಬಿಜೆಪಿ ಮಹಾಸಂಗಮ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾಷಣಕ್ಕೂ ಮುನ್ನ ಅವರು ಮಾತನಾಡಿದರು. ಕಾಂಗ್ರೆಸ್​ನವರು ಜನಪರ ಆಡಳಿತ ನೀಡಲಿಲ್ಲ. ಅವರು ಕೇವಲ ಘೋಷಣೆಗಳನ್ನು, ಗ್ಯಾರಂಟಿಗಳನ್ನು ಕೊಡುವುದು ಮಾತ್ರ. ಕಾಂಗ್ರೆಸ್ ಭರವಸೆಗಳನ್ನು ನಂಬುವ ಸ್ಥಿತಿಯಲ್ಲಿ ರಾಜ್ಯದ ಜನ ಇಲ್ಲ. ಆದರೆ ನಮ್ಮ ಸರ್ಕಾರ ಅದನ್ನೆಲ್ಲ ಮಾಡಿತೋರಿಸುತ್ತಿದೆ ಎಂದು ಅವರು ಹೇಳಿದರು.

ಮೋದಿ ಅವರು ಪ್ರಧಾನಿಯಾದ ಬಳಿಕ ಒಂದು ದಿನವೂ ವಿಶ್ರಾಂತಿ ಪಡೆದಿಲ್ಲ. ಜಗತ್ತೇ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ನಮ್ಮ ಮನವಿ ಮೇರೆಗೆ ಅಷ್ಟು ದೂರದ ದೆಹಲಿಯಿಂದ ಇಲ್ಲಿಗೆ ಬಂದಿರುವುದಕ್ಕೆ ಧನ್ಯವಾದಗಳು ಎಂದು ಯಡಿಯೂರಪ್ಪ ಹೇಳಿದರು. ಇದು ಬಿಜೆಪಿ ಯಾತ್ರೆಯ ಸಮಾರೋಪವಲ್ಲ. ಇದು ವಿಜಯಯಾತ್ರೆಯ ಆರಂಭ. ನನಗೆ 80 ಆದರೂ ಮನೆಗೆ ಹೋಗಲ್ಲ, ಚುನಾವಣೆ ಮುಗಿಯುವವರೆಗೆ ಹಳ್ಳಿಹಳ್ಳಿಗಳಿಗೆ ಭೇಟಿ ನೀಡುತ್ತೇನೆ. ನಾವೆಲ್ಲರು ಸೇರಿ ಬಿಜೆಪಿ ಸರ್ಕಾರದ ಯೋಜನೆಗಳನ್ನು ಮನೆ ಮನೆಗೆ ತಲುಪಿಸೋಣ. 2 ತಿಂಗಳು ಸರ್ಕಾರ ಯೋಜನೆಗಳನ್ನು ತಿಳಿಸಿ ಜನರ ಮನ ಗೆಲ್ಲೋಣ ಎಂದು ಅವರು ಕರೆ ನೀಡಿದರು.

ಪಾಕ್ ಮೋದಿಯಂತ ನಾಯಕ ಬೇಕೆಂದರೆ ರಾಹುಲ್ ವಿದೇಶಕ್ಕೆ ಹೋಗಿ ಮೋದಿಯನ್ನು ಟೀಕಿಸುತ್ತಾರೆ: ಸಿಎಂ ಬೊಮ್ಮಾಯಿ

ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪಾಕಿಸ್ತಾನದ ಜನರು ಕೂಡ ನರೇಂದ್ರ ಮೋದಿಯಂತಹ ನಾಯಕ ಬೇಕು ಅಂತಿದ್ದಾರೆ. ಆದರೆ ರಾಹುಲ್ ಗಾಂಧಿ​ ವಿದೇಶಕ್ಕೆ ಹೋಗಿ ಮೋದಿ ಬಗ್ಗೆ ಟೀಕೆ ಮಾಡಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್​ ಪಕ್ಷ ದೇಶದ್ರೋಹ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ನಾಯಕರಿಗೆ ದೇಶ, ರಾಜ್ಯದ ಬಗ್ಗೆ ಸ್ವಲ್ಪವೂ ಕಾಳಜಿ ಇಲ್ಲ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: ಕನ್ನಡ ಸಮೃದ್ಧ ಭಾಷೆ, ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ; ಮುದ್ದೇನಹಳ್ಳಿಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಪ್ರಧಾನಿ ಮೋದಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಿದ್ದಾರೆ, ಕಳಸಾ ಬಂಡೂರಿ ಯೋಜನೆಗೂ ಸಚಿವ ಸಂಪುಟ ಒಪ್ಪಿಗೆ ಕೊಟ್ಟಿದೆ. ಮತ್ತೆ ನಾವು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಈ ಯೋಜನೆಯನ್ನು ಪೂರ್ಣಗೊಳಿಸುತ್ತೇವೆ ಎಂದು ಹೇಳಿದ ಸಿಎಂ ಬೊಮ್ಮಾಯಿ, ಜಲಜೀವನ್ ಮಿಷನ್ ಯೋಜನೆಯಡಿ ದೇಶದ 12 ಕೋಟಿ ಮನೆಗಳಿಗೆ ಕುಡಿಯುವ ನೀರು ಪೂರೈಸಿದ್ದಾರೆ. ಕರ್ನಾಟಕದ 40 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಆ ಮೂಲಕ ಪ್ರಧಾನಮಂತ್ರಿ ಮೋದಿ ಅವರು ಕರ್ನಾಟಕದಲ್ಲಿ ಜಲಕ್ರಾಂತಿ ನಿರ್ಮಿಸಿದ್ದಾರೆ ಎಂದರು.

ನಮ್ಮ ಸರ್ಕಾರ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಜಾರಿಮಾಡಿದೆ. ಬಿಜೆಪಿ ಸರ್ಕಾರ ರೈತರ ಪರವಾಗಿದೆ ಎಂದು ಹೇಳಿದ ಸಿಎಂ ಬೊಮ್ಮಾಯಿ, ರಾಜ್ಯದಲ್ಲಿ ದಲಿತರ ಹಾಸ್ಟೆಲ್​ಗಳ ಸಂಖ್ಯೆ ಹೆಚ್ಚಳ ಮಾಡಿದ್ದೇವೆ. ಇದು ಡಬಲ್​ ಇಂಜಿನ್​ ಸರ್ಕಾರದಿಂದ ಮಾತ್ರ ಅಭಿವೃದ್ಧಿ ಸಾಧ್ಯ. ಡಬಲ್​ ಇಂಜಿನ್​ ಸರ್ಕಾರದಿಂದ ದಲಿತರಿಗೆ ನ್ಯಾಯ ಕೊಡಲು ಸಾಧ್ಯ ಎಂದು ಹೇಳಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:20 pm, Sat, 25 March 23