ದಾವಣಗೆರೆ, ಜನವರಿ 21: ಸಿದ್ಧಗಂಗಾ ಮಠದ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ (Shivakumara Swami) ಅವರನ್ನು ರಾಷ್ಟ್ರೀಯ ಸಂತ ಎಂದು ಘೋಷಣೆ ಮಾಡಲಿ ಎಂದು ಕೂಡಲ ಸಂಗಮ ಪಂಚಮಸಾಲಿ ಗುರುಪೀಠದ ಜಯಮೃತ್ಯುಂಜಯ ಸ್ವಾಮೀಜಿ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ರಾಷ್ಟ್ರಪತಿ ಗಾಂಧೀಜಿ, ಸರೋಜಿನಿ ನಾಯ್ಡು ಭಾರತದ ಕೋಗಿಲೆ ಎಂಬ ರೀತಿಯಲ್ಲಿ ಸಿದ್ಧಗಂಗಾ ಶ್ರೀ ರಾಷ್ಟ್ರೀಯ ಸಂತ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಲಿ ಎಂದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಯಮೃತ್ಯುಂಜಯ ಸ್ವಾಮೀಜಿ, ನಡೆದಾಡುವ ದೇವರು, ಕಾಯಕ ಯೋಗಿ, ದೇಶದಲ್ಲಿ ತ್ರಿವಿಧ ದಾಸೋಹಿ ಎಂದೇ ಸಿದ್ಧಗಂಗಾ ಶ್ರೀಗಳು ಪ್ರಸಿದ್ದಿ ಪಡೆದವರು. ಇದೇ ಕಾರಣಕ್ಕೆ ಅವರನ್ನು ರಾಷ್ಟ್ರೀಯ ಸಂತ ಎಂದು ಕೇಂದ್ರ ಸರ್ಕಾರ ಘೋಷಣೆ ಮಾಡಬೇಕು ಎಂದು ಹೇಳಿದ್ದಾರೆ.
ಇನ್ನು ಈ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಜಯಮೃತ್ಯುಂಜಯ ಸ್ವಾಮೀಜಿ, ಕರ್ನಾಟಕ ಇತಿಹಾಸದಲ್ಲೇ ಲಿಂಗಾಯತರ ಮೇಲೆ ಯಾರೂ ಕೂಡ ಹಲ್ಲೆ ಮಾಡಿರಲಿಲ್ಲ. ಲಿಂಗಾಯತರ ಮೇಲೆ ಮಾರಣಾಂತಿಕ ಹಲ್ಲೆ ರಾಜ್ಯ ಸರ್ಕಾರ ಕಾರಣವಾಗಿದೆ. ನಮ್ಮ ಹೋರಾಟ ಹತ್ತಿಕ್ಕಲು ಉದ್ದೇಶಪೂರ್ವಕವಾಗಿ ಪೊಲೀಸರಿಂದ ಹಲ್ಲೆ ನಡೆಸಿದ್ದಾರೆ. ಇದುವರೆಗೂ ನಮಗೆ ಕ್ಷಮಾಪಣೆ ಕೇಳಿಲ್ಲ, ಹಲ್ಲೆ ಮಾಡಿದ ಅಧಿಕಾರಿಗಳ ಮೇಲೆ ಕ್ರಮವಾಗಿಲ್ಲ. ಮಾನವ ಹಕ್ಕು ಆಯೋಗಕ್ಕೂ ನಮ್ಮ ವಕೀಲರು ದೂರು ಸಲ್ಲಿಸಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ.
ಇದನ್ನೂ ಓದಿ: ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನೇ ನಿಭಾಯಿಸಲಾಗುತ್ತಿಲ್ಲ, ಅಧ್ಯಕ್ಷನಾಗುವ ಮಾತು ಎಲ್ಲಿಂದ ಬಂತು? ಸುನೀಲ ಕುಮಾರ್
ಲಿಂಗಾಯತ ಹೋರಾಟವನ್ನು ಅಸಾಂವಿಧಾನಿಕ ಎಂದು ಸಿಎಂ ಸಿದ್ದರಾಮಯ್ಯ ಸದನದಲ್ಲೇ ಹೇಳಿದ್ದಾರೆ. ಹೊಡೆದಿದ್ದು ಅಲ್ಲದೆ ಗಾಯದ ಮೇಲೆ ಬರೆ ಎಳೆದಂತೆ ಮಾತನಾಡಿದ್ದಾರೆ. ಮತ್ತೆ ಅವರ ಬಳಿ ಹೋಗಿ ಮೀಸಲಾತಿ ಬಗ್ಗೆ ನಾವು ಹೇಳೋದಿಲ್ಲ. ನಾನು ಪ್ರತಿಯೊಂದು ಹಳ್ಳಿಗೂ ಸಂಚಾರ ಮಾಡುತ್ತೇನೆ. ರಾಜ್ಯ ಸರ್ಕಾರ ಮಾಡಿದ ಅನ್ಯಾಯ ಬಗ್ಗೆ ಜನರಿಗೆ ತಿಳಿಸುತ್ತೇನೆ. ಲಾಠಿ, ಬೂಟು ಏಟು ಕೊಟ್ಟವರಿಗೆ ಏನು ಉತ್ತರ ಕೊಡುತ್ತೀರಿ. ಮೀಸಲಾತಿ ಕೊಡುತ್ತೇವೆ ಎನ್ನುವರಿಗೆ ಏನು ಉತ್ತರ ಕೊಡುತ್ತೀರಿ ಎಂದು ಅವರ ಮುಂದೆ ಇಡುತ್ತೇನೆ ಎಂದಿದ್ದಾರೆ.
224 ಕ್ಷೇತ್ರದ ಪ್ರತಿ ಹಳ್ಳಿಗೂ ಪ್ರತಿಜ್ಞಾ ಕ್ರಾಂತಿ ಅಭಿಯಾನ ಮಾಡುತ್ತೇನೆ. 20 ವರ್ಷ ಕಾಲ ಇವರೇ ಮುಖ್ಯಮಂತ್ರಿಯಾಗಿ ಇರೋದಿಲ್ಲ. ದೇವರ ದಯದಿಂದ ಮುಂದೆ ಬೇರೆ ಮುಖ್ಯಮಂತ್ರಿ ಬರ್ತಾರೆ ಅವರ ಮೂಲಕ ನ್ಯಾಯ ಕೇಳುತ್ತೇವೆ. ಜನರ ಮುಂದೆ ಹೋಗುತ್ತೇನೆ ದೌರ್ಜನ್ಯ ಮಾಡಿದವರಿಗೆ ಆಶೀರ್ವಾದ ಮಾಡುತ್ತಿರೋ, ಇಲ್ಲಾ ಸಮಾಜಕ್ಕೆ ಪ್ರೀತಿ ಕೊಡುವವರಿಗೆ ಆಶೀರ್ವಾದ ಮಾಡುತ್ತಾರೋ ಅವರಿಗೆ ಬಿಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನ: ಇಲ್ಲೂ ಮೊಳಗಿತು ಡಿಕೆ ಶಿವಕುಮಾರ್ ಮುಂದಿನ ಸಿಎಂ ಕೂಗು!
ಇಂದು ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳ 6ನೇ ವರ್ಷದ ಪುಣ್ಯಸ್ಮರಣೆ. ಹಾಗಾಗಿ ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಶ್ರೀಗಳ ಗದ್ದುಗೆಗೆ ರುದ್ರಾಭಿಷೇಕ, ಪುಷ್ಪಾಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:25 pm, Tue, 21 January 25