ದಾವಣಗೆರೆ: ನಾಳೆ(ಮಾ.25) ನಗರದ ಹೊರ ವಲಯದ ಜಿಎಂಐಟಿ ಕಾಲೇಜ್ ಪಕ್ಕದಲ್ಲಿ ನಡೆಯಲಿರುವ ಬಿಜೆಪಿ ಮಹಾಸಂಗಮ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ(Narendra Modi)ಯವರು ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಯಿಂದ 4.30ರ ವರೆಗೆ ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇರಲಿದ್ದು. ಈ ಕಾರ್ಯಕ್ರಮಕ್ಕೆ ದಾವಣಗೆರೆ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಹಾವೇರಿ ಬಳ್ಳಾರಿ ಹಾಗೂ ಗದಗ ಜಿಲ್ಲೆಗಳಿಂದ ಹತ್ತು ಸಾವಿರ ಬಸ್ಸುಗಳಲ್ಲಿ 6 ಲಕ್ಷ ಜನ ಮಹಾಸಂಗಮಕ್ಕೆ ಬರಲಿದ್ದಾರೆ. ಜೊತೆಗೆ ಬಹುತೇಕ ಕಡೆಯಿಂದ ಶಾಸಕರು, ಟಿಕೆಟ್ ಆಕಾಂಕ್ಷಿಗಳು ತಮ್ಮ ಕಾರ್ಯಕರ್ತರನ್ನ ಮಹಾಸಂಗಮಕ್ಕೆ ಆಹ್ವಾನಿಸಿದ್ದಾರೆ. ಒಟ್ಟು ಹತ್ತು ಲಕ್ಷಕ್ಕೂ ಹೆಚ್ಚು ಜನ ಸೇರಿಸುವ ಗುರಿಯನ್ನ ಬಿಜೆಪಿ ಇಟ್ಟುಕೊಂಡಿದೆ. ಇದೊಂದು ರೀತಿಯಲ್ಲಿ ಕೇಸರಿ ಪಡೆಯ ಸಂಭ್ರಮದ ಹಬ್ಬ ಎನ್ನುವ ರೀತಿಯಲ್ಲಿ ಸಿದ್ಧತೆಗಳು ಆರಂಭವಾಗಿವೆ.
ಮಹಾಸಂಗಮಕ್ಕೆ ಒಂದು ಸಾವಿರ ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣ
ರಾಜ್ಯದ ಎಲ್ಲ ಹಾಲಿ ಶಾಸಕ, ಸಂಸದರು ಸೇರಿದಂತೆ ಮಾಜಿ ಶಾಸಕ, ಸಂಸದರು ಮಹಾಸಂಗಮಕ್ಕೆ ಆಗಮಿಸಿದ್ದು, 420ಅಡಿ ಅಗಲ ಹಾಗೂ ಒಂದು ಸಾವಿರ ಅಡಿ ಉದ್ದದ ಬೃಹತ್ ವೇದಿಕೆ ನಿರ್ಮಾಣ ಮಾಡಿದ್ದು, ಒಂದು ವರೆಯಿಂದ ಎರಡು ಲಕ್ಷ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಇನ್ನು ಪ್ರಧಾನ ವೇದಿಕೆ ಜೊತೆಗೆ ಇನ್ನೇರಡು ವೇದಿಕೆಯನ್ನ ನಿರ್ಮಾಣ ಮಾಡಲಾಗಿದ್ದು, ಪ್ರಧಾನ ವೇದಿಕೆಯಲ್ಲಿ ಪ್ರಧಾನಿ ಸೇರಿ ಒಂದು ನೂರು ಜನಕ್ಕೆ ಆಸನದ ವ್ಯವಸ್ಥೆ ಮಾಡಲಾಗಿದೆ. ಎರಡನೇ ವೇದಿಕೆಯಲ್ಲಿ ಹಾಲಿ ಶಾಸಕ ಸಂಸದರಿಗೆ. ಮೂರನೇ ವೇದಿಕೆಯಲ್ಲಿ ಮಾಜಿ ಶಾಸಕ, ಸಂಸದ, ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಬಿಜೆಪಿ ಅಧ್ಯಕ್ಷರುಗಳಿಗೆ ಆಸನದ ವ್ಯವಸ್ಥೆ ಮಾಡಿದ್ದಾರೆ. ವೇದಿಕೆಗೆ ಬರುವ ಮೊದಲು ಪ್ರಧಾನಿ ನರೇಂದ್ರ ಮೋದಿ ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಡ್ ಶೋ ಮಾಡಲಿದ್ದಾರೆ.
ಇದನ್ನೂ ಓದಿ:ಮೋದಿ ಉಪನಾಮ ಟೀಕೆ, ರಾಹುಲ್ ಗಾಂಧಿ ದೋಷಿ ಎಂದು ಸೂರತ್ ನ್ಯಾಯಾಲಯದಿಂದ ಮಹತ್ವದ ತೀರ್ಪು ಪ್ರಕಟ
ಸಂಪೂರ್ಣ ಬದಲಾದ ದಾವಣಗೆರೆ ರಸ್ತೆ ಸಂಚಾರ ವ್ಯವಸ್ಥೆ
ಮೋದಿ ಆಗಮನದ ಹಿನ್ನಲೆ ನಾಳೆ ಒಂದು ದಿನದ ಮಟ್ಟಿಗೆ ಕೆ.ಎಸ್.ಆರ್.ಟಿ.ಸಿ ಹಾಗೂ ಖಾಸಗಿ ಬಸ್ ನಿಲ್ದಾಣ ಬಂದ್ ಆಗಲಿದೆ. ಆದ್ದರಿಂದ ನಗರದ ಹೊರವಲಯದಲ್ಲಿ ಬಸ್ ನಿಲ್ದಾಣಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು ಬೆಂಗಳೂರು, ಚಿತ್ರದುರ್ಗ ತುಮಕೂರು ಕಡೆಯಿಂದ ಮಹಾ ಸಂಗಮಕ್ಕೆ ಬರುವವರು ದಾವಣಗೆರೆ ಎಪಿಎಂಸಿ ಪಕ್ಕದ ಚಿಕ್ಕನಳ್ಳಿಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಶಿವಮೊಗ್ಗ ಕಡೆಯಿಂದ ಬರುವರಿಗೆ ಯುಬಿಡಿಟಿ ಕಾಲೇಜ್ ಡಿಆರ್ ಹೈಸ್ಕೂಲ್ ಬಳಿ, ಉತ್ತರ ಕರ್ನಾಟಕದ ಹಾವೇರಿ, ಹುಬ್ಬಳ್ಳಿ ಧಾರವಾಡದಿಂದ ಬರುವರಿಗೆ ಆವರಗೊಳ್ಳ ಬಳಿ ಇರುವ ಕೇಂದ್ರಿಯ ವಿದ್ಯಾಲಯದ ಬಳಿ ಹಾಗೂ ವಿಜಯನಗರ, ಚಳ್ಳಕೆರೆ ಸೇರಿದಂತೆ ವಿವಿಧ ಕಡೆ ಯಿಂದ ಬರುವರಿಗೆ ಕೊಂಡಜ್ಜಿ ರಸ್ತೆಯ ಬಡಗಿ ಕೃಷ್ಣಪ್ಪ ಲೇಔಟ್ನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಸೇನಾ ಹೆಲಿಕಾಪ್ಟರ್ಗಳಿಂದ ಪ್ರಾಯೋಗಿಕ ಹಾರಾಟ
ನಾಳೆ ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ಸೇನಾ ಹೆಲಿಕಾಪ್ಟರ್ಗಳಿಂದ ಪ್ರಾಯೋಗಿಕ ಹಾರಾಟ ಆರಂಭವಾಗಿದೆ. ದಾವಣಗೆರೆ ನಗರದ ಜಿಎಂ ಐಟಿ ಹೆಲಿಪ್ಯಾಡ್ಗೆ ಬಂದ ಸೇನಾ ಹೆಲಿಕಾಪ್ಟರ್ ನಿರಂತರ ಹಾರಾಟ ಸುರು ಮಾಡಿವೆ. ನಗರದ ಜಿಎಂಐಟಿ ಪಕ್ಕ ನಾಲ್ಕುನೂರು ಎಕರೆ ಪ್ರದೇಶದಲ್ಲಿ ನಡೆಯಲಿರುವ ಮಹಾ ಸಂಗಮ ಸಮಾವೇಶಕ್ಕೆ ಬೆಂಗಳೂರಿನಿಂದ ವಿಶೇಷ ಸೇನಾ ಹೆಲಿಕಾಪ್ಟರ್ನಲ್ಲಿ ಜಿಎಂಐಟಿ ಹೆಲಿಪ್ಯಾಡ್ಗೆ ಪ್ರಧಾನಿ ಆಗಮಿಸಲಿದ್ದಾರೆ. ವೇದಿ
ಮೋದಿ ಆಗಮನ ಹಿನ್ನಲೆ ಬೀಗಿ ಪೊಲೀಸ್ ಬಂದೋಬಸ್ತ್
ಮೋದಿ ಕಾರ್ಯಕ್ರಮದ ಭದ್ರತೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಿದ್ದು. ಬಾಂಬ್ ಪತ್ತೆ ದಳ ನಿರಂತರ ತಪಾಸನೆ, ಹತ್ತಾರು ಸಲ ಸುತ್ತಾಡುತ್ತಿರುವ ಸೇನಾ ಹೆಲಿಕಾಪ್ಟರ್. ಮಹಾಸಂಗಮ ನಡೆಯುವ 2 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್ ಹಾರಾಟ, ಬ್ಲಾಕ್ ಶರ್ಟ್, ನೀರಿನ ಬಾಟಲ್, ಬ್ಯಾಗ್ ಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಸಮಾವೇಶಕ್ಕೆ ಬರುವ ಜನರನ್ನು ಎರಡು ಹಂತದಲ್ಲಿ ತಪಾಸಣೆ ಮಾಡಲಾಗುತ್ತದೆ. ಇನ್ನು ಎಂಟು ಜನ ಎಸ್.ಪಿ ಮತ್ತು ಎ.ಎಸ್.ಪಿಗಳು, ಡಿವೈಎಸ್ಪಿ 32, ಇನ್ಸ್ಪೆಕ್ಟರ್ಗಳು 85, ಹೋಮ್ ಗಾರ್ಡ್ಸ್ 900 ಸೇರಿದಂತೆ 4000 ಪೊಲೀಸರ ನಿಯೋಜನೆ ಮಾಡಲಾಗಿದೆ. ಮೋದಿ ಪ್ರೇಕ್ಷಕರ ಗ್ಯಾಲರಿಯಲ್ಲಿ ರೋಡ್ ಶೋ ನಡೆಸುವ ಸ್ಥಳದಲ್ಲಿ ಒಬ್ಬ ಎಸ್.ಪಿ ನಿಯೋಜನೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ಮೋದಿ ಹಠಾವೋ, ದೇಶ್ ಬಚಾವೋ ಪೋಸ್ಟರ್; ಎಎಪಿ ಮತ್ತು ಬಿಜೆಪಿ ನಡುವೆ ವಾಕ್ಸಮರ
ಮಹಾಸಂಗಮಕ್ಕೆ ಬರುವವರಿಗೆ ಊಟ ತಿಂಡಿ ವ್ಯವಸ್ಥೆ
ಮಹಾ ಸಂಗಮ ಮೊದಲು ನಾಲ್ಕು ಜಿಲ್ಲೆಗಳ ವ್ಯಾಪ್ತಿಗೆ ಒಳಪಟ್ಟಿತ್ತು. ಈಗ ಅದು ಎಳು ಜಿಲ್ಲೆಯ ವ್ಯಾಪ್ತಿಗೆ ವಿಸ್ತಾರವಾಗಿದೆ. ಮಹಾಸಂಗಮಕ್ಕೆ ಬರುವರಿಗೆ ಬೆಳಿಗ್ಗೆ ಉಪ್ಪಿಟ್ಟು ಹಾಗೂ ಕೇಸರಿ ಬಾತ್ ವ್ಯವಸ್ಥೆ ಮಾಡಿದ್ದು ಹಾಗೂ ಮಧ್ಯಾಹ್ನ ಊಟಕ್ಕೆ ಗೋಧಿ ಪಾಯಸಾ, ಮೋಸರನ್ನ ಮತ್ತು ಪಲಾವ್ನ್ನು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ನಾಲ್ಕು ನೂರು ಊಟದ ಕೌಂಟರ್ ತೆರೆಯಲು ನಿರ್ಧಾರ ಮಾಡಿದ್ದು, ಒಂದು ಸಾವಿರ ಅಡಿಗೆ ಭಟ್ಟರು ಸೇರಿ ಊಟ ತಿಂಡಿ ತಯಾರಿ ಮಾಡಲಿದ್ದಾರೆ.
ನಾಳೆ ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ರಥಗಳ ಮಿಲನ
ಇನ್ನೊಂದು ವಿಶೇಷ ಅಂದರೆ ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ರಥಗಳ ಮಿಲನ ನಾಳೆ ದಾವಣಗೆರೆಯಲ್ಲಿ ನಡೆಯಲಿದೆ. ರಾಜ್ಯದ ನಾಲ್ಕು ದಿಕ್ಕುಗಳಿಂದ ಆರಂಭವಾದ ವಿಜಯ ಸಂಕಲ್ಪ ಯಾತ್ರೆಯ ರಥಗಳು ದಾವಣಗೆರೆ ಮಹಾ ಸಂಗಮಕ್ಕೆ ಬರಲಿವೆ. ವಿಜಯ ಸಂಕಲ್ಪ ಯಾತ್ರೆಯ ಸಮಾರೋಪವೇ ಇದಾಗಿದೆ. ರಾಜ್ಯದಲ್ಲಿ ವಿಜಯ ಸಂಕಲ್ಪ ಯಾತ್ರೆ ಸುಮಾರು 56ಸಾವಿರ ಕಿಲೋಮೀಟರ್ ಪೂರೈಕೆ. 224ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿದೆ. 52 ಜನ ರಾಷ್ಟ್ರೀಯ ನಾಯಕರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. 132 ರೋಡ್ ಶೋ ಮಾಡಲಾಗಿದೆ. ಇಂತಹ ರಥಗಳು ದಾವಣಗೆರೆ ಮಹಾ ಸಂಗಮಕ್ಕೆ ಆಗಮಿಸಿದ್ದು ನಾಳೆ ಸಂಜೆ ನಾಲ್ಕು ರಥಗಳ ಸಹಿತ ದಾವಣಗೆರೆ ನಗರದಲ್ಲಿ ಶೋಭಾ ಯಾತ್ರೆ ನಡೆಸಲು ರಾಜ್ಯ ಬಿಜೆಪಿ ನಿರ್ಧಾರ ಮಾಡಿದೆ.
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:06 am, Fri, 24 March 23