ದಾವಣಗೆರೆ, ಜ.20: ಅಯೋಧ್ಯೆ ಶ್ರೀರಾಮ ಮಂದಿರ (Ayodhya Ram Mandir) ಉದ್ಘಾಟನೆ ಕ್ಷಣಕ್ಕಾಗಿ ಇಡೀ ದೇಶವೇ ಕಾತುರದಿಂದ ಕಾಯುತ್ತಿದ್ದು, ಈ ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಂಡು ದೀಪಾವಳಿ ಆಚರಣೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸದ್ಯ, ದೇಶಾದ್ಯಂತ ಅಯೋಧ್ಯೆ ಮಂತ್ರಾಕ್ಷತೆ ಹಾಗೂ ರಾಮ ಮಂದಿರ ಪೋಟೋವನ್ನು ಕೂಡ ಹಿಂದೂ ಕಾರ್ಯಕರ್ತರು, ಮುಖಂಡರು, ಮನೆ ಮನೆಗೆ ತೆರಳಿ ನೀಡುತ್ತಿದ್ದಾರೆ. ಅದೇ ರೀತಿ ದಾವಣಗೆರೆ ಜಿಲ್ಲೆಯಲ್ಲೂ (Davanagere) ನೀಡಲಾಗುತ್ತಿದ್ದು, ಮುಸ್ಲಿಂ ಸಮುದಾಯದವರೂ ಮಂತ್ರಾಕ್ಷತೆಯನ್ನು ಸ್ವೀಕರಿಸಿ ಶುಭ ಹಾರೈಸಿ ಭಾವೈಕ್ಯತೆ ಸಾರಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ಕಡರ ನಾಯಕನಹಳ್ಳಿಯಲ್ಲಿ ವಿಭಿನ್ನವಾಗಿ ಮಂತ್ರಾಕ್ಷತೆ ರಾಮ ಮಂದಿರ ಪೋಟೋ ಮನೆ ಮನೆಗೂ ನೀಡುತ್ತಿದ್ದು, ಅದರಲ್ಲೂ ಮಹಿಳೆಯರ ತಂಡ ಮಂತ್ರಾಕ್ಷತೆ ಪೋಟೋ ಜೊತೆ ಮಹಿಳೆಯರಿಗೆ ಬಳೆ ಅರಿಶಿಣ ಕುಂಕುಮ ಕೊಟ್ಟು ಶ್ರೀರಾಮ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಳ್ಳಲು ಆಭಿಯಾನ ನಡೆಸುತ್ತಿದ್ದಾರೆ.
ಈ ಅಭಿಯಾನದಲ್ಲಿ ಮುಸ್ಲಿಮರು ಕೂಡ ಭಾಗಿಯಾಗಿದ್ದು, ಅವರು ಕೂಡ ಶ್ರೀರಾಮನ ಮಂತ್ರಾಕ್ಷತೆ ಪೋಟೋ ಪಡೆದು ಸಂಭ್ರಮದಲ್ಲಿ ಭಾಗವಹಿಸಿದರು. ನಾವು ಕೂಡ ರಾಮ ಭಕ್ತರೇ. ಎಲ್ಲಾ ದೇವರು ಒಂದೇ, ನಾವು ಕೂಡ ಭಾರತೀಯರು ಎನ್ನುವುದರ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಇದನ್ನೂ ಓದಿ: ಉಚ್ಛ್ರಾಯ ಸ್ಥಿತಿ ತಲುಪಿದ ರಾಮ ಜಪ, ಜೈಲಿನಲ್ಲಿ ಕೈದಿಗಳಿಗೂ ಅಯೋಧ್ಯೆ ಮಂತ್ರಾಕ್ಷತೆ, ತುಳಸಿ ಮಾಲೆ
ಶ್ರೀರಾಮ ಮಂದಿರ ವಿಚಾರವಾಗಿ ರಾಜಕೀಯ ಮುಖಂಡರು ಕೆಸರೆರಚಾಟ ನಡೆಸುತ್ತಿದ್ದು, ರಾಮನನ್ನು ನೋಡಲು ಅಲ್ಲಿಗೆ ಹೋಗಬೇಕೆ, ರಾಮ ದೇವರೇ ಅಲ್ಲ ಎಂದು ರಾಜಕಾರಣ ಮಾಡುತ್ತಿದ್ದಾರೆ. ಅದರ ನಡುವೆ ಈ ಕಡರನಾಯಕನಹಳ್ಳಿಯಲ್ಲಿ ಭಾವೈಕ್ಯತೆಯಿಂದ ರಾಮ ಮಂದಿರ ಉದ್ಘಾಟನೆ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸಿದ್ಧತೆ ನಡೆಸುತ್ತಿದ್ದು, ಇಡೀ ಜಿಲ್ಲೆಯಲ್ಲಿಯೇ ಒಂದು ವಿಶಿಷ್ಠವಾಗಿ ಅಯೋಧ್ಯೆ ಮಂತ್ರಾಕ್ಷತೆಯನ್ನು ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂ ಎನ್ನುವ ಬೇಧ ಭಾವ ಇಲ್ಲದೆ ಎಲ್ಲರೂ ಒಟ್ಟಾಗಿ ಶ್ರೀರಾಮ ಮಂದಿರ ಉದ್ಘಾಟನೆಯ ಸಂಭ್ರಮಾಚರಣೆ ಮಾಡಲು ಪಾಲ್ಗೊಂಡಿದ್ದಾರೆ.
ಅದೇನೇ ಇರಲಿ, ಜನವರಿ 22 ರಂದು ನಡೆಯುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಮೇಲೆ ಎಲ್ಲಾರ ಚಿತ್ತವಿದೆ. ಈ ನಡುವೆ ಈ ರೀತಿಯ ಭಾವೈಕ್ಯತೆಯಿಂದ ಮಂತ್ರಾಕ್ಷತೆ ವಿತರಣೆ ಮಾಡಿದ್ದು ಮಾತ್ರ ವಿಶೇಷವೇ ಸರಿ. ಹೀಗೆ ಎಲ್ಲಾರೂ ಒಟ್ಟಾಗಿ ಬಾಳಲಿ ಎನ್ನುವದು ನಮ್ಮ ಕಳಕಳಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:40 pm, Sat, 20 January 24