ಅಯೋಧ್ಯೆ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆ: ಜನವರಿ 22ರ ಪ್ರಧಾನಿ ಮೋದಿ ದಿನಚರಿ ಇಲ್ಲಿದೆ
ಪ್ರಧಾನಿಯವರು ಅಯೋಧ್ಯೆಗೆ ಆಗಮಿಸಿ ಸೋಮವಾರ ಮಧ್ಯಾಹ್ನ 12:05ಕ್ಕೆ ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಪ್ರಧಾನಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪ್ರಾಣ ಪ್ರತಿಷ್ಠೆ ಸಮಾರಂಭ ಮುಗಿದ ನಂತರ ಪ್ರಧಾನಿ ಕುಬೇರ ತಿಲಕ್ಕೆ ತೆರಳಲಿದ್ದಾರೆ.
ನವದೆಹಲಿ, ಜನವರಿ 20: ಅಯೋಧ್ಯೆಯ ರಾಮ ಮಂದರಿದಲ್ಲಿ (Ayodhya Ram Mandir) ಜನವರಿ 22ರಂದು ರಾಮ ಲಲ್ಲಾ (Ram Lalla Idol) ಪ್ರಾಣ ಪ್ರತಿಷ್ಠೆ ನಡೆಯಲಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಜನವರಿ 22 ರ ಕಾರ್ಯಕ್ರಮದ ಪ್ರಮುಖ ಅತಿಥಿಗಳಲ್ಲಿ ಅವರು ಸೇರಿದ್ದಾರೆ. ಪ್ರಾಣ ಪ್ರತಿಷ್ಠೆಯ ದಿನದಂದೇ ಪ್ರಧಾನಿಯವರು ಅಯೋಧ್ಯೆ ನಗರವನ್ನು ತಲುಪುವ ನಿರೀಕ್ಷೆಯಿದೆ. ಪ್ರಸ್ತುತ ಪ್ರಧಾನಮಂತ್ರಿಯವರು ದೇಶಾದ್ಯಂತ ವಿವಿಧ ದೇವಾಲಯಗಳ ಪ್ರವಾಸದಲ್ಲಿದ್ದು, 11 ದಿನಗಳ ಕಠಿಣ ವ್ರತಾನುಷ್ಠಾನದಲ್ಲಿದ್ದಾರೆ.
ಪ್ರಧಾನಿಯವರು ಅಯೋಧ್ಯೆಗೆ ಆಗಮಿಸಿ ಸೋಮವಾರ ಮಧ್ಯಾಹ್ನ 12:05ಕ್ಕೆ ನಡೆಯಲಿರುವ ಪ್ರಾಣ ಪ್ರತಿಷ್ಠಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಮಲಲ್ಲಾ ಮೂರ್ತಿಯನ್ನು ದೇವಾಲಯದೊಳಗೆ ಪ್ರತಿಷ್ಠಾಪಿಸಿದ ನಂತರ ಪ್ರಧಾನಿಯವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಪ್ರಾರಂಭವಾಗುವ ನಿರೀಕ್ಷೆಯಿದೆ.
ಪ್ರಾಣ ಪ್ರತಿಷ್ಠೆ ಸಮಾರಂಭ ಮುಗಿದ ನಂತರ ಪ್ರಧಾನಿ ಕುಬೇರ ತಿಲಕ್ಕೆ ತೆರಳಲಿದ್ದಾರೆ. ಅವರು ಮಧ್ಯಾಹ್ನ 2:15 ಕ್ಕೆ ಅಲ್ಲಿಗೆ ತಲುಪಲಿದ್ದು, ಶಾಜರ್ ದೇವಾಲಯದಲ್ಲಿ ಪೂಜೆ ಸಲ್ಲಿಸಲಿದ್ದಾರೆ.
ಪ್ರಾಣ ಪ್ರತಿಷ್ಠೆಯ ವಿಶೇಷ ಸಂದರ್ಭಕ್ಕೆ ಗಣ್ಯರು ಸೇರಿದಂತೆ ಸಾವಿರಾರು ಜನರು ಪ್ರಧಾನಮಂತ್ರಿಯವರೊಂದಿಗೆ ಅಯೋಧ್ಯೆಯಲ್ಲಿ ಸಾಕ್ಷಿಯಾಗಲಿದ್ದಾರೆ. ಮುಕೇಶ್ ಅಂಬಾನಿ, ಗೌತಮ್ ಅದಾನಿ ಅವರಂತಹ ಉದ್ಯಮಿಗಳು, ಅಮಿತಾಬ್ ಬಚ್ಚನ್ ಮತ್ತು ಅನುಷ್ಕಾ ಶರ್ಮಾ ಅವರಂತಹ ಚಲನಚಿತ್ರ ತಾರೆಯರು ಮತ್ತು ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಪ್ರಸ್ತುತ ಮತ್ತು ಮಾಜಿ ಕ್ರಿಕೆಟಿಗರು ಸಮಾರಂಭದ ಅತಿಥಿಗಳಾಗಿರಲಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆಗೆ ಮುಹೂರ್ತ ನಿಗದಿಪಡಿಸಿದ್ದು ಬೆಳಗಾವಿಯ ವಿದ್ಯಾವಿಹಾರ ವಿದ್ಯಾಲಯ ಕುಲಪತಿ
ಅಯೋಧ್ಯೆ ದೇಗುಲದಲ್ಲಿ ಪ್ರತಿಷ್ಠಾಪನೆಯಾಗುವ ರಾಮ ಲಲ್ಲಾ ವಿಗ್ರಹವನ್ನು ಮೈಸೂರಿನ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್ ತಯಾರಿಸಿದ್ದಾರೆ. ಸುಮಾರು 150 ರಿಂದ 200 ಕೆಜಿ ತೂಕದ ಮತ್ತು 4 ಅಡಿ ಮತ್ತು 3 ಇಂಚು ಎತ್ತರದ ವಿಗ್ರಹ ಇದಾಗಿದೆ.
ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ದೇಶದ ಎಲ್ಲಾ ದೇವಾಲಯಗಳಲ್ಲಿ ಏಕಕಾಲಕ್ಕೆ ಗಂಟೆಗಳನ್ನು ಬಾರಿಸಲು ಉದ್ದೇಶಿಸಲಾಗಿದೆ. ಪ್ರಾಣ ಪ್ರತಿಷ್ಠೆಯ ದಿನ ದೇಶದಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಬಗ್ಗೆ ಮತ್ತಷ್ಟು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ