ದಾವಣಗೆರೆ: ಎಡಗೈಲಿ ಮಾಡಿದ ದಾನ ಬಲಗೈಗೆ ಗೊತ್ತಾಗಬಾರದು. ಇಂತಹ ಜಾಯಮಾನದ ದೊಡ್ಡ ವ್ಯಕ್ತಿ ನಟ ಪುನೀತ್ ರಾಜ್ಕುಮಾರ್. ಇವರು ಅಗಲಿದ ದಿನ ಇಡೀ ನಾಡಿಗೆ ನಾಡೇ ಮೌನವಾಗಿತ್ತು. ತಮ್ಮ ಮನೆ ಮಗನೇ ಮೃತಪಟ್ಟ ಎಂಬಂತೆ ಶೋಕದಲ್ಲಿ ಮುಳುಗಿತ್ತು. ಇದಕ್ಕೆಲ್ಲ ಕಾರಣ ಅವರು ಮಾಡಿದ ಕಾರ್ಯ. ಇಲ್ಲೊಬ್ಬ ಇಸ್ತ್ರಿ ಮಾಡುವ ವ್ಯಕ್ತಿಯ ಮಗಳಿಗೆ ಬರೋಬ್ಬರಿ 12.50 ಲಕ್ಷ ರೂಪಾಯಿ ವೆಚ್ಚ ಮಾಡಿ ನಟ ದಿ.ಪುನೀತ್ ಕಿಡ್ನಿ ಶಸ್ತ್ರ ಚಿಕಿತ್ಸೆ ಮಾಡಿಸಿದ್ದರು. ಪುನೀತ್ ಸಾವಿನ ನಂತರ ನಿತ್ಯ ಪುನೀತ್ ಅವರ ಫೋಟೋಗೆ ಪೂಜೆ ಸಲ್ಲಿಸುತ್ತಿದ್ದ ಆ ಯುವತಿ ಇಂದು ಸಾವನ್ನಪ್ಪಿದ್ದಾಳೆ. ಅಪ್ಪಟ ಪುನೀತ್ ಅಭಿಮಾನಿಯಾಗಿದ್ದ, ಪುನೀತ್ನಿಂದಲೇ ಜೀವದಾನ ಪಡೆದಿದ್ದ ಪ್ರೀತಿ ಎಂಬ 18ರ ಹರೆಯದ ಯುವತಿ ಪುನೀತ್ ಇದ್ದಲ್ಲಿಗೆ ಪಯಣ ಬೆಳೆಸಿದ್ದಾಳೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಪಟ್ಟಣದ ನಿವಾಸಿ ಕುಮಾರ ಹಾಗೂ ಮಂಜುಳಾ ದಂಪತಿ ಪುತ್ರಿ ಪ್ರೀತಿಗೆ 18 ವರ್ಷ ವಯಸ್ಸು. ಇವಳು ಅಪ್ಪಟ ಪುನೀತ್ ಅಭಿಮಾನಿ. ಪುನೀತ್ ಸಾವಿನಿಂದ ಲಕ್ಷಾಂತರ ಜನರ ಮನಸ್ಸಿನ ಮೇಲೆ ತೀವ್ರ ಸ್ವರೂಪದ ಗಾಯಗಳಾಗಿವೆ. ಆದ್ರೆ ಈ ಯುವತಿಗೆ ಸ್ವಲ್ಪ ಜಾಸ್ತಿಯೇ ಮನಸ್ಸಿಗೆ ಘಾಸಿಯಾಗಿತ್ತು. ಎರಡೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪ್ರೀತಿಗೆ ಒಂದು ಕಿಡ್ನಿಯಾದ್ರೂ ಹಾಕಬೇಕು. ಇಲ್ಲವಾದ್ರೆ ಉಳಿಯುವುದು ಕಷ್ಟ ಎಂದು ವೈದ್ಯರು ಹೇಳಿದ್ದರು. ತಂದೆ ಕುಮಾರ ಚನ್ನಗಿರಿ ಪಟ್ಟಣದಲ್ಲಿ ಇಸ್ತ್ರಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಕಡು ಬಡವ. ಆಗ ಕಿಡ್ನಿ ತರಲು ಹಣ ಇಲ್ಲ ಅಂತ ತಾನೇ ತನ್ನ ಒಂದು ಕಿಡ್ನಿ ಪುತ್ರಿಗೆ ಕೊಡಲು ಸಿದ್ಧರಾಗಿದ್ದರು. ಆದ್ರೆ ತಂದೆ ಕಿಡ್ನಿ ತೆಗೆದು ಮಗಳಿಗೆ ಹಾಕಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತೆ. ಕನಿಷ್ಟ ಆರು ತಿಂಗಳ ಕಾಲ ಆಸ್ಪತ್ರೆಯಲ್ಲಿ ಇರಬೇಕು. ಇದು ಈ ಕುಟುಂಬಕ್ಕೆ ಆಗದ ಕೆಲ್ಸ. ಈ ವಿಚಾರವನ್ನು ಯಾರೋ ಪುನೀತ್ ರಾಜ್ಕುಮಾರ್ ಅವರಿಗೆ ತಲುಪಿಸಿದ್ದರು.
ಪ್ರೀತಿಯ ಸ್ಥಿತಿ ಕಂಡು ಪುನೀತ್ ಅವರೇ ಬೆಂಗಳೂರಿಗೆ ಬರಲು ಹೇಳಿ. ಇವರಿಗೆ ಬೆಂಗಳೂರು ಮಣಿಪಾಲ್ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಸಿ, ತಂದೆ ಕುಮಾರನ ಕಿಡ್ನಿ ತೆಗೆದು ಮಗಳು ಪ್ರೀತಿಗೆ ಹಾಕಲಾಗಿತ್ತು. ಆಗ ಪ್ರೀತಿ ಸಾವಿನ ದವಡೆಯಿಂದ ಹೊರಬಂದಿದ್ದರು. ಹೀಗೆ ತನಗೆ ಮರುಜೀವ ನೀಡಿದ ಪುನೀತ್ ಸಾರ್ ದೇವರ ಸೇರಿದರು ಎಂದು ಪ್ರೀತಿ ವಿಪರೀತ ದುಃಖಿತಳಾಗಿದ್ದಳು. ಊಟ ಕೂಡಾ ಕಡಿಮೆ ಮಾಡುತ್ತಿದ್ದಳು. ಇದರಿಂದ ಕುಟುಂಬಸ್ಥರಿಗೆ ಆತಂಕ ಎದುರಾಗಿತ್ತು. ದೇಹದಲ್ಲಿ ರಕ್ತ ಕಡಿಮೆ ಆಗಿ ಕ್ರೇಟಿನ್ ಅಂಶ ಹೆಚ್ಚಾಗಿ ಮತ್ತೆ ಅನಾರೋಗ್ಯಕ್ಕೆ ತುತ್ತಾಗುತ್ತಿತ್ತಾಳೆ ತಮ್ಮ ಮಗಳು ಎಂದು ಕುಟುಂಬಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ರು. ಆದ್ರೆ ಈಗ ಪುನೀತ್ರಿಂದ ಜೀವದಾನ ಪಡೆದ ಯುವತಿ ಕೊನೆಯುಸಿರೆಳೆದಿದ್ದಾಳೆ.
ಪ್ರೀತಿ ಚನ್ನಗಿರಿ ಪಟ್ಟಣದಲ್ಲಿ ಆರನೇ ತರಗತಿ ಓದುತ್ತಿದ್ದಳು. ಆಗ ತೀವ್ರ ತಲೆ ನೋವು ಕಾಣಿಸಿಕೊಂಡಿತ್ತು. ತಲೆ ನೋವಿಗೆ ಔಷಧಿ ನೀಡಿ ಕುಟುಂಬ ಸದಸ್ಯರು ಸುಮ್ಮನಾಗುತ್ತಿದ್ದರು. ಆದ್ರೆ ತಲೆ ನೋವು ವಿಪರೀತವಾಗಿದ್ದು ಶಿವಮೊಗ್ಗ ಬೆಂಗಳೂರು ಸೇರಿದಂತೆ ಹತ್ತಾರು ಕಡೆ ಚಿಕಿತ್ಸೆ ಕೊಡಿಸಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋದಾಗ 12 ವರ್ಷದ ಪ್ರೀತಿಯ ಎರಡು ಕಿಡ್ನಿಗಳು ವಿಫಲವಾಗಿರುವ ಬಗ್ಗೆ ಗೊತ್ತಾಗಿದೆ. ಪಿಬಿ ಹೆಚ್ಚಾಗಿ ಕಿಡ್ನಿಗಳು ಕೆಲ್ಸಾ ಮಾಡುತ್ತಿಲ್ಲ ಎಂದು ವೈದ್ಯರು ಹೇಳಿದಾರೆ. ಇದರಿಂದ ಪೋಷಕರಿಗೆ ಆಕಾಶವೇ ಕಳಚಿ ಮೇಲೆ ಬಿದ್ದಂತಾಗಿದೆ. ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಯಲ್ಲಿಯೇ ಇದ್ದು ಚಿಕಿತ್ಸೆ ಕೊಡಲಾಗಿದೆ. ಅಲ್ಲಿಂದ ತಮ್ಮೂರಿಗೆ ಬಂದಿದ್ದಾರೆ. ವಾರದಲ್ಲಿ ಎರಡು ಸಲ ಕಿಡ್ನಿ ಡೈಯಾಲಿಸೀಸ್ ಮಾಡಿಸಬೇಕು. ಒಂದು ಸಲ ಡೈಯಾಲಿಸೀಸ್ ಗೆ ನಾಲ್ಕು ಸಾವಿರ ಖರ್ಚು. ಮಗಳಿಗೆ ವಿಪರೀತ ನೋವು. ಇದನ್ನ ನೋಡಿದ ತಂದೆ ಕುಮಾರ ಮಗಳಿಗೆ ಕಿಡ್ನಿ ನೀಡಲು ನಿರ್ಧರಿಸಿದ್ದರು. ಆದ್ರೆ ಇದಕ್ಕೆ ಲಕ್ಷಾಂತರ ಹಣ ಬೇಕು ಎಂಬ ವಿಚಾರ ತಿಳಿದು ಬೇಸರವಾಗಿತ್ತು.
ಅದು 2017ರ ಮಾರ್ಚ ತಿಂಗಳು. ಪ್ರೀತಿ ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ನಟ ಪುನೀತ್ ಗೆ ತಿಳಿದಿದೆ. ಸ್ವತ ಅವರೇ ಫೋನ್ ಮಾಡಿ ಅಂಜನಿಪುತ್ರ ಚಿತ್ರದ ಶೂಟಿಂಗ್ ನಡೆಯುತ್ತಿದ್ದ ಕಂಠೀರವ ಸ್ಟುಡಿಯೋಗೆ ಇವರನ್ನ ಕರೆಸಿಕೊಂಡು ಆಸ್ಪತ್ರೆಗೆ ಸೇರು ದುಡ್ಡು ನಾನು ಕೊಡುತ್ತೇನೆ ಎಂದು ಹೇಳಿ ಬರೋಬರಿ 12.30 ಲಕ್ಷ ರೂಪಾಯಿ ಆಸ್ಪತ್ರೆ ವೆಚ್ಚ ಪುನೀತ್ ನೀಡಿದ್ದರು. ಖರ್ಚಿಗೆ ಸ್ವಲ್ಪ ಹಣ ಕೊಡಬಹುದು ಎಂದು ಪ್ರೀತಿ ಕುಟುಂಬದವರು ತಿಳಿದಿದ್ದರು. ಆದ್ರೆ ಇಡೀ ಆಸ್ಪತ್ರೆ ಬಿಲ್ ಪುನೀತ್ ಪೇ ಮಾಡಿದ್ದರು. ಜೊತೆಗೆ ಆಸ್ಪತ್ರೆಯಿಂದ ಬಿಡುಗಡೆ ಆದ ಬಳಿಕ ಅವರ ಸದಾಶಿವ ನಗರದ ಮನೆಗೆ ಕರೆಸಿಕೊಂಡು ತಿಂಡಿಕೊಟ್ಟು. ನಂತರ ಅವರು ಒಂದು ಬಾಡಿಗೆ ಕಾರ್ ಮಾಡಿ ಪ್ರೀತಿ ಕುಟುಂಬ ಮನೆ ಸೇರುವಂತೆ ಮಾಡಿದ್ದರು. ಇದಕ್ಕೂ ಮೊದಲು ಆಸ್ಪತ್ರೆಯಲ್ಲಿ ಆರು ತಿಂಗಳ ಇದ್ದರು. ತಂದೆ-ತಾಯಿಗೆ ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿ ಇರುವ ವ್ಯವಸ್ಥೆ ಸಹ ಪುನೀತ್ ಅವರೇ ಮಾಡಿದ್ದರು. ಇನ್ನೇನು ನಮ್ಮ ಮಗಳು ನಮ್ಮ ಕೈ ಬಿಡುತ್ತಾಳೆ ಎಂದು ತಿಳಿದುಕೊಂಡಿದ್ದ ಕುಟುಂಬ ಸದಸ್ಯರಿಗೆ ಪುನೀತ್ ಸಹಾಯ ಮಾತ್ರ ಸಂಜೀವಿನಿ ಆಗಿತ್ತು. 2017ರಿಂದ 2023ರವಗೆರೆ ಆರೋಗ್ಯವಾಗಿದ್ದ ಪ್ರೀತಿ ನಿಧನಳಾಗಿದ್ದಾಳೆ. ತನ್ನ ಸಾವನ್ನ ದೂರ ಮಾಡಿದ್ದ ಪುನೀತ್ ಇರುವ ಸ್ಥಳಕ್ಕೆ ಪ್ರೀತಿ ಪಯಣ ಬೆಳೆಸಿದ್ದಾಳೆ.
ವರದಿ: ಬಸವರಾಜ್ ದೊಡ್ಮನಿ, ಟಿವಿ9 ದಾವಣಗೆರೆ
Published On - 11:14 am, Thu, 20 April 23