
ದಾವಣಗೆರೆ, ಜನವರಿ 18: ಹರಿಹರ ತಾಲೂಕಿನ ದೊಗ್ಗಳ್ಳಿ ಗ್ರಾಮದ ಆಂಜನೇಯ ಸ್ವಾಮೀ ದೇವಸ್ಥಾನದಲ್ಲಿ ನಡೆದಿದ್ದ ದರೋಡೆ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆ ಪೈಕಿ ಇಬ್ಬರು ತಂದೆ ಮತ್ತು ಮಗ ಎಂಬುದು ಗೊತ್ತಾಗಿದ್ದು, ತಮಗೆ ಸಹಾಯಕನೋರ್ವನನ್ನು ಇವರು ನೇಮಿಸಿಕೊಂಡಿದ್ದರು ಎಂಬ ಮಾಹಿತಿ ವಿಚಾರಣೆ ವೇಳೆ ಬಯಲಾಗಿದೆ.
ಶನಿವಾರ ಆಂಜನೇಯ ದೇಗುಲದಲ್ಲಿ ಕೈಚಳಕ ತೋರಿಸಿದ್ದ ಆಸಾಮಿಗಳು, ರಾತ್ರಿ ವೇಳೆ ದೇವಸ್ಥಾನಕ್ಕೆ ನುಗ್ಗಿ ಹತ್ತು ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿ ಮತ್ತು ಚಿನ್ನದ ಆಭರಣ ಎತ್ತಿಕೊಂಡು ಪರಾರಿಯಾಗಿದ್ದರು. ಘಟನೆ ಬಗ್ಗೆ ಪ್ರಕರಣ ದಾಖಲಾಗುತ್ತಿದ್ದಂತೆ ಹರಿಹರ ಗ್ರಾಮಾಂತರ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಆರೋಪಿಗಳು ತಗಲಾಕಿಕೊಂಡಿದ್ದಾರೆ. ವೀರೇಶ್ (64), ಶಿವಕುಮಾರ್ (26) ಮತ್ತು ಮಂಜುನಾಥ್ (40) ಬಂಧಿತರಾಗಿದ್ದು, ಆರೋಪಿಗಳಿಂದ 10.90 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವರು ದೇಗುಲಗಳನ್ನೇ ಟಾರ್ಗೆಟ್ ಮಾಡಿ ಕದಿಯುತ್ತಿದ್ದರು ಎನ್ನಲಾಗಿದ್ದು, ಮಲೇಬೆನ್ನೂರಿನ ಶ್ರೀರಾಮ ದೇವಸ್ಥಾನ ಸೇರಿದಂತೆ ಹತ್ತಾರು ದೇವಸ್ಥಾನ ಗಳಲ್ಲಿ ಕಳ್ಳತನ ಮಾಡಿದ್ದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.
ಇದನ್ನೂ ಓದಿ: ಎರಡು ವರ್ಷಗಳ ಹಿಂದೆ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಯುವತಿ ಸಾವು
ಇನ್ನು ಆರೋಪಿಗಳು ಕಳ್ಳತನ ಮಾಡಿದ ಬೆಳ್ಳಿಯನ್ನು ಕರಗಿಸಲು ಪ್ರಯತ್ನಿಸಿದ್ದು, ಈ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಪ್ರಕರಣ ಸಂಬಂಧ ಮಂಜುನಾಥ್ನನ್ನು ಮೊದಲು ಲಾಕ್ ಮಾಡಿದ್ದ ಪೊಲೀಸರು, ಆತನನ್ನು ತಮ್ಮದೇ ಸ್ಟೈಲ್ನಲ್ಲಿ ವಿಚಾರಿಸಿದಾಗ ಸತ್ಯ ಬಾಯ್ಬಿಟ್ಟಿದ್ದ. ಹಬ್ಬ ಅಥವಾ ಜಾತ್ರೆಗಳ ಮರುದಿನ ದೇಗುಲಗಳಲ್ಲಿ ದರೋಡೆ ಮಾಡೋದು ಇವರ ಕಾಯಕವಾಗಿದ್ದು, ಇವರ ಪ್ರಕಾರ ದೇವಸ್ಥಾನ ಕಳ್ಳತನ ಸ್ವಲ್ಪ ಸರಳ. ಭಕ್ತರ ವೇಷದಲ್ಲಿ ಹೋದರೆ ಆಯಿತು. ಯಾವುದನ್ನೂ ಹುಡುಕುವ ಅಗತ್ಯ ಇಲ್ಲ. ಆಭರಣಗಳು ದೇವರ ಮೈಮೇಲೆಯೇ ಇದ್ದರೆ, ಹುಂಡಿಯೂ ಕಣ್ಣಿಗೆ ಕಾಣುವ ರೀತಿ ಇರುತ್ತೆ ಎಂಬುದು ಆರೋಪಿಗಳ ಲೆಕ್ಕಾಚಾರವಾಗಿತ್ತು ಎನ್ನಲಾಗಿದೆ. ಆರೋಪಿಗಳು ಮೂಲತಃ ಹರಿಹರ ತಾಲೂಕಿನ ಶಂಷಿಪುರ ಗ್ರಾಮದವರಾಗಿದ್ದು, ಹಾಲಿ ದಾವಣಗೆರೆಯಲ್ಲಿ ವಾಸವಿದ್ದರು ಎಂಬುದು ಗೊತ್ತಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.