ಬೆಂಗಳೂರು, ಜನವರಿ 05: ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ವಿರುದ್ಧ ಆದಾಯ ಮೀರಿ ಆಸ್ತಿ ಗಳಿಕೆ ಕೇಸ್ಗೆ ಸಂಬಂಧಿಸಿದಂತೆ ಶಾಸಕ ಯತ್ನಾಳ್ ಹಾಗೂ ಸಿಬಿಐ ಸಲ್ಲಿಸಿರುವ ರಿಟ್ ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿ ನ್ಯಾ.ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಶುಕ್ರವಾರ ಆದೇಶ ಹೊರಡಿಸಲಾಗಿದೆ. ಜೊತೆಗೆ ಸಿಬಿಐ ಅರ್ಜಿ ಸಂಬಂಧ ಡಿಕೆ ಶಿವಕುಮಾರ್ಗೆ ಮತ್ತು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿಗಳಿಗೆ ಸೂಕ್ತವೆನಿಸಿದ ವಿಸ್ತೃತ ಪೀಠ ರಚಿಸಬಹುದು. ಯುದ್ಧೋಪಾದಿಯಲ್ಲಿ ಪ್ರಕರಣದ ವಿಚಾರಣೆಗೆ ವಕೀಲರ ಮನವಿ ಮಾಡಿದ್ದು, ಸಿಬಿಐ ತನಿಖೆಗೆ ನೀಡಿದ್ದ ಸಮ್ಮತಿ ಹಿಂಪಡೆದಿರುವುದನ್ನು ಪ್ರಶ್ನಿಸಲಾಗಿದೆ. ಬಹಳ ಪ್ರಮುಖವಾಗಿರುವ ಅಂಶಗಳನ್ನು ವಕೀಲರು ಪ್ರಸ್ತಾಪಿಸಿದ್ದಾರೆ.
ಇದನ್ನೂ ಓದಿ: ಡಿಕೆ ಶಿವಕುಮಾರ್ ವಿರುದ್ಧ ಆಸ್ತಿ ಗಳಿಕೆ ಕೇಸ್: ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಸಿಬಿಐ ಅರ್ಜಿ
ಕೋಲ್ಕತ್ತಾ ಹೈಕೋರ್ಟ್, ಸುಪ್ರೀಂಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿದ್ದಾರೆ. ಅಡ್ವೊಕೇಟ್ ಜನರಲ್ ಸಿಬಿಐ ಹಾಗೂ ಶಾಸಕ ಯತ್ನಾಳ್ ವಾದ ವಿರೋಧಿಸಿದ್ದಾರೆ. ಸಮ್ಮತಿ ನೀಡಿದ ನಂತರ ಹಿಂಪಡೆಯುವಂತಿಲ್ಲವೆಂದು ಸಿಬಿಐ ವಾದ ಮಂಡಿಸಿದೆ. ಎರಡೂ ಕಡೆ ವಾದ ಕೇಳಿದ ನಂತರ ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಲಾಗಿದೆ.
ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಕೂಡ ಅರ್ಜಿ ಸಲ್ಲಿಸಿದೆ. ಸಿಬಿಐಗೆ ನೀಡಿದ ಸಮ್ಮತಿ ಹಿಂಪಡೆಯಲು ಸರ್ಕಾರಕ್ಕೆ ಅಧಿಕಾರವಿದೆಯೇ? ಪೂರ್ವಾನ್ವಯವಾಗಿ ತನಿಖೆಗೆ ನೀಡಿದ ಸಮ್ಮತಿ ಹಿಂಪಡೆಯಬಹುದೇ ಎಂದು ಸರ್ಕಾರಕ್ಕೆ ನ್ಯಾ.ಕೃಷ್ಣ ದೀಕ್ಷಿತ್ರಿದ್ದ ಪೀಠ ಪ್ರಶ್ನೆ ಮಾಡಿತ್ತು. ಸರ್ಕಾರದ ನಿರ್ಧಾರವನ್ನು ಸಿಬಿಐ ಪ್ರಶ್ನಿಸುವಂತಿಲ್ಲ. ಸರ್ಕಾರದ ಕ್ರಮದಿಂದ ಸಿಬಿಐ ಬಾದಿತವಾಗಿಲ್ಲವೆಂದು ವಾದ ಮಂಡಿಸಲಾಗಿದೆ.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಹೂಡಿಕೆ ವಿವರ ಕೇಳಿ ಕೇರಳದ ಜೈಹಿಂದ್ ಚಾನಲ್ಗೆ ಸಿಬಿಐ ನೋಟಿಸ್
ರಾಜ್ಯದಲ್ಲಿ ಈ ರೀತಿಯ ಮೊದಲ ಪ್ರಕರಣವಿದು. ಹಿಂದಿನ ಸರ್ಕಾರ ನೀಡಿದ ಸಮ್ಮತಿಯನ್ನು ಹೊಸ ಸರ್ಕಾರ ಹಿಂಪಡೆಯಬಹುದೇ? ಸರ್ಕಾರದ ನಿರಂತರತೆಯ ಬಗ್ಗೆಯೂ ಉತ್ತರಿಸಬೇಕಿದೆ. ಗಂಭೀರ ವಿಚಾರವಾಗಿರುವುದರಿಂದ ವಿಸ್ತೃತ ಪೀಠಕ್ಕೆ ಕೇಸ್ ವರ್ಗಾಯಿಸುವ ಇಂಗಿತವನ್ನು ಹೈಕೋರ್ಟ್ ವ್ಯಕ್ತಪಡಿಸಿತ್ತು.
ಹೈಕೋರ್ಟ್ಗೆ ಸಿಬಿಐ ಅರ್ಜಿ ಸಲ್ಲಿಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದು, ರಾಜಕೀಯ ನಡಿತಾ ಇದೆ, ಏನೂ ಮಾಡಲು ಆಗಲ್ಲ. ಕೆಲವು ಅಧಿಕಾರಿಗಳು ರಾಜಕೀಯ ಮಾಡುತ್ತಿದ್ದಾರೆ. ನಾನು ನಂಬಿದ ದೇವರು, ನ್ಯಾಯ ಇದೆ. ಕಾಲ ಚಕ್ರ ತಿರುಗುತ್ತಿರುತ್ತದೆ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:57 pm, Fri, 5 January 24