ಬೆಂಗಳೂರು ಅ.08: ಗಣೇಶ ಚತುರ್ಥಿ, ದೀಪಾವಳಿ ಸಾಲು ಸಾಲು ಹಬ್ಬ ಹಿನ್ನೆಲೆಯಲ್ಲಿ ಗೋದಾಮಿನಲ್ಲಿ ಪಟಾಕಿ (Firecrackers) ಸಂಗ್ರಹಿಸಲು ಮಾಲಿಕರು ಶರುಮಾಡಿಕೊಂಡಿದ್ದಾರೆ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ಯಾವುದೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಪಟಾಕಿ ಗೋಡೌನ್ಗಳಲ್ಲಿ ಅಗ್ನಿ ಅವಘಡ ಸಂಭವಿಸುತ್ತಿವೆ. ಈ ಹಿಂದೆ ಹಾವೇರಿ (Haveri) ಹೊರವಲಯದ ಸಾತೇನಹಳ್ಳಿ ಬಳಿ ಕುಮಾರ್ ಎಂಬುವವರಿಗೆ ಸೇರಿದ ಭೂಮಿಕಾ ಪಟಾಕಿ ಗೋದಾಮಿನಲ್ಲಿ (Firecracker Godown) ಸಂಭವಿಸಿದ ಅಗ್ನಿ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದರು. ಘಟನೆ ನಡೆದು ಎರಡುವರೆ ತಿಂಗಳಲ್ಲಿ ಅತ್ತಿಬೆಲೆ ಬಾಲಾಜಿ ಪಟಾಕಿ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿ 14 ಜನ ಸಾವಿಗೀಡಾಗಿದ್ದಾರೆ. ಇದರಿಂದ ಎಚ್ಚತ್ತ ರಾಜ್ಯ ಸರ್ಕಾರ ರಾಜ್ಯಾದ್ಯಂತ ಇರುವ ಪಟಾಕಿ ಅಂಗಡಿಗಳನ್ನು ಪರಿಶೀಲಿಸುವಂತೆ ಸೂಚನೆ ನೀಡಿದೆ.
ಪಟಾಕಿ ಗೋಡೌನ್ ಅಗ್ನಿ ದುರಂತದ ಬಗ್ಗೆ ಬೆಂಗಳೂರಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಾತನಾಡಿ ಇನ್ಮುಂದೆ ಈ ರೀತಿ ಘಟನೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದೇನೆ. ಪ್ರಕರಣದ ಕುರಿತು ಜಿಲ್ಲಾಧಿಕಾರಿ, ಎಸ್ಪಿ ಜತೆ ಮಾತನಾಡಿದ್ದೇನೆ. ಪಟಾಕಿ ಅಂಗಡಿಗಳನ್ನು ಪರಿಶೀಲನೆ ಮಾಡಲು ಸೂಚನೆ ನೀಡಿದ್ದೇನೆ. ಘಟನೆ ಹೇಗಾಯ್ತು ಅಂತ ತನಿಖೆ ಮಾಡುತ್ತೇವೆ. ಪ್ರಾಣ ಕಳೆದುಕೊಂಡವರೆಲ್ಲ ಯುವಕರು ಇದ್ದಾರೆ. ಘಟನಾ ಸ್ಥಳಕ್ಕೆ ಮುಖ್ಯಮಂತ್ರಿಗಳ ಜೊತೆ ನಾನು ಕೂಡ ಹೋಗುತ್ತಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಪಟಾಕಿ ಅಗ್ನಿ ದುರಂತ: ಮೃತರ ಗುರುತು ಪತ್ತೆ, ಪರಿಹಾರ ಘೋಷಿಸಿದ ತಮಿಳುನಾಡು ಸರ್ಕಾರ
ಅಗ್ನಿಶಾಮಕದಳ, ಎಫ್ಎಸ್ಎಲ್ ವರದಿ ಆಧಾರದ ಮೇಲೆ ತನಿಖೆ ನಡೆಯುತ್ತದೆ. ಗೋಡೌನ್ ಮಾಲೀಕ, ಆತನ ಪುತ್ರ ಮತ್ತು ಜಾಗ ಕೊಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಕಡೆಯೂ ಪಟಾಕಿ ಗೋದಾಮು ಪರಿಶೀಲನೆ ಮಾಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಹೇಳಿದರು.
ಮೇಲ್ನೋಟಕ್ಕೆ ಅಗ್ನಿಶಾಮಕ ವಸ್ತುಗಳನ್ನು ಇಟ್ಟುಕೊಂಡಿರಲಿಲ್ಲ ಎಂಬುವುದು ಪ್ರಾಥಮಿಕ ಅಂಶದಲ್ಲಿ ತಿಳಿದುಬಂದಿದೆ. ಪ್ರಥಮ ವರ್ತಮಾನ ವರದಿಯನ್ನು ಕಠಿಣ ಕಾನೂನಿಗೆ ಅನ್ವಯ ಮಾಡಿದ್ದೇವೆ. ನರಹತ್ಯೆ, ಕೊಲೆಯಲ್ಲದ ನರಹತ್ಯೆ ಅಡಿ ಪ್ರಕರಣ ದಾಖಲಿಸಿದ್ದೇವೆ. ಘಟನೆ ಬಗ್ಗೆ ತಜ್ಞರು ವರದಿ ಕೊಡುತ್ತಾರೆ. 13 ಮೃತ ದೇಹಗಳ ಹೆಸರು ಗೊತ್ತಾಗಿದೆ. ಸಂಬಂಧಿಕರು ಬಂದು ನೋಡುತ್ತಿದ್ದಾರೆ. ಇದು ಬಹಳ ಕೆಟ್ಟ ದುರಂತ ಎಂದು ಹೇಳಿದರು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:35 pm, Sun, 8 October 23