ಕುರುಬ ಸಂಘವನ್ನು ಮಾರಿಕೊಂಡು ತಿನ್ನುವ ಪಿತೂರಿ ಮಾಡಿದ್ರು, ವಿರೋಧಿಸಿದ್ದಕ್ಕೆ ಕೊಲೆ ಬೆದರಿಕೆ ಬಂದಿತ್ತು: ಸಿದ್ದರಾಮಯ್ಯ

| Updated By: ರಮೇಶ್ ಬಿ. ಜವಳಗೇರಾ

Updated on: Nov 27, 2022 | 9:02 PM

ಕುರುಬ ಸಂಘವನ್ನು ಮಾರಿಕೊಂಡು ತಿನ್ನುವ ಪಿತೂರಿ ಮಾಡಿದ್ರು, ಅದನ್ನು ವಿರೋಧಿಸಿದಕ್ಕೆ ಕೊಲೆ ಬೆದರಿಕೆ ಬಂದಿತ್ತು ಎಂದು ಈ ಹಿಂದಿನ ಘಟನೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ನೆನಪಿಸಿಕೊಂಡರು.

ಕುರುಬ ಸಂಘವನ್ನು ಮಾರಿಕೊಂಡು ತಿನ್ನುವ ಪಿತೂರಿ ಮಾಡಿದ್ರು, ವಿರೋಧಿಸಿದ್ದಕ್ಕೆ ಕೊಲೆ ಬೆದರಿಕೆ ಬಂದಿತ್ತು: ಸಿದ್ದರಾಮಯ್ಯ
siddaramaiah
Follow us on

ಬೆಂಗಳೂರು: ನಾನು ಮುಖ್ಯಮಂತ್ರಿ ಆಗಿದ್ದಾಗ ಎಲ್ಲ ವರ್ಗಗಳನ್ನು ಸಮಾನವಾಗಿ ನೋಡಿದ್ದೆ.ನಾನು ಅಧಿಕಾರಕ್ಕೆ ಬರದಿದ್ದರೆ ಕುರುಬ ಸಂಘ ಉಳಿಯುತ್ತಿರಲಿಲ್ಲ. ಯಾರೋ ಸಂಘವನ್ನು ಮಾರಿಕೊಂಡು ತಿನ್ನುವ ಪಿತೂರಿ ಮಾಡಿದ್ದರು. ಅದನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ನನಗೆ ಕೊಲೆ ಬೆದರಿಕೆ ಕೂಡ ಬಂದಿತ್ತು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಹಿಂದಿನ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಇಂದು(ನವೆಂಬರ್ 27) ಕಾಳಿದಾಸ ಮತ್ತು ಸಂಗೊಳ್ಳಿ ರಾಯಣ್ಣ ವಿದ್ಯಾರ್ಥಿ ನಿಲಯದ ಹಳೆ ವಿದ್ಯಾರ್ಥಿಗಳ ಸಂಘದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಸಿದ್ದರಾಮಯ್ಯ. ಕುರುಬ ಸಂಘದ ಉಳಿವಿಗೆ ಜೀವ ಪಣಕ್ಕಿಟ್ಟು ಶ್ರಮಿಸಿದ್ದೇನೆ. ಇನ್ನು ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಕನಕ ಗುರು ಪೀಠ ಮಾಡಿದ್ದು ನಾನು. ಆದರೆ, ಬೇರೆಯವರು ನಾನು ಮಾಡಿದ್ದು ಎಂದು ಹೇಳಿಕೊಳ್ಳುತ್ತಾರೆ. ಕನಕ ಜಯಂತಿ ಎಲ್ಲಿಯೇ ನಡೆದಿದ್ದರೂ ಅದಕ್ಕೆ ಹೋಗುತ್ತಿದ್ದೆ. ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಇನ್ನು ಕನಕ ಗುರುಪೀಠ ಮಾಡಲು ಈಶ್ವರಪ್ಪ ಮೊದಲ ಸಭೆಗೆ ಬಂದಾಗ ದುಡ್ಡು ಕೊಡಬೇಕು ಎಂದು ಅಂದ್ರು. ಬಳಿಕ ಎರಡನೇ ಸಭೆಗೆ ಆ ಗಿರಾಕಿ ಕೆ.ಎಸ್​.ಈಶ್ವರಪ್ಪ ಬರಲೇ ಇಲ್ಲ. ಆದರೂ ಕೂಡ ಕೆ.ಎಸ್​​.ಈಶ್ವರಪ್ಪ ನಮ್ಮವ ಎಂದು ಜೈಕಾರ ಹಾಕ್ತೀರಿ ಎಂದರು.

ನಾನು ಓದುವಾಗ ಮಹಾರಾಜ ಹಾಸ್ಟೆಲ್ ಗೆ ಸೇರಿಕೊಳ್ಳುತ್ತೇನೆ ಎಂದು ಹೇಳಿದೆ. ನಮ್ಮ ಅಪ್ಪ ಬೇಡ, ಅಷ್ಟು ದುಡ್ಡು ಕೊಡಲು ಆಗಲ್ಲ ಎಂದರು. ಆಗ ರೂಮ್ ಮಾಡಿಕೊಂಡು ವಿದ್ಯಾಭ್ಯಾಸ ಮಾಡಿದೆ. ಎರಡು ಹೊತ್ತು ಅಡುಗೆ ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆಗ ಹೊಟೇಲ್ ನಲ್ಲಿ 32 ರೂಪಾಯಿ ಇತ್ತು. ಹೀಗಾಗಿ ನಾನು ಸಿಎಂ ಆದ ಮೇಲೆ ಹೆಚ್ಚು ಹಾಸ್ಟೆಲ್ ಗಳನ್ನು ಸ್ಥಾಪಿಸಿದೆ. ಹಾಸ್ಟೆಲ್ ಸಿಗದೆ ಇರುವವರಿಗೆ ವಿದ್ಯಾಸಿರಿ ಯೋಜನೆ ಜಾರಿಗೆ ತಂದು ವಿಧ್ಯಾರ್ಥಿಗಳಿಗೆ ಮಾಸಿಕ 1,500 ರೂಪಾಯಿ ಸಿಗುವಂತೆ ಮಾಡಿದೆ. ಈಗ ಬಿಜೆಪಿ ಸರ್ಕಾರ ಆ ಯೋಜನೆಯನ್ನು ನಿಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

: ಸಂವಿಧಾನ ಯಾರು ವಿರೋಧ ‌ಮಾಡ್ತಾರೋ ನಾನು ಅವರ ವಿರೋಧಿ. ಅವರು ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ವಿರೋಧಿಸುತ್ತೇನೆ. ನಾನು ಮಠ ಮಾಡದೆ ಹೋದರೆ, ಸ್ವಾಮೀಜಿ ‌ಇರ್ತಾ ಇದ್ರಾ. ನಾನು ರಿಸರ್ವೇಶನ್ ಕೊಡದೆ ಹೋಗಿದ್ದೆರೆ ಮೇಯರ್ ಆಗ್ತಾ ಇದ್ರಾ. ಕೆಳ ಹಂತದಿಂದ ಬೆಳಯಬೇಕು ಅಂತ ರಿಸರ್ವೇಷನ್ ಕೊಟ್ಟಿದ್ದು. ಕೈ ಬಾಯಿ ಶುದ್ಧ ಇಟ್ಟುಕೊಂಡು ಇರಬೇಕು. ಇಲ್ಲದೆ ಇದ್ರೆ ನಾನು 40 ವರ್ಷ ರಾಜಕೀಯ ಮಾಡಲು ಆಗುತ್ತಿರಲಿಲ್ಲ. ಒಂದೇ ಸಮುದಾಯ ನಂಬಿಕೊಂಡು ರಾಜಕೀಯ ಮಾಡುತ್ತಿದ್ದೀನಾ. ನಾನು ಅಂಬೇಡ್ಕರ್ ಅಲ್ಲ, ಆದರೆ ಅಂಬೇಡ್ಕರ್ ಅನುಯಾಯಿ ಎಂದು ಹೇಳಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 9:02 pm, Sun, 27 November 22