
ಬೆಂಗಳೂರು/ ನವದೆಹಲಿ, ನವೆಂಬರ್ 17: ‘ನವೆಂಬರ್ ಕ್ರಾಂತಿ’ ಎಂದು ಕಾಂಗ್ರೆಸ್‌ನಲ್ಲಿ (Congress) ನಾಯಕರು ನುಡಿಯುತ್ತಿದ್ದ ಭವಿಷ್ಯ ನಿಜವಾಗುತ್ತದೆಯಾ ಎಂಬ ಅನುಮಾನಗಳು ಶುರುವಾಗಿವೆ. ಕ್ರಿಕೆಟ್ನಲ್ಲಿ ಪವರ್ ಪ್ಲೇನಲ್ಲಿ ಹೊಡಿಬಡಿ ಆಟ ನಡೆಯುವಂತೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಪವರ್ ಪ್ಲೇ ಶುರುವಾದಂತೆ ಕಾಣಿಸುತ್ತಿದೆ. ಅದಕ್ಕೆ ಪುಷ್ಟಿ ನೀಡುವಂತೆ, ಇವತ್ತು ದೆಹಲಿಗೆ ಸಿಎಂ ಸಿದ್ದರಾಮಯ್ಯ ಪ್ರಯಾಣ ಬೆಳೆಸಲಿದ್ದಾರೆ. ಮೊನ್ನೆಯಷ್ಟೇ ಸಿಎಂ ಸಿದ್ದರಾಮಯ್ಯ (Siddaramaiah) ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿಯಾಗಿದ್ದರು. ಒಂದು ಮೂಲಗಳ ಪ್ರಕಾರ, ರಾಹುಲ್ ಭೇಟಿ ವೇಳೆಯೇ ಸಿದ್ದರಾಮಯ್ಯ ಸಂಪುಟ ಪುನಾರಚನೆ ಬಗ್ಗೆ ಪ್ರಸ್ತಾಪ ಮಾಡಿದ್ದಾರಂತೆ. ರಾಹುಲ್ ಗಾಂಧಿ ಸಹ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಚರ್ಚಿಸಿ ಎಂದು ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ, ಇವತ್ತು ಬೆಳಗ್ಗೆ 11ಗಂಟೆಗೆ ಸಿಎಂ ಪ್ರಯಾಣ ಆರಂಭಿಸಲಿದ್ದು, ಮಧ್ಯಾಹ್ನ 1.30ರ ವೇಳೆಗೆ ದೆಹಲಿ ತಲುಪಲಿದ್ದಾರೆ. ಮಧ್ಯಾಹ್ನ 3ಗಂಟೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಲಿದ್ದಾರೆ..
ಡಿಸಿಎಂ ಡಿಕೆ ಶಿವಕುಮಾರ್ ಹೈದರಾಬಾದ್ ಪ್ರವಾಸವನ್ನೂ ರದ್ದು ಮಾಡಿ, ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಸಿಎಂ ಭೇಟಿಗೂ ಮೊದಲೇ ಡಿ.ಕೆ.ಸುರೇಶ್ ಜೊತೆಗೆ ಡಿ.ಕೆ.ಶಿವಕುಮಾರ್ ಎಐಸಿಸಿ ಅಧ್ಯಕ್ಷ ಖರ್ಗೆ ಅವರನ್ನು ಶನಿವಾರ ಭೇಟಿಯಾಗಿದ್ದಾರೆ. ಸುಮಾರು 50 ನಿಮಿಷಗಳ ಕಾಲ ಚರ್ಚಿಸಿ ವಾಪಸಾಗಿದ್ದಾರೆ. ಭೇಟಿ ವೇಳೆ, ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಅಥವಾ ಪುನಾರಚನೆ, ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಚರ್ಚೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ವೇಳೆ ಸಚಿವ ಸಂಪುಟ ಪುನಾರಚನೆ ಪ್ರಸ್ತಾಪಕ್ಕೆ ಡಿ.ಕೆ.ಶಿವಕುಮಾರ್ ವಿರೋಧಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಹೊತ್ತಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಡುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ನಾನೇಕೆ ರಾಜೀನಾಮೆ ಕೊಡ್ಲಿ? ನಾನು ಕಾಂಗ್ರೆಸ್‌ಗೆ ಬ್ಲ್ಯಾಕ್‌ಮೇಲ್ ಮಾಡಲ್ಲ ಅಂತಾ ಸೂಚ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
ಹೀಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ದೆಹಲಿಯಲ್ಲಿ ದಾಳ ಉರುಳಿಸುತ್ತಿದ್ದರೆ, ಇತ್ತ ರಾಜ್ಯ ನಾಯಕರಲ್ಲಿ ಸಂಪುಟ, ನಾಯಕತ್ವದ ಚರ್ಚೆ ಜೋರಾಗೇ ನಡೆಯುತ್ತಿದೆ. ಈ ಹಿಂದೆ ರಾಜಣ್ಣ ಹೇಳಿದ್ದ ಸಂಪುಟ ಪುನಾರಚನೆ ಮಾನದಂಡದ ವಿಚಾರವನ್ನು ಗೃಹ ಸಚಿವ ಪರಮೇಶ್ವರ್ ಕೂಡ ಹೇಳಿದ್ದಾರೆ. ಸಂಪುಟ ಪುನಾರಚನೆಗೆ ಒಪ್ಪಿಗೆ ಕೊಟ್ರೆ ನಾಯಕತ್ವ ಬದಲಾವಣೆ ಇಲ್ಲ ಎಂದಿದ್ದಾರೆ. ಸತೀಶ್ ಜಾರಕಿಹೊಳಿ ಸಚಿವ ಸಂಪುಟದ ಬಗ್ಗೆ ಸಿದ್ದರಾಮಯ್ಯ ಸ್ಪಷ್ಟಪಡಿಸಿದರೆ ಫುಲ್ ಸ್ಟಾಪ್ ಬೀಳಲಿದೆ ಎಂದಿದ್ದಾರೆ.
ಇದನ್ನೂ ಓದಿ: ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ? ಸಂಕ್ರಾಂತಿ ನಂತರ ಇರುತ್ತಾ ಸರ್ಜರಿ?; ಟಿವಿ9ಗೆ ಎಕ್ಸ್ಕ್ಲೂಸಿವ್ ಮಾಹಿತಿ
ಮತ್ತೊಂದೆಡೆ, ಕಾಂಗ್ರೆಸ್ ಬೆಳವಣಿಗೆಯನ್ನು ನೋಡಿ ಪ್ರತಿಪಕ್ಷ ಬಿಜೆಪಿ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಮತ್ತು ಡಿಕೆ ನಡುವಿನ ಕಿತ್ತಾಟದಿಂದಲೇ ಸರ್ಕಾರ ಬೀಳಲಿದೆ ಎಂದಿದ್ದಾರೆ.
ಒಟ್ಟಿನಲ್ಲಿ, ಕಾಂಗ್ರೆಸ್‌ನ ಕ್ರಾಂತಿ ಬಗ್ಗೆ ಆ ಪಕ್ಷದಲ್ಲೇ ಯಾರೊಬ್ಬರಿಗೂ ಸರಿಯಾದ ಮಾಹಿತಿ ಇಲ್ಲ. ಅದರಲ್ಲೂ ಬಿಹಾರ ಸೋಲಿನ ಆಘಾತದಲ್ಲಿರುವ ಹೈಕಮಾಂಡ್ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.