ಬೆಂಗಳೂರು, ಜುಲೈ 14: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಇಬ್ಬರು ಮೇಲ್ವಿಚಾರಕರಿಂದ (invigilators) ಕರ್ತವ್ಯ ಲೋಪವಾಗಿರುವುದು ವೆಬ್ ಕಾಸ್ಟಿಂಗ್ನಿಂದ ಪತ್ತೆ ಆಗಿದ್ದು, ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್ ಪ್ರಸನ್ನ ಭಾನುವಾರ ಪತ್ರ ಬರೆದಿದ್ದಾರೆ.
ಬಿಎಂಟಿಸಿ, ಕೆಕೆಆರ್ಟಿಸಿಯ ಖಾಲಿ ಹುದ್ದೆಗಳನ್ನು ತುಂಬಲು ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪರೀಕ್ಷೆ ಮಾಡಲಾಗಿದೆ. ಈ ವೇಳೆ ಇಬ್ಬರು ಮೇಲ್ವಿಚಾರಕರು ಪರೀಕ್ಷಾ ಕರ್ತವ್ಯ ನಿರ್ವಹಣೆಯಲ್ಲಿ ಲೋಪವೆಸಗಿರುವುದನ್ನು ವೆಬ್ ಕಾಸ್ಟಿಂಗ್ನಿಂದ ಪತ್ತೆ ಹಚ್ಚಲಾಗಿದೆ.
ಇದನ್ನೂ ಓದಿ: ಅಕ್ರಮ ತಡೆಗೆ KEA ಎಕ್ಸಾಂನಲ್ಲಿ ವೆಬ್ ಕಾಸ್ಟಿಂಗ್ ಅಳವಡಿಕೆಗೆ ಪ್ಲಾನ್
ಬೆಂಗಳೂರಿನ ಕೆ.ಆರ್ ವೃತ್ತದಲ್ಲಿರುವ ಎಸ್ಜೆ ಪಾಲಿಟೆಕ್ನಿಕ್ನ ಕೊಠಡಿ ಸಂಖ್ಯೆ 102 ರಲ್ಲಿ (ಕೇಂದ್ರ ಸಂಕೇತ 112) ಕೊಠಡಿ ಮೇಲ್ವಿಚಾರಕರಾದ ಉಪನ್ಯಾಸಕ ಸಾಜಿದ್ ಪರೀಕ್ಷೆ ನಡೆಯುವಾಗ ಮೊಬೈಲ್ನಲ್ಲಿ ಮಾತನಾಡಿದ್ದು, ಕೆಇಎ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ನಿಂದ ಗಮನಿಸಲಾಗಿದೆ. ಇದು ಪರೀಕ್ಷಾ ಕರ್ತವ್ಯ ಲೋಪವಾದ್ದರಿಂದ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
ಕಲಬುರಗಿಯ ನೆಹರು ಗಂಜ್ನಲ್ಲಿರುವ ಶ್ರೀ ಶಬರಯ್ಯ ಗಾಡ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರದ ಕೊಠಡಿಯೊಂದರಲ್ಲಿ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಮಾತಾಡಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಒಬ್ಬ ಅಭ್ಯರ್ಥಿ ಮತ್ತೊಬ್ಬ ಅಭ್ಯರ್ಥಿಗೆ ಉತ್ತರ ಬರೆಯಲು ನೆರವು ನೀಡಿರುವುದು ಕಂಡುಬಂದಿದೆ. ಈ ವೇಳೆ ಕೊಠಡಿ ಮೇಲ್ವಿಚಾರಕರು ಅಲ್ಲೇ ಇದ್ದರೂ ಅದನ್ನು ತಡೆಯದೆ ನಿರ್ಲಕ್ಷ್ಯ ಮಾಡಿರುವುದು ಕಂಡುಬಂದಿದೆ. ಹಾಗಾಗಿ ಕೊಠಡಿ ಮೇಲ್ವಿಚಾರಕರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕಲಬುರಗಿ ಜಿಲ್ಲಾಧಿಕಾರಿಗೆ ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಜು 22ರಿಂದ ಅಂಗನವಾಡಿಗಳಲ್ಲಿ ಎಲ್ಕೆಜಿ-ಯುಕೆಜಿ ಆರಂಭ: ಕಾರ್ಯಕರ್ತೆಯರಿಗೆ ಜೀವ ವಿಮೆ
ಕೆಇಎ ಇದೇ ಮೊದಲ ಬಾರಿಗೆ ಜುಲೈ 13 ಮತ್ತು 14ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗೆ ಪೂರ್ಣ ಪ್ರಮಾಣದಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಿತ್ತು. ಭಾನುವಾರ ನಡೆದ ಪರೀಕ್ಷೆಯಲ್ಲಿ ಒಟ್ಟು ಶೇ 68 ರಷ್ಟು ಅಭ್ಯರ್ಥಿಗಳು ಹಾಜರಾಗಿದ್ದರು. ಶನಿವಾರ ನಡೆದ ಪರೀಕ್ಷೆಯಲ್ಲಿ ಶೇ 34ರಷ್ಟು ಹಾಜರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:31 pm, Sun, 14 July 24