ಜು 22ರಿಂದ ಅಂಗನವಾಡಿಗಳಲ್ಲಿ ಎಲ್‌ಕೆಜಿ-ಯುಕೆಜಿ ಆರಂಭ: ಕಾರ್ಯಕರ್ತೆಯರಿಗೆ ಜೀವ ವಿಮೆ
ಬೆಂಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಜುಲೈ 22ರಿಂದ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ ಹಾಗೂ ಯುಕೆಜಿ ಶಾಲೆ ಆರಂಭಿಸುವುದಾಗಿ ಹೇಳಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯರಿಗೆ ವಿಮೆ ನೀಡುವ ಬಗ್ಗೆ ಶೀಘ್ರ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಬೆಂಗಳೂರು, ಜುಲೈ 14: ಜು.22ರಿಂದ ಅಂಗನವಾಡಿ (Anganwadi) ಕೇಂದ್ರಗಳಲ್ಲಿ ಪೂರ್ವಪ್ರಾಥಮಿಕ (ಎಲ್‌ಕೆಜಿ, ಯುಕೆಜಿ) ಶಾಲೆ ಆರಂಭಿಸಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ಮಾಹಿತಿ ನೀಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜುಲೈ 22ರಂದು ರಾಜ್ಯದ 250 ಅಂಗನವಾಡಿ ಕೇಂದ್ರಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಗಳು ಸಾಂಕೇತಿಕವಾಗಿ ಆರಂಭವಾಗಲಿದೆ. ಮಕ್ಕಳಿಗೆ ಇಲಾಖೆ ವತಿಯಿಂದಲೇ ಬ್ಯಾಗ್, ಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಅಂಗನವಾಡಿ ಕೇಂದ್ರಗಳ ಉನ್ನತೀಕರಣದ ಮೊದಲ ಭಾಗವಾಗಿ ಕ್ರಮಕೈಗೊಳ್ಳಲಾಗುತ್ತಿದೆ. ಮೊದಲ ಹಂತದಲ್ಲಿ 15-20 ಸಾವಿರ ಶಾಲೆಗಳಲ್ಲಿ ಗವರ್ನಮೆಂಟ್ ಮಾಂಟೆಸ್ಸರಿ ಕೂಡ ಆರಂಭಿಸುತ್ತೇವೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಜೀವವಿಮಾ ಯೋಜನೆ ಕುರಿತು ಶೀಘ್ರ ನಿರ್ಧಾರ ಮಾಡಲಾವುದು ಎಂದಿದ್ದಾರೆ.
ಅಂಗನವಾಡಿ ಶಿಕ್ಷಕಿಯರನ್ನು ಕೆಲಸದಿಂದ ತೆಗೆಯುವ ಪ್ರಶ್ನೆಯೇ ಇಲ್ಲ
ಈಗಾಗಲೇ ಇಲಾಖೆ ವತಿಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಆಹಾರ ಮತ್ತು ಶಿಕ್ಷಕಿಯರಿಗೆ ಸೀರೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಅಂಗನವಾಡಿ ಶಿಕ್ಷಕಿಯರನ್ನು ತೆಗೆಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. 30 ವರ್ಷಕ್ಕಿಂತ ಮೇಲ್ಪಟ್ಟ ಅಂಗನವಾಡಿ ಕೇಂದ್ರಗಳನ್ನು ಉನ್ನತ ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಟಿವಿ9 ರಿಯಾಲಿಟಿ ಚೆಕ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ
ರಾಜ್ಯದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸರ್ಕಾರ ಚಿಂತನೆ ನಡೆಸಿತ್ತು. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಅಂಗನವಾಡಿ ಕಾರ್ಯಕರ್ತೆಯರು ತೀವ್ರ ವ್ಯಕ್ತಪಡಿಸಿದ್ದು, ಪ್ರತಿಭಟನೆ ಕೂಡ ಮಾಡಿದ್ದರು.
ಸರ್ಕಾರಕ್ಕೆ ಈ ಹಿಂದೆ ಹಲವು ಬಾರಿ ಅಂಗನವಾಡಿ ಕೇಂದ್ರಗಳಲ್ಲೇ ಎಲ್‌ಕೆಜಿ-ಯುಕೆಜಿ ತರಗತಿ ಆರಂಭಿಸುವುದಕ್ಕೆ ಮನವಿ ಮಾಡಲಾಗಿತ್ತಂತೆ. ಆದರೆ ಈ ಮನವಿಗೆ ಸರ್ಕಾರಗಳು ಪುರಸ್ಕರಿಸಿರಲಿಲ್ಲ. ಆದರೆ ಈಗ ಅಂಗನವಾಡಿಗೆ ಸೇರುವ ಮಕ್ಕಳನ್ನ ಆಯಾ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ-ಯುಕೆಜಿ ತರಗತಿಗೆ ಸೇರಿದರೆ ಅಂಗನವಾಡಿ ಕೇಂದ್ರಗಳು ಖಾಲಿ ಆಗುತ್ತವೆ.
ಇದನ್ನೂ ಓದಿ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ: ಯಾರನ್ನೂ ಕೆಲಸದಿಂದ ತೆಗೆಯೋಲ್ಲ ಎಂದ ಹೆಬ್ಬಾಳ್ಕರ್
ಕಾರ್ಯಕರ್ತೆಯರು, ಸಹಾಯಕರಿಯರು, ಅಡುಗೆ ಸಹಾಯಕಿರು ಕೆಲಸ ಕಳೆದುಕೊಳ್ಳುವ ಸ್ಥಿತಿ ಬರತ್ತೆ. ಇದು ಮುಂದೊಂದು ದಿನ ಮಕ್ಕಳಿಲ್ಲದೇ ಅಂಗನವಾಡಿ ಕೇಂದ್ರಗಳು ಬಂದ್ ಆಗಿ ರಾಜ್ಯದಲ್ಲಿರುವ 1.30 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಯರು ಕೆಲಸವಿಲ್ಲದೇ ಬೀದಿಗೆ ಬೀಳ್ಳುವ ಸ್ಥಿತಿ ನಿರ್ಮಾಣವಾಗಲಿದೆ ಎಂದು ಅಂಗನವಾಡಿ ಕಾರ್ಯಕರ್ತೆಯರು ಆಕ್ರೋಶ ಹೊರಹಾಕಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:46 pm, Sun, 14 July 24