AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟಿವಿ9 ರಿಯಾಲಿಟಿ ಚೆಕ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ

ಅಧಿಕಾರಿಗಳು ಮನಸ್ಸು ಮಾಡಿದ್ರೆ ಸರ್ಕಾರದ ಯೋಜನೆ ಹಳ್ಳ ಹಿಡಿಸಬಹುದು. ಅದೇ ಯೋಜನೆಗಳಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ತರಬಹುದು. ಹೌದು, ಇಲ್ಲಿ ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳ ಹೊಟ್ಟೆ ಸೇರಬೇಕಾದ ಲಕ್ಷಾಂತರ ಮೌಲ್ಯದ ಅಕ್ಕಿ ಹಾಗೂ ಗೋಧಿ ಹುಳುಗಳ ಪಾಲಾಗಿದೆ. ಅಧಿಕಾರಿಗಳ ಬೇಜವಾಬ್ದಾರಿಗೆ ಸರ್ಕಾರದ ಉದ್ದೇಶವೇ ಮಣ್ಣುಪಾಲಾಗಿದೆ. ಟಿವಿ9 ರಿಯಾಲಿಟಿ ಚೆಕ್​ನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಬಟಾಬಯಲಾಗಿದೆ.

ಟಿವಿ9 ರಿಯಾಲಿಟಿ ಚೆಕ್: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಹುಳುಗಳ ಪಾಲಾದ ಲಕ್ಷಾಂತರ ರೂ. ಮೌಲ್ಯದ ಅಕ್ಕಿ, ಗೋಧಿ
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Edited By: |

Updated on: Jun 20, 2024 | 7:13 PM

Share

ಗದಗ, ಜೂ.20: ಮುಂಡರಗಿ(Mundaragi) ಪಟ್ಟಣದ ಹೊರ ವಲಯದಲ್ಲಿರವ ಗೋದಾಮಿನಲ್ಲಿ ಎಂಎಸ್​ಪಿಸಿಗೆ ಸೇರಿದ ನೂರಾರು ಕ್ವಿಂಟಾಲ್ ಅಕ್ಕಿ ಹಾಗೂ ಗೋಧಿ ಕೊಳೆಯುವ ಹಂತ ತಲುಪಿದೆ. ಗರ್ಭಿಣಿಯರು, ಮಕ್ಕಳ ಹೊಟ್ಟೆ ಸೇರಬೇಕಾದ ಪೌಷ್ಠಿಕ ಆಹಾರ ಹುಳುಗಳಿಗೆ ಆಹಾರವಾಗಿದೆ. ಎಂಎಸ್‌ಪಿಸಿ ಸಂಸ್ಥೆಯ ಮೂಲಕ ಮುಂಡರಗಿ, ಶಿರಹಟ್ಟಿ ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಬೇಕಿದ್ದ ಆಹಾರ ಪದಾರ್ಥ ವ್ಯರ್ಥವಾಗಿದೆ.

ಸರ್ಕಾರದಿಂದ ಸಬ್ಸಿಡಿ ಮೂಲಕ ಅಕ್ಕಿ ಹಾಗೂ ಗೋಧಿ ಖರೀದಿಗೆ ಮಹಿಳಾ ಸಪ್ಲಿಮೆಂಟರಿ ಪ್ರೊಡಕ್ಷನ್ ಸೆಂಟರ್​ಗೆ ನೀಡಿತ್ತು. ಎಂಎಸ್​ಪಿಸಿ ಜವಾಬ್ದಾರಿಯಿಂದ ಮಹಿಳೆಯರಿಗೆ, ಮಕ್ಕಳಿಗೆ ಮುಟ್ಟಿಸುವ ಕೆಲಸ ಮಾಡ್ಬೇಕಿತ್ತು. ಆದ್ರೆ, ನಿರ್ಲಕ್ಷ್ಯದಿಂದ ಗೋದಾಮಿನಲ್ಲಿ ಖರೀದಿಯಾದ ಅಕ್ಕಿ ಹಾಗೂ ಗೋಧಿ ಹುಳಾಗಿದೆ‌‌. ಕಳೆದ ಎರಡು ವರ್ಷಗಳಿಂದ ಈ ಗೋದಾಮಿನಲ್ಲಿನ ಅಕ್ಕಿ, ಗೋಧಿ ದಾಸ್ತಾನು ಮಾಡಿದ್ದು, ಪುನಃ ನೋಡಿಯೇ ಇಲ್ಲ.‌ ಸ್ಥಳೀಯರು ಕೆಟ್ಟ ದುರ್ವಾಸನೆ ಬರುತ್ತಿದ್ದನ್ನೂ ಗಮನಿಸಿ ಪರಿಶೀಲನೆ ಮಾಡಿದ್ದಾರೆ. ಆಗ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆಯ ಬಣ್ಣ ಬಯಲಾಗಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಅಧಿಕಾರಿಗಳ ನಿರ್ಲಕ್ಷ್ಯ; ರೈತರಿಗೆ ಬೆಳೆವಿಮೆ ನೀಡದೇ ದೋಖಾ!

ಇನ್ನು ಗದಗ ಜಿಲ್ಲೆಯ ಮುಂಡರಗಿ ಹಾಗೂ ಶಿರಹಟ್ಟಿ ತಾಲೂಕಿನ ನೂರಾರು ಅಂಗನವಾಡಿ ಕೇಂದ್ರಗಳ ಮೂಲಕ ಅಕ್ಕಿ, ಗೋಧಿ ಸರಬರಾಜು ಮಾಡಲಾಗುತ್ತದೆ. ಸರ್ಕಾರ ಕೂಡ ಈ ಎಂಎಸ್‌ಪಿಸಿ ಸಂಸ್ಥೆಯ ಸಬ್ಸಿಡಿ ಮೂಲಕ ಅಕ್ಕಿ ಹಾಗೂ ಗೋಧಿಯನ್ನು ನೀಡಿರುತ್ತದೆ. ಒಂದು ಕೆಜಿ ಅಕ್ಕಿಗೆ ಕೇವಲ 3 ರೂಪಾಯಿ ಖರೀದಿ ಮಾಡಿರುತ್ತಾರೆ. ಆದ್ರೆ, ಇಷ್ಟೊಂದು ಅಕ್ಕಿ ಹಾಗೂ ಗೋಧಿಯನ್ನು ಮಹಿಳೆಯರಿಗೆ ಹಾಗೂ ಮಕ್ಕಳಿಗೆ ವಿತರಣೆ ಮಾಡದೆ ಹಾಳು ಮಾಡಿದ್ದಾರೆ.

ಎಂಎಸ್‌ಪಿಸಿ ಸಂಸ್ಥೆಗೆ ನೀಡಿರುವ ಅಕ್ಕಿ ಹಾಗೂ ಗೋಧಿ ಮೇಲ್ವಿಚಾರಣೆಯನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಾಡಬೇಕು. ಅವರೂ ಕೂಡ ದಿವ್ಯ ನಿರ್ಲಕ್ಷ್ಯವನ್ನು ತೋರಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ 50 ರಿಂದ 80 ಟನ್ ಅಕ್ಕಿ ಹಾಗೂ ಗೋಧಿ ಹಾಳಾಗಿದೆ. ಅಕ್ಕಿ ಸಂಗ್ರಹಿಸಿದ ಗೋದಾಮಿನಲ್ಲಿ ಟಿವಿ9 ರಿಯಾಲಿಟಿ ಚೆಕ್ ನಡೆಸಿದ್ದು, ಹುಳು‌ ತುಂಬಿ ಅಕ್ಕಿ, ಗೋಧಿ ಉಪಯೋಗಕ್ಕೆ ಬಾರದಂತಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಎಂಎಸ್ಪಿಸಿ ಅಧ್ಯಕ್ಷೆ ದ್ರಾಕ್ಷಾಯಿಣಿ, ‘ಒಂದು ವರ್ಷದ ಹಿಂದೆ ಸ್ಟಾಕ್ ಮಾಡಲಾಗಿದ್ದು, ಈಗ ಹಾಳಾಗಿದೆ ಎನ್ನುತ್ತಿದ್ದಾರೆ.

ಸರ್ಕಾರ ಅಪೌಷ್ಟಿಕತೆ ನಿರ್ಮೂಲನೆ ಮಾಡಲು ಕೋಟ್ಯಾಂತರ ರೂಪಾಯಿ ಖರ್ಚು ಮಾಡುತ್ತಿದೆ. ಆದ್ರೆ, ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ಹಾಗೂ ಎಂಎಸ್‌ಪಿಸಿ ಸಂಸ್ಥೆಯ ದಿವ್ಯ ನಿರ್ಲಕ್ಷ್ಯದಿಂದ ಸರ್ಕಾರದ ಲಕ್ಷಾಂತರ ರೂಪಾಯಿ ವೆಚ್ಚದ ಅಕ್ಕಿ, ಗೋಧಿ ಹುಳುಗಳ ಪಾಲಾಗಿದೆ. ಇಷ್ಟೊಂದು ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ಮೇಲೆ ಕ್ರಮ ಆಗಬೇಕು ಎಂದು ಜನರು ಒತ್ತಾಯ ಮಾಡಿದ್ದಾರೆ. ಹಿರಿಯ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳುತ್ತಾರೆ ಎಂದು ಕಾದು ನೋಡಬೇಕು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ