ಚಿಕ್ಕಬಳ್ಳಾಪುರ: ಅಧಿಕಾರಿಗಳ ನಿರ್ಲಕ್ಷ್ಯ; ರೈತರಿಗೆ ಬೆಳೆವಿಮೆ ನೀಡದೇ ದೋಖಾ!
ಬೆಳೆವಿಮೆಗೆ ಸಂಬಂಧಪಟ್ಟಂತೆ ಸ್ಥಳೀಯ ಅಧಿಕಾರಿಗಳು ಸಮರ್ಪಕವಾಗಿ ಪರಿಶೀಲನೆ ನಡೆಸಿ, ನೀತಿ ನಿಯಮಗಳ ಅನುಸಾರ ಸರ್ವೆ ನಡೆಸದೇ ತಪ್ಪಾಗಿ ವರದಿ ನೀಡಿದ ಕಾರಣ, ನೂರಾರು ಜನ ರೈತರು ಬೆಳೆವಿಮೆಯಿಂದ ವಂಚಿತರಾದ ಘಟನೆ ಗೌರಿಬಿದನೂರು ತಾಲ್ಲೂಕಿನಲ್ಲಿ ನಡೆದಿದೆ. ಈ ಹಿನ್ನಲೆ ರೈತರು ಪ್ರತಿಭಟನೆಗೆ ಮುಂದಾಗಿದ್ದಾರೆ.
ಚಿಕ್ಕಬಳ್ಳಾಪುರ, ಮೇ.05: ಮೊದಲೇ ಬರಗಾಲದಿಂದ ಕಂಗಾಲಾಗಿರುವ ರೈತರಿಗೆ, ಬೆಳೆವಿಮೆ ನೀಡದೇ ದೋಖಾ ಮಾಡಿದ್ದು, ಈ ಹಿನ್ನಲೆ ಗೌರಿಬಿದನೂರು(Gauribidanur) ತಾಲ್ಲೂಕು ಪಂಚಾಯತಿ ಕಛೇರಿ ಮುಂದೆ ರೈತರು ಧರಣಿ ನಡೆಸುತ್ತಿದ್ದಾರೆ. ಹೌದು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಇಡಗೂರು, ಸೊಣಗಾನಹಳ್ಳಿ, ಬೇವಿನಹಳ್ಳಿ, ಅಲೀಪುರ, ಜಿ.ಬೊಮ್ಮಸಂದ್ರ, ಗಂಗಸಂದ್ರ, ಕಲ್ಲಿನಾಯಕನಹಳ್ಳಿ, ಮಿಣಕಿನಗುರ್ಕಿ, ಅಲಕಾಪುರ ಸೇರಿದಂತೆ ವಿವಿಧ ಗ್ರಾಮಪಂಚಾಯತಿಗಳ ರೈತರು ಬೆಳೆವಿಮೆ ನೋಂದಣಿ ಮಾಡಿಸಿದ್ದರು. ಆದರೆ, ಸ್ಥಳೀಯ ಪಂಚಾಯ್ತಿ ಅಧಿಕಾರಿಗಳು ಸಮರ್ಪಕವಾಗಿ ವರದಿ ತಯಾರಿಸಿ, ಕೃಷಿ ಇಲಾಖೆಗೆ ನೀಡದ ಕಾರಣ ಈಗ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ.
ಇನ್ನು ರೈತರು ಪ್ರತಿಭಟನೆ ನಡೆಸುತ್ತಿರುವ ವಿಷಯ ತಿಳಿದು ಸ್ಥಳಕ್ಕೆ ಬಂದ ಗೌರಿಬಿದನೂರು ತಹಶೀಲ್ದಾರ್ ಮಹೇಶ್‍ಪತ್ರಿ ಅವರು ಮಾತನಾಡಿ, ‘ಸ್ಥಳೀಯ ಅಧಿಕಾರಿಗಳ ಕರ್ತವ್ಯಲೋಪದಿಂದ ವರದಿಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಜಿಲ್ಲಾಧಿಕಾರಿಗಳ ಮದ್ಯಸ್ಥಿಕೆಯಿಂದ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ:ಬಿರುಬಿಸಿಲಿಗೆ ಬೆಳೆನಾಶದ ಭಯ; ರೈತರು ಬೆಳೆವಿಮೆ ಯೋಜನೆಯ ಲಾಭ ಪಡೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಬೆಳೆವಿಮೆ ಮಾಡಿಸಿಕೊಳ್ಳುವಂತೆ ರೈತರಿಗೆ ಮಾಹಿತಿ ನೀಡುತ್ತಾರೆ. ಆದರೆ, ಸ್ಥಳೀಯ ಅಧಿಕಾರಿಗಳ ತಪ್ಪು ವರದಿಯಿಂದ ಸಾವಿರಾರು ಜನ ರೈತರು ಬೆಳೆವಿಮೆಯಿಂದ ವಂಚಿತರಾಗಿದ್ದಾರೆ. ಕೆಲವು ವಿಮೆ ಕಂಪನಿಗಳು, ಕೆಲವು ಲಂಚಕೋರ ಅಧಿಕಾರಿಗಳ ಜೊತೆ ಶಾಮೀಲಾಗಿ ತಪ್ಪು ವರದಿ ಪಡೆದು, ರೈತರಿಗೆ ವಂಚನೆ ಎಸೆಗಿದ್ದಾರೆ ಎನ್ನುವ ಆರೋಪ ಕೂಡ ಕಂಡುಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:00 pm, Sun, 5 May 24