ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ: ಕೊವಿಡ್ ನಿಯಮಗಳ ಪ್ರಕಾರ ನಡೆಯಲಿದೆ ಕಾರ್ಯಕ್ರಮ
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಈಗ ಲಕ್ಷ ದೀಪೋತ್ಸವದ ಸಂಭ್ರಮ ಮನೆಮಾಡಿದೆ. ಒಟ್ಟು 5 ದಿನಗಳ ಕಾಲ ನಡೆಯುವ ಈ ದೀಪೋತ್ಸವ ಸಂಭ್ರಮ 14ರಂದು ಪೂರ್ಣಗೊಳ್ಳಲಿದೆ.

ದಕ್ಷಿಣ ಕನ್ನಡ: ಜಿಲ್ಲೆಯ ಸುಪ್ರಸಿದ್ಧ ತೀರ್ಥಕ್ಷೇತ್ರ ಧರ್ಮಸ್ಥಳದಲ್ಲಿ ಈಗ ಲಕ್ಷದೀಪೋತ್ಸವದ ಸಂಭ್ರಮ. ಪ್ರತಿವರ್ಷ ಲಕ್ಷಾಂತರ ಭಕ್ತರು ದೀಪೋತ್ಸವವನ್ನು ಕಣ್ತುಂಬಿಕೊಳ್ಳಲು ಮಂಜುನಾಥನ ಸನ್ನಿಧಿಯತ್ತ ಹೆಜ್ಜೆ ಹಾಕುತ್ತಿದ್ದರು. ಆದರೆ, ಕೊರೊನಾ ಮಹಾಮಾರಿಯ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರು ಕಡಿಮೆ ಸಂಖ್ಯೆಯಲ್ಲಿ ಆಗಮಿಸುವಂತೆ ನೋಡಿಕೊಳ್ಳಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿರುವ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವದ ಸಂಭ್ರಮ ಮನೆಮಾಡಿದೆ. ಒಟ್ಟು 5 ದಿನಗಳ ಕಾಲ ನಡೆಯುವ ಈ ಸಂಭ್ರಮ ಡಿ.14ರಂದು ಪೂರ್ಣಗೊಳ್ಳಲಿದೆ. ಹೀಗಾಗಿ, ಈಗ ಇಡೀ ಧರ್ಮಸ್ಥಳವೇ ದೀಪಗಳಿಂದ ಸಿಂಗಾರಗೊಂಡಿದೆ. ಕಾರ್ತಿಕ ಮಾಸದ ಈ ವಿಶೇಷ ಲಕ್ಷದೀಪ ಸಂಭ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರುವ ಸಾಧ್ಯತೆ ಇದೆ. ಕಳೆದ ವರ್ಷ 2,000 ಕಲಾವಿದರು ಸಹ ಧರ್ಮಸ್ಥಳಕ್ಕೆ ಬಂದಿದ್ದರು. ಆದರೆ ಈ ವರ್ಷ, ಕೊರೊನಾ ಕಾರಣದಿಂದ ಕಲಾವಿದರ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.
ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುವ ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಆರಂಭವಾಗಿರುವ ಲಕ್ಷದೀಪೋತ್ಸವದ ಅಂಗವಾಗಿ ಇಡೀ ಧರ್ಮಸ್ಥಳವೇ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದೆ. ದೇವಸ್ಥಾನ, ಹೆಗ್ಗಡೆಯವರ ಬೀಡಿನ ಮನೆ, ಪ್ರವೇಶ ದ್ವಾರ, ಉದ್ಯಾನ, ವಸತಿ ಛತ್ರಗಳು, ಬಾಹುಬಲಿ ಬೆಟ್ಟ ಸೇರಿದಂತೆ ಎಲ್ಲೆಡೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಡಿ.14ರ ಸೋಮವಾರ ರಾತ್ರಿ ಮಂಜುನಾಥ ಸ್ವಾಮಿಗೆ ಲಕ್ಷ ದೀಪೋತ್ಸವದ ವಿಶೇಷ ಪೂಜೆ ನಡೆಯಲಿದೆ. ದೀಪೋತ್ಸವದ ಅಂಗವಾಗಿ ಕ್ಷೇತ್ರದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ಸಾಹಿತ್ಯ ಸಮ್ಮೇಳವೂ ಪ್ರತೀ ವರ್ಷದಂತೆ ನಡೆಯಲಿದ್ದು ಎಲ್ಲಾ ಕಾರ್ಯಕ್ರಮಗಳಲ್ಲಿ ಕೊವಿಡ್ ನಿಯಮಗಳನ್ನು ಪಾಲಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
ಲಕ್ಷದೀಪೋತ್ಸವದ ಸಂಭ್ರಮವನ್ನು ಆನ್ಲೈನ್ನಲ್ಲಿ ವೀಕ್ಷಿಸಿ ಡಿ.14ರಂದು ರಾತ್ರಿ 2 ಗಂಟೆಗೆ ಆರಂಭವಾಗುವ ರಥೋತ್ಸವ ಮುಂಜಾನೆ 6.30ಕ್ಕೆ ಸ್ವಸ್ಥಾನ ಸೇರಲಿದೆ. ಈ ಬಾರಿ, ಆನ್ಲೈನ್ನಲ್ಲೇ ಲಕ್ಷದೀಪೋತ್ಸವವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಹೊಸಕಟ್ಟೆ ಉತ್ಸವ, ಕೆರೆಕಟ್ಟೆ ಉತ್ಸವ ನೆರವೇರಿದೆ. ಲಲಿತೋದ್ಯಾನ ಉತ್ಸವ, ಗೌರಿಮಾರುಕಟ್ಟೆ ಉತ್ಸವ ನಡೆಯಲಿದೆ. ಸುಗಮ ಸಂಗೀತ, ರಾಮಕಥಾ ನೃತ್ಯರೂಪಕ ನಡೆಯಲಿದೆ. ಸರ್ವಧರ್ಮ ಸಮ್ಮೇಳನ ಮತ್ತು ಸಾಹಿತ್ಯ ಸಮ್ಮೇಳನ ವಿವಿಧ ಗಣ್ಯರು ಭಾಗಿಯಾಗಲಿದ್ದಾರೆ.