ಯಾರು ಈ ರಾಮಚಂದ್ರ ರಾವ್​​? ಕಚೇರಿಯಲ್ಲೇ ರಾಸಲೀಲೆ ಮಾಡಿ ಸಿಕ್ಕಿಬಿದ್ದ ಡಿಜಿಪಿ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

ಡಿಜಿಪಿ ಕೆ ರಾಮಚಂದ್ರ ರಾವ್ ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದಾಗಲೇ ಮಹಿಳೆ ಜೊತೆಗೆ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆದ ನಂತರ ಸರ್ಕಾರ ಅವರನ್ನು ಅಮಾನತುಗೊಳಿಸಿದೆ. 1993ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ಇವರ ಹೆಸರು ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಸೇರಿದಂತೆ ಹಲವು ವಿವಾದಗಳಲ್ಲಿ ತಳುಕು ಹಾಕಿಕೊಂಡಿತ್ತು. ಹಾಗಾದರೆ ರಾಮಚಂದ್ರ ರಾವ್ ಯಾರು? ಅವರ ಹಿನ್ನೆಲೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಯಾರು ಈ ರಾಮಚಂದ್ರ ರಾವ್​​? ಕಚೇರಿಯಲ್ಲೇ ರಾಸಲೀಲೆ ಮಾಡಿ ಸಿಕ್ಕಿಬಿದ್ದ ಡಿಜಿಪಿ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ
ಡಿಜಿಪಿ ರಾಮಚಂದ್ರ ರಾವ್

Updated on: Jan 20, 2026 | 10:07 AM

ಬೆಂಗಳೂರು, ಜನವರಿ 20: ಕಚೇರಿಯಲ್ಲಿ ಸಮವಸ್ತ್ರದಲ್ಲಿದ್ದುಕೊಂಡೇ ಮಹಿಳೆ ಜತೆ ರಾಸಲೀಲೆ ನಡೆಸಿದ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿ ಡಿಜಿಪಿ ರಾಮಚಂದ್ರ ರಾವ್​ (DGP Ramachandra Rao) ಅವರನ್ನು ಸರ್ಕಾರ ಸೇವೆಯಿಂದ ಅಮಾನತುಗೊಳಿಸಿ ಆದೇಶಿಸಿದೆ. ಡಿಜಿಪಿ ರಾಮಚಂದ್ರ ರಾವ್ ಮೇಲಿನ ರಾಸಲೀಲೆ ಆರೋಪ ಈಗ ಹೊಸದಾದರೂ ಈ ಹಿಂದೆ ಅನೇಕ ಪ್ರಕರಣಗಳಲ್ಲಿ ಅವರ ಹೆಸರು ತಳಕುಹಾಕಿಕೊಂಡಿತ್ತು. ನಟಿ ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಸೇರಿದಂತೆ ಅನೇಕ ಪ್ರಕರಣಗಳನ್ನು ಅವರು ಎದುರಿಸುತ್ತಿದ್ದಾರೆ.

ಕೆ ರಾಮಚಂದ್ರ ರಾವ್ ಹಿನ್ನೆಲೆ

ಡಾ. ಕೆ ರಾಮಚಂದ್ರ ರಾವ್ 1993 ರ ಬ್ಯಾಚ್​​ನ (ಕರ್ನಾಟಕ ಕೇಡರ್) ಐಪಿಎಸ್ ಅಧಿಕಾರಿ. ಮೂಲತಃ ಆಂಧ್ರ ಪ್ರದೇಶದ ಗುಂಟೂರಿನವರು. ಮೂಲತಃ ಆಂಧ್ರದವರಾದರೂ ಕರ್ನಾಟಕ ಕೇಡರ್ ಅಧಿಕಾರಿ ಆಗಿದ್ದರಿಂದ ವೃತ್ತಿಪರ ಜೀವನದ ಬಹುಪಾಲು ಕರ್ನಾಟಕದ ವಿವಿಧ ಭಾಗಗಳಲ್ಲಿ (ದಾವಣಗೆರೆ, ಮೈಸೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಂಗಳೂರು) ಸೇವೆ ಸಲ್ಲಿಸಿದ್ದಾರೆ. 2023 ರ ಸೆಪ್ಟೆಂಬರ್​​ನಲ್ಲಿ ಡಿಜಿಪಿ ಹುದ್ದೆಗೆ ಬಡ್ತಿ ಪಡೆದಿದ್ದರು. ಇದೀಗ ರಾಸಲೀಲೆ ಪ್ರಕರಣದಲ್ಲಿ ಅಮಾನತಾಗುವ ಸದರ್ಭ ಅವರು ಕರ್ನಾಟಕದ ನಾಗರಿಕ ಹಕ್ಕುಗಳ ಜಾರಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಯಲ್ಲಿದ್ದರು.

ಎರಡನೇ ಮದುವೆಯಾಗಿದ್ದ ರಾಮಚಂದ್ರ ರಾವ್

ಡಿಜಿಪಿ ರಾಮಚಂದ್ರ ರಾವ್​ಗೆ ಎರಡನೇ ಮದುವೆಯಾಗಿತ್ತು. ಅವರು ಎರಡನೇ ಮದುವೆಯಾದ ಮಹಿಳೆಗೆ ಮೊದಲ ಪತಿಯಿಂದ ಜನಿಸಿದ್ದಾಕೆಯೇ ನಟಿ ರನ್ಯಾ ರಾವ್. ಚಿನ್ನ ಸ್ಮಗ್ಲಿಂಗ್ ಪ್ರಕರಣದಲ್ಲಿ ರನ್ಯಾ ರಾವ್ ಸಿಕ್ಕಿಬಿದ್ದಾಗ ರಾಚಂದ್ರ ರಾವ್ ಆಕೆಯಿಂದ ಅಂತರ ಕಾಯ್ದುಕೊಂಡಿದ್ದರು.

ಕೆ ರಾಮಚಂದ್ರ ರಾವ್ ಹಿಂದಿನ ಪ್ರಕರಣಗಳು

ದುಬೈನಿಂದ 14.2 ಕೆಜಿ ಚಿನ್ನ ಕಳ್ಳಸಾಗಣೆ ಮಾಡಿದ ಆರೋಪದ ಮೇಲೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆ ರಾಮಚಂದ್ರ ರಾವ್ ಮಲಮಗಳು ನಟಿ ರನ್ಯಾ ರಾವ್ ಅವರನ್ನು ಬಂಧಿಸಿದಾಗ ರಾವ್ ಬಗ್ಗೆಯೂ ಆರೋಪಗಳು ಕೇಳಿಬಂದಿದ್ದವು. ಬಳಿಕ ಅವರನ್ನು ಕಡ್ಡಾಯ ರಜೆಯಲ್ಲಿ ಕಳುಹಿಸಲಾಗಿತ್ತು. ಅದಾದ ನಂತರ 2025 ರ ಆಗಸ್ಟ್​​ನಲ್ಲಿ ಅವರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಲಾಯಿತು. ಮಲಮಗಳ ಚಟುವಟಿಕೆಗಳಿಂದ ದೂರವಿದ್ದು, ಆಕೆ ಜತೆ ಇತ್ತೀಚಿನ ದಿನಗಳಲ್ಲಿ ಯಾವುದೇ ಸಂಪರ್ಕವಿಲ್ಲ ಎಂದು ಹೇಳಿದ್ದರು.

ಮೈಸೂರಿನ ಇಲವಾಲದಲ್ಲಿ 2014ರಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಹಣವನ್ನು ದುರ್ಬಳಕೆ ಮಾಡಿದ್ದ ಆರೋಪ ರಾಮಚಂದ್ರ ರಾವ್ ವಿರುದ್ಧ ಕೇಳಿಬಂದಿತ್ತು. ಬಸ್ಸಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ರೂಪಾಯಿಗೂ ಹೆಚ್ಚಿನ ಹಣ ದರೋಡೆಯಾಗಿತ್ತು. ಆಗ ರಾಮಚಂದ್ರ ರಾವ್ ದಕ್ಷಿಣ ವಲಯದ ಐಜಿಪಿ ಆಗಿದ್ದರು. ದರೋಡೆ ಮಾಡಿದ್ದವರಿಂದ ವಶಕ್ಕೆ ಪಡೆಯಲಾಗಿದ್ದ ಹಣ ದುರ್ಬಳಕೆ ‌ಮಾಡಿಕೊಂಡಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದೇ ಪ್ರಕರಣದಲ್ಲಿ ರಾಮಚಂದ್ರ ರಾವ್​ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಸಿಐಡಿ ತನಿಖೆಯಲ್ಲಿ ಆರೋಪ ಸಾಬೀತಾಗಿರಲಿಲ್ಲ. ಹೀಗಾಗಿ ಪ್ರಕರಣ ನ್ಯಾಯಾಲಯದಲ್ಲಿ ವಜಾಗೊಂಡಿತ್ತು.

ಇದನ್ನೂ ಓದಿ: ರಾಸಲೀಲೆ ವಿಡಿಯೋ ಪ್ರಕರಣ: ಡಿಜಿಪಿ ರಾಮಚಂದ್ರ ರಾವ್ ಅಮಾನತು

2017 ರ ನವೆಂಬರ್ 30 ರಂದು ಭೀಮಾತೀರದ ನಟೋರಿಯಸ್ ಹಂತಕ ಧರ್ಮರಾಜ ಚಡಚಣ ಸಂಶಯಾಸ್ಪದ ಪೊಲೀಸ್ ಎನ್‌ಕೌಂಟರ್ ಮತ್ತು ಗಂಗಾಧರ ಚಡಚಣ ಸಂಶಯಾಸ್ಪದ ಕೊಲೆ ಪ್ರಕರಣಗಳಲ್ಲಿ ರಾಮಚಂದ್ರ ರಾವ್ ಹೆಸರು ಕೇಳಿಬಂದಿತ್ತು. ನಂತರ ಸಿಐಡಿ ತನಿಖೆ ನಡೆದು ರಾಮಚಂದ್ರ ರಾವ್ ಪಾತ್ರ ಇಲ್ಲ ಎಂಬುದು ಸಾಬೀತಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:04 am, Tue, 20 January 26