ಧಾರವಾಡದ ಕೇಂದ್ರ ಕಾರಾಗೃಹ ಕೈದಿಗಳ ಪಾಲಿಗೆ ಪಂಚತಾರಾ ಹೋಟೆಲ್: ಹಣ ಕೊಟ್ಟರೆ ಎಲ್ಲ ಸಿಗುತ್ತದೆ, ಆಡಿಯೋ ವೈರಲ್
ಧಾರವಾಡದ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಮೊಬೈಲ್, ಮದ್ಯ, ಸಿಗರೇಟ್ ಸುಲಭವಾಗಿ ಸಿಗುತ್ತಿರುವುದು ಆಘಾತಕಾರಿ. ಪೋಕ್ಸೋ ಕೈದಿಯೊಬ್ಬ ಹೊರಗಿನ ಬಾಲಕಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಜೈಲಿನ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಾನೆ. ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಸಹ 'ಹಾಯಾಗಿರುವುದಾಗಿ' ಆಡಿಯೋದಲ್ಲಿ ತಿಳಿಸಿದೆ. ಜೈಲು ಸಿಬ್ಬಂದಿಗಳ ಹಣದ ಆಸೆಯೇ ಇದಕ್ಕೆ ಕಾರಣ. ಡಿಜಿಪಿ ಅಲೋಕ್ ಕುಮಾರ್ ಅವರ ಡ್ರಗ್ ಟೆಸ್ಟ್ ಕ್ರಮಗಳು ತುರ್ತಾಗಿ ಜಾರಿಯಾಗಬೇಕು.

ಧಾರವಾಡ, ಮಾ.14: ಜೈಲುಗಳು ಅಂದರೆ ಕೈದಿಗಳು ಪಶ್ಚಾತ್ತಾಪ ಪಡುವ ಶಿಕ್ಷಾ ತಾಣಗಳಾಗಬೇಕು. ಆದರೆ ಧಾರವಾಡದ ಕೇಂದ್ರ ಕಾರಾಗೃಹ ಮಾತ್ರ ಕೈದಿಗಳ ಪಾಲಿಗೆ ಪಂಚತಾರಾ ಹೋಟೆಲ್ ಆಗಿ ಮಾರ್ಪಟ್ಟಿದೆಯೇ ಎಂಬ ಸಂಶಯ ಮೂಡಿದೆ. ಪೋಕ್ಸೋ ಕಾಯ್ದೆಯಡಿ ಜೈಲು ಸೇರಿರುವ ಕೈದಿಯೊಬ್ಬ ಹೊರಗಿನ ಬಾಲಕಿಯೊಂದಿಗೆ ಮಾತನಾಡಿರುವ ಆಡಿಯೋ ಈಗ ಸಂಚಲನ ಮೂಡಿಸಿದೆ. ಪೋಕ್ಸೋ ಪ್ರಕರಣದ ಕೈದಿ ಪರ್ವೇಜ್ ಎಂಬಾತ ಬಾಲಕಿಯೊಂದಿಗೆ ಜೈಲಿನಿಂದಲೇ ಫೋನ್ನಲ್ಲಿ ಮಾತನಾಡಿದ್ದಾನೆ. “ಜೈಲಿನಲ್ಲಿ ಹಣ ಕೊಟ್ಟರೆ ಸಾಕು ಸಿಗರೇಟ್, ಸರಾಯಿ (ಮದ್ಯ) ಮತ್ತು ಮೊಬೈಲ್ ಸೇರಿದಂತೆ ಎಲ್ಲವೂ ಸಿಗುತ್ತದೆ. 300 ರೂಪಾಯಿ ನೀಡಿದರೆ ಸಿಗರೇಟ್ ಪ್ಯಾಕೆಟ್ ಕೈ ಸೇರುತ್ತದೆ” ಎಂದು ಆತ ಹೇಳಿಕೊಂಡಿದ್ದಾನೆ.
ಹಾವೇರಿಯ ನೇಹಾ ಹಿರೇಮಠ ಕೊಲೆ ಪ್ರಕರಣದ ಆರೋಪಿ ಫಯಾಜ್ ಕೂಡ ಇದೇ ಜೈಲಿನಲ್ಲಿದ್ದಾನೆ. ಬಾಲಕಿಯು “ನೇಹಾ ಕೊಲೆಗಡುಕ ಫಯಾಜ್ ಅಲ್ಲೇ ಇದ್ದಾನಾ?” ಎಂದು ಕೇಳಿದಾಗ, “ಹೌದು, ನಾವೆಲ್ಲರೂ ಒಂದೇ ಸೆಲ್ನಲ್ಲಿ (ಕೊಠಡಿ) ಹಾಯಾಗಿದ್ದೇವೆ. ಇಲ್ಲಿ ಯಾವುದೇ ಕಟ್ಟುನಿಟ್ಟಿನ ಕ್ರಮವಿಲ್ಲ, ಕ್ಯಾಂಟೀನ್ ಕೂಡ ಇದೆ” ಎಂದು ಪರ್ವೇಜ್ ಉತ್ತರಿಸಿದ್ದಾನೆ.
ಇದನ್ನೂ ಓದಿ: ಜೈಲುಗಳಲ್ಲಿ ಡ್ರಗ್ಸ್ ನೆಟ್ವರ್ಕ್ ಬ್ರೇಕ್ ಹಾಕಲು ಡಿಜಿಪಿ ಪ್ಲಾನ್; ರಾಜ್ಯದ ಎಲ್ಲಾ ಜೈಲುಗಳ ಕೈದಿಗಳಿಗೆ ಡ್ರಗ್ಸ್ ಟೆಸ್ಟ್!
ಜೈಲಿನೊಳಗೆ ಮೊಬೈಲ್ ಮತ್ತು ಮಾದಕ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿವೆ ಎಂದರೆ ಅಲ್ಲಿನ ಸಿಬ್ಬಂದಿಗಳು ಹಣದ ಆಸೆಗಾಗಿ ಕೈದಿಗಳೊಂದಿಗೆ ಕೈಜೋಡಿಸಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ಇತ್ತೀಚೆಗಷ್ಟೇ ಡಿಜಿಪಿ ಅಲೋಕ್ ಕುಮಾರ್ ಅವರು ಜೈಲುಗಳಲ್ಲಿ ಡ್ರಗ್ಸ್ ಮತ್ತು ಮೊಬೈಲ್ ಜಾಲವನ್ನು ಬ್ರೇಕ್ ಮಾಡಲು ‘ಡ್ರಗ್ ಟೆಸ್ಟ್’ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಘೋಷಿಸಿದ್ದರು. ಆದರೆ ಧಾರವಾಡ ಜೈಲಿನಲ್ಲಿ ಇಂತಹ ಅಕ್ರಮಗಳು ನಡೆಯುತ್ತಿರುವುದು ಇಲಾಖೆಯ ಉದ್ದೇಶಕ್ಕೆ ಸವಾಲೊಡ್ಡಿದಂತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
