ಹುಬ್ಬಳ್ಳಿ: ಬಿಜೆಪಿಯ ಕೆಲ ನಾಯಕರು ನನ್ನನ್ನು ಆಹ್ವಾನಿಸಿರುವುದು ನಿಜ. ಆದರೆ ನಾನಿನ್ನೂ ಯಾವುದೆ ತೀರ್ಮಾನ ತೆಗೆದುಕೊಂಡಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ, ಜೆಡಿಎಸ್ ನಾಯಕ ಬಸವರಾಜ ಹೊರಟ್ಟಿ ಹೇಳಿದರು. ತಮ್ಮ ವಿರುದ್ಧ ಮಾಡಲಾಗಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ಕೆಲವರು ಮಾಡಿರುವ ಆರೋಪಗಳಿಗೆ ನಾನು ಶೀಘ್ರ ಉತ್ತರ ನೀಡುತ್ತೇನೆ. ಅವರು ನಲವತ್ತು ವರ್ಷಗಳ ಹಿಂದಿನ ವಿಚಾರದ ಬಗ್ಗೆ ಹೇಳಿದ್ದಾರೆ. ಆವತ್ತು ಏನಾಗಿತ್ತು ಎನ್ನುವ ಬಗ್ಗೆ ನನ್ನ ಬಳಿ ದಾಖಲೆಗಳು ಇವೆ. ಎಲ್ಲದಕ್ಕೂ ನಾನು ದಾಖಲೆ ಸಮೇತ ಉತ್ತರ ನೀಡುತ್ತೇನೆ ಎಂದು ಹೊರಟ್ಟಿ ತಿಳಿಸಿದರು.
ನಾನು ಬೆಂಗಳೂರಿನಲ್ಲಿದ್ದಾಗ ನನ್ನ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಎಫ್ಐಆರ್ ಮಾಡಿದ ಇನ್ಸ್ಪೆಕ್ಟರ್ ಇದೀಗ ಅಮಾನತಾಗಿದ್ದಾರೆ. ಎಫ್ಐಆರ್ಗೂ ತಡೆಯಾಜ್ಞೆ ಸಿಕ್ಕಿದೆ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ದಾಖಲೆ ಸಮೇತ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಯಾರಿಂದ ಏಕೆ ದೂರು ಗೊತ್ತಿಲ್ಲ: ಜೋಶಿ
ಬಸವರಾಜ ಹೊರಟ್ಟಿ ಅವರ ಬಿಜೆಪಿ ಸೇರ್ಪಡೆ ವಿರೋಧಿಸಿ ವರಿಷ್ಠರಿಗೆ ದೂರು ನೀಡಿರುವ ಕುರಿತು ಧಾರವಾಡದಲ್ಲಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹೊರಟ್ಟಿ ವಿರುದ್ಧ ಯಾರು, ಯಾಕೆ ದೂರು ಕೊಟ್ಟಿದ್ದಾರೆಂದು ಗೊತ್ತಿಲ್ಲ ಎಂದರು. ಬಿಜೆಪಿಗೆ ಸೇರ್ಪಡೆಯಾಗ್ತೇನೆಂದು ಹೊರಟ್ಟಿ ಇನ್ನೂ ಹೇಳಿಲ್ಲ. ಅಷ್ಟರೊಳಕೆ ಕೆಲವರು ದೂರು ಕೊಟ್ಟಿದ್ದಾರೆ. ಯಾರು ಎಂಬುದು ನನಗೆ ತಿಳಿದಿಲ್ಲ ಎಂದರು.
ಬಿಜೆಪಿ ನಾಯಕರ ಮನವಿ
ವಿಧಾನ ಪರಿಷತ್ ಸಭಾಪತಿಯೂ ಆಗಿರುವ ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ (Basavaraj Horatti) ಅವರ ಬಿಜೆಪಿ ಸೇರ್ಪಡೆ ಪಕ್ಷದ ಹಿರಿಯ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಹೊರಟ್ಟಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದನ್ನು ಆಕ್ಷೇಪಿಸಿರುವ ಅವರು, ತಮ್ಮ ನಿರ್ಧಾರಕ್ಕೆ 10 ಕಾರಣಗಳನ್ನೂ ನೀಡಿದ್ದಾರೆ. ಈ ಕುರಿತು ತಮ್ಮ ಆಕ್ಷೇಪ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಘಟಕದ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಹಲವು ನಾಯಕರ ಸಹಿಯೊಂದಿಗೆ ಕಳಿಸಲಾಗಿದೆ. ಪತ್ರದ ಜೊತೆಗೆ ಹಲವು ದಾಖಲೆಗಳನ್ನೂ ಈ ಭಾಗದ ಬಿಜೆಪಿ ನಾಯಕರು ಹೈಕಮಾಂಡ್ಗೆ ಸಲ್ಲಿಸಿದ್ದಾರೆ. ಯಾವುದೇ ಕಾರಣಕ್ಕೆ ಹೊರಟ್ಟಿ ಅವರನ್ನು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನಾಗಿ ಮಾಡಬಾರದೆಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಬಸವರಾಜ್ ಹೊರಟ್ಟಿ ಬಿಜೆಪಿ ಸೇರ್ಪಡೆಗೆ ತೀವ್ರ ವಿರೋಧ: ಹೈಕಮಾಂಡ್ಗೆ ರವಾನೆಯಾದ ಪತ್ರದಲ್ಲಿರುವ 10 ಅಂಶಗಳಿವು
ಇದನ್ನೂ ಓದಿ: ನವೀನ್ ದೇಹವನ್ನು ಬೇಗ ತರಿಸುವಂತೆ ಸರ್ಕಾರವನ್ನು ಆಗ್ರಹಿಸಿದರು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ
Published On - 1:38 pm, Sun, 20 March 22