ನಾಳಿದ್ದೇ… ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಾಗೂ ರಾಮಲಲ್ಲಾ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ. ಈಗ ಇಡೀ ದೇಶವೇ ಅಯೋಧ್ಯೆಯ ಪ್ರಭು ಶ್ರೀರಾಮ ಚಂದ್ರನ ಪ್ರಾಣ ಪ್ರತಿಷ್ಠಾಪನೆಯತ್ತ ಗಮನವಿಟ್ಟಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದ್ದು, ಇದರ ಮಧ್ಯೆ ಧಾರವಾಡದ ಶ್ರೀರಾಮಚಂದ್ರನ ಮಂದಿರವೊಂದು ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ. ಅಂದು ಮಂದಿರ ನಿರ್ಮಾಣಕ್ಕೆ ನಡೆಸಿದ ಜಾಥಾ ಇಂದು ಅದೇ ಮಂದಿರವಾಗಿ ಜನರ ನಡುವೆ ಎದ್ದು ನಿಂತಿದೆ.
ಕರ್ನಾಟಕದಲ್ಲೇ ಮೊದಲು ಎಂದು ಹೇಳಲಾಗುವ ಭಾರತ ಮಾತೆಯ ದೇವಸ್ಥಾನವೊಂದು ಧಾರವಾಡ ತಾಲೂಕಿನ ದೇವರ ಹುಬ್ಬಳ್ಳಿ ಗ್ರಾಮದಲ್ಲಿದೆ. ಇಲ್ಲಿಂದಲೇ ಧರ್ಮ ಜಾಗೃತಿ ಕೆಲಸಗಳು ನಡೆಯುತ್ತಿದ್ದವು. ಈ ಭಾರತ ಮಾತೆಯ ದೇವಸ್ಥಾನದಲ್ಲಿ ಪ್ರಭು ಶ್ರೀರಾಮ ಚಂದ್ರ, ಸೀತಾದೇವಿ ಹಾಗೂ ಆಂಜನೇಯನ ಮೂರ್ತಿ ಇರುವುದು ವಿಶೇಷ. ಈಗ ಇದೇ ಗಮನ ಸೆಳೆಯುತ್ತಿದೆ.
ಅಂದು ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ದೇವಸ್ಥಾನ ನಿರ್ಮಾಣಕ್ಕಾಗಿ ದೊಡ್ಡ ಹೋರಾಟವೇ ನಡೆದಿತ್ತು. ಈ ಹೋರಾಟದಲ್ಲಿ ಧಾರವಾಡದಿಂದ ಅನೇಕ ಕರಸೇವಕರು ಕೂಡ ಪಾಲ್ಗೊಂಡಿದ್ದರು. ದೇವರಹುಬ್ಬಳ್ಳಿ ಗ್ರಾಮದಿಂದಲೂ ಇಬ್ಬರು ಕರಸೇವರು ಅಯೋಧ್ಯೆ ಹೋರಾಟದಲ್ಲಿ ಪಾಲ್ಗೊಂಡಿದ್ದರು. 1980ರ ದಶಕದಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ರಾಮ ರಥಯಾತ್ರೆ ಆರಂಭಿಸಿದ್ದರು. ಈ ರಥಯಾತ್ರೆ ಹಳ್ಳಿ ಹಳ್ಳಿಗಳಲ್ಲೂ ಸಂಚರಿಸಿತ್ತು. ಈ ರಥಯಾತ್ರೆಯಲ್ಲಿ ರಾಮ, ಸೀತೆ ಹಾಗೂ ಆಂಜನೇಯನ ಮೂರ್ತಿಗಳನ್ನು ಮೆರವಣಿಗೆ ಮಾಡಲಾಗಿತ್ತು. ದೇವರಹುಬ್ಬಳ್ಳಿ ಗ್ರಾಮದಲ್ಲಿ ಮೊದಲೇ ನಿರ್ಮಾಣವಾಗಿದ್ದ ಭಾರತ ಮಾತೆಯ ದೇವಸ್ಥಾನದಲ್ಲೇ ಈ ರಾಮ, ಸೀತೆ ಹಾಗೂ ಆಂಜನೇಯನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ಸ್ಥಳೀಯ ನಿವಾಸಿ ಲಕ್ಷ್ಮಣ ದೊಡ್ಡಮನಿ ಮಾಹಿತಿ ನೀಡಿದ್ದಾರೆ.
Also Read: ಗಂಗಾವತಿಯ ಹಳೆಅಯೋಧ್ಯೆ ಗ್ರಾಮದಲ್ಲಿ ತುಂಗಭದ್ರಾ ಬಂಡೆಗಳ ಮೇಲಿದೆ 10 ಕಿಮೀ ಉದ್ದದ ಸೀತೆಯ ಸೆರಗು!
80ರ ದಶಕದಲ್ಲಿ ಆರಂಭವಾಗಿದ್ದ ಅಯೋಧ್ಯೆ ಹೋರಾಟದ ಕಿಚ್ಚು ಹಳ್ಳಿ ಹಳ್ಳಿಗಳಿಗೂ ಪಸರಿಸಿತ್ತು. ದೇವರಹುಬ್ಬಳ್ಳಿ ಗ್ರಾಮದಲ್ಲೂ ಈ ಹೋರಾಟದ ಕಿಚ್ಚು ಹಬ್ಬಿ ಅದಕ್ಕಾಗಿ ದೇವಸ್ಥಾನವೂ ನಿರ್ಮಾಣವಾಗಿತ್ತು. ಅಂದು ನಡೆದ ಹೋರಾಟ ಇಂದು ಫಲಪ್ರದವಾಗಿದ್ದು, ದೇವರಹುಬ್ಬಳ್ಳಿ ಕರಸೇವಕರು ಇದೀಗ ಫುಲ್ ಖುಷಿಯಾಗಿದ್ದಾರೆ. ಅಂದಿನಿಂದ ಇಲ್ಲಿಯವರೆಗೂ ರಾಮನ ಜಪ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಗ್ರಾಮದಲ್ಲಿ ಆಯೋಜಿಸಿ ಜನರನ್ನ ಜಾಗೃತಿ ಮಾಡುವ ಕಾರ್ಯವನ್ನ ಇಲ್ಲಿನ ಗ್ರಾಮಸ್ಥರು ಹಾಗೂ ಇಲ್ಲಿನ ಮಠಾಧೀಶರು ಮಾಡುತ್ತಾ ಬಂದಿದ್ದಾರೆ ಎಂದು ಸಿದ್ದಾರೂಢ ಮಠದ ಮಠಾಧಿಪತಿ ಶ್ರೀ ಸಿದ್ದ ಶಿವಯೋಗಿ ಶ್ರೀಗಳು ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹನುಮ ಜನ್ಮ ಸ್ಥಳ ಗಂಗಾವತಿ ತಾಲೂಕಿನಲ್ಲೂ ಇದೆ ಅಯೋಧ್ಯೆ ಗ್ರಾಮ; ಕುತೂಹಲ ಕೆರಳಿಸಿದೆ ಇಲ್ಲಿರುವ ಪುರಾತನ ರಾಮ ಮಂದಿರ
ವಿಶ್ವ ಹಿಂದೂ ಪರಿಷತ್ ವತಿಯಿಂದ ಆರಂಭವಾಗಿದ್ದ ರಥಯಾತ್ರೆಯನ್ನು ದೇವರ ಹುಬ್ಬಳ್ಳಿಯಲ್ಲಿ ಅದ್ಧೂರಿಯಾಗಿ ಅಂದು ಮೆರವಣಿಗೆ ಮಾಡಲಾಗಿತ್ತು. ಅಯೋಧ್ಯೆ ಹೋರಾಟಕ್ಕೆ ಇದೇ ಭಾರತ ಮಾತೆಯ ದೇವಸ್ಥಾನ ಸ್ಪೂರ್ತಿ ಸಹ ತುಂಬಿತ್ತು. ಒಟ್ಟಾರೆಯಾಗಿ ಇದೀಗ ಅಯೋಧ್ಯೆಯಲ್ಲಿ ಶ್ರೀರಾಮ ವಿರಾಜಮಾನನಾಗುತ್ತಿದ್ದು, ದೇವರ ಹುಬ್ಬಳ್ಳಿಯ ಕರಸೇವಕರು ತೀವ್ರ ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ