ಹನುಮ ಜನ್ಮ ಸ್ಥಳ ಗಂಗಾವತಿ ತಾಲೂಕಿನಲ್ಲೂ ಇದೆ ಅಯೋಧ್ಯೆ ಗ್ರಾಮ; ಕುತೂಹಲ ಕೆರಳಿಸಿದೆ ಇಲ್ಲಿರುವ ಪುರಾತನ ರಾಮ ಮಂದಿರ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಯೋಧ್ಯೆ ಗ್ರಾಮವು ತುಂಗಭದ್ರಾ ನದಿ ದಡದಲ್ಲಿದೆ. ಈ ಗ್ರಾಮ ವಿಜಯನಗರ ಅರಸರ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತು. ಇದೀಗ ಹಳೆ ಅಯೋಧ್ಯೆ, ಹೊಸ ಅಯೋಧ್ಯೆ ಎಂದು ಎರಡು ಗ್ರಾಮಗಳಾಗಿ ವಿಂಗಡಿಸಲಾಗಿದೆ. ಎರಡು ಗ್ರಾಮಗಳಲ್ಲಿ ಒಟ್ಟು ಮೂರು ರಾಮನ ದೇವಸ್ಥಾನಗಳಿವೆ.
ಕೊಪ್ಪಳ, ಜ.18: ಜನವರಿ 22ಕ್ಕೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಇದೆ. ಹೀಗಾಗಿ ಇಡೀ ದೇಶದಲ್ಲೇ ಈಗ ರಾಮನಾಮ ಸ್ಮರಣೆ ನಡೀತಿದೆ (Ayodhya Ram Mandir). ಇದೇ ವೇಳೆ ಇದೀಗ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಯೋಧ್ಯೆ ಎನ್ನುವ ಗ್ರಾಮವೊಂದು ಭಾರಿ ಚರ್ಚೆಗೆ ಕಾರಣವಾಗಿದೆ (Koppal Ayodhya). ಅಯೋಧ್ಯೆ ರಾಮನಿಗೂ ಗಂಗಾವತಿ ತಾಲೂಕಿನಲ್ಲಿರುವ ಅಯೋಧ್ಯೆ ಎನ್ನುವ ಗ್ರಾಮಕ್ಕೂ ನಂಟಿದೆ ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಗ್ರಾಮ ತುಂಗಭದ್ರಾ ನದಿ ದಡದಲ್ಲಿದೆ. ಆದರೆ ಈ ಗ್ರಾಮದ ಇತಿಹಾಸದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮತ್ತೊಂದೆಡೆ ಇದೇ ತಾಲೂಕಿನಲ್ಲಿ ರಾಮನ ಭಂಟ ಹನುಮ ಜನಿಸಿದ ಸ್ಥಳವಾದ ಅಂಜನಾದ್ರಿ ಬೆಟ್ಟ, ಐತಿಹಾಸಿಕ ಪಂಪಾಸರೋವರ ಸೇರಿದಂತೆ ರಾಮಾಯಣಕ್ಕೆ ಸಂಬಂಧಿಸಿದ ಊರುಗಳು, ಕುರುಹುಗಳಿವೆ. ಈಗ ಇದೇ ತಾಲೂಕಿನಲ್ಲಿ ಅಯೋಧ್ಯೆ ಎನ್ನುವ ಹೆಸರು ಇರುವ ಗ್ರಾಮ ಕೂಡ ಇರುವುದು ಭಾರೀ ಕುತೂಹಲ ಕೆರಳಿಸಿದೆ. ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಿರುವ ಕಿಷ್ಕಿಂದೆ ಪ್ರದೇಶದಲ್ಲಿ ಇದೆ ಅಯೋಧ್ಯೆ ಗ್ರಾಮ ಎನ್ನಲಾಗುತ್ತಿದೆ. ಆದರೆ ಈ ಗ್ರಾಮಕ್ಕೆ ಯಾಕೆ ಈ ಹೆಸರು ಬಂತು ಎನ್ನುವುದ ಕುರಿತು ಸಂಪೂರ್ಣ ಮಾಹಿತಿ ಇಲ್ಲ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಯೋಧ್ಯೆ ಗ್ರಾಮವು ತುಂಗಭದ್ರಾ ನದಿ ದಡದಲ್ಲಿದೆ. ಈ ಗ್ರಾಮ ವಿಜಯನಗರ ಅರಸರ ಕಾಲದಲ್ಲಿಯೇ ಅಸ್ತಿತ್ವದಲ್ಲಿತ್ತು. ಇದೀಗ ಹಳೆ ಅಯೋಧ್ಯೆ, ಹೊಸ ಅಯೋಧ್ಯೆ ಎಂದು ಎರಡು ಗ್ರಾಮಗಳಾಗಿ ವಿಂಗಡಿಸಲಾಗಿದೆ. ಎರಡು ಗ್ರಾಮಗಳಲ್ಲಿ ಒಟ್ಟು ಮೂರು ರಾಮನ ದೇವಸ್ಥಾನಗಳಿವೆ. ಹಳೆ ಅಯೋಧ್ಯೆ ಗ್ರಾಮದಲ್ಲಿ ಇಂದಿಗೂ ರಾಮ, ಲಕ್ಷ್ಮಣ, ಸೀತೆ, ಆಂಜನೇಯ ದೇವಸ್ಥಾನಗಳಿವೆ. ಮೂರು ದೇವಸ್ಥಾನದಲ್ಲಿ ಪ್ರತಿನಿತ್ಯ ಗ್ರಾಮಸ್ಥರು ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ಇದೇ ಗ್ರಾಮದಲ್ಲಿ ಹಂಪಿಯಲ್ಲಿರುವಂತೆ ಪಂಪಾಪತಿ, ಈಶ್ವರ, ಭೀಮಕೊಂಡ, ಆಂಜನೇಯ, ಗಂಗಾಮಾತಾ ದೇವಾಲಯಗಳಿವೆ. ಇದೇ ಗ್ರಾಮದ ತುಂಗಭದ್ರಾ ನದಿಯಲ್ಲಿ ಚಿದಾನಂದ ಅವಧೂತರ ಕಟ್ಟೆಯು ಇದೆ.
ಇದನ್ನೂ ಓದಿ: ಅಯೋಧ್ಯೆ, 1992-ಡಿಸೆಂಬರ್ 6ರಂದು ಆಗಿದ್ದೇನು: ಕರಸೇವಕನ ನೆನಪಿನ ಪುಟದಿಂದ
ತಮ್ಮೂರಿಗೆ ಅಯೋಧ್ಯೆ ಅಂತ ಹೆಸರು ಯಾಕೆ ಬಂತು ಅಂತ ಗೊತ್ತಿಲ್ಲಾ. ಆದರೆ ಹನುಮ ಜನಿಸಿದ ನಾಡಿನಲ್ಲಿಯೇ ಅಯೋಧ್ಯೆ ಎನ್ನುವ ಹೆಸರಿನ ಊರು ಇರುವುದು ನಮ್ಮಲ್ಲಿಯೂ ಕುತೂಹಲ ಮೂಡಿಸಿದೆ. ಆದ್ದರಿಂದ ಇತಿಹಾಸ ತಜ್ಞರು ಹಾಗೂ ಸಂಶೋಧಕರು ಈ ಬಗ್ಗೆ ಸಂಶೋಧನೆ ಮಾಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಇನ್ನು ರಾಮ ಮಂದಿರ ಉದ್ಘಾಟನೆ ವೇಳೆ ತಮ್ಮೂರಿನಲ್ಲಿರುವ ರಾಮನ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿರೋ ಗ್ರಾಮಸ್ಥರು, ತಮ್ಮ ಗ್ರಾಮದ ಹೆಸರು ಕೂಡ ಅಯೋಧ್ಯೆ ಅಂತ ಇರೋದಕ್ಕೆ ಹೆಮ್ಮೆ ಪಡ್ತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:02 am, Thu, 18 January 24