ಹುಬ್ಬಳ್ಳಿಯಲ್ಲಿ ರೌಡಿಶೀಟರ್​​ಗಳ ನಡುವೆ ಮಾರಾಮಾರಿ, ಪೊಲೀಸರ ಗುಂಡೇಟು

ಹುಬ್ಬಳ್ಳಿಯಲ್ಲಿ ತಡರಾತ್ರಿ ರೌಡಿಶೀಟರ್​ಗಳ ನಡುವೆ ಮಾರಾಮಾರಿ ನಡೆದಿದೆ. ಗಲಾಟೆ ವೇಳೆ ಕೊಲೆ ಮಾಡಲು ಯತ್ನಿಸಿದ್ದ ರೌಡಿಶೀಟರ್​​ ಕಾಲಿಗೆ ಪೊಲೀಸರು ಗುಂಡು ಹಾರಿಸಿ, ವಶಕ್ಕೆ ಪಡೆದುಕೊಂಡಿದ್ದಾರೆ. ಮತ್ತೊಂದು ಘಟನೆಯಲ್ಲಿ ಅಪ್ರಾಪ್ತ ಬಾಲಕರ ನಡುವೆ ಗಲಾಟೆ ನಡೆದಿದೆ. ಗಲಾಟೆಯಲ್ಲಿ ಓರ್ವ ಬಾಲಕನ ಕುತ್ತಿಗೆಗೆ ಚಾಕುವಿನಿಂದ ಇರಿಯಲಾಗಿದೆ.

ಹುಬ್ಬಳ್ಳಿಯಲ್ಲಿ ರೌಡಿಶೀಟರ್​​ಗಳ ನಡುವೆ ಮಾರಾಮಾರಿ, ಪೊಲೀಸರ ಗುಂಡೇಟು
ಆರೋಪಿ ಅಫ್ತಾಬ್​ ಕರಡಿಗುಡ್ಡ
Edited By:

Updated on: Aug 19, 2024 | 12:54 PM

ಹುಬ್ಬಳ್ಳಿ, ಆಗಸ್ಟ್​ 19: ನಗರದಲ್ಲಿ (Hubballi) ತಡರಾತ್ರಿ ರೌಡಿಶೀಟರ್​​ಗಳ ನಡುವೆ ಮಾರಾಮಾರಿ ನಡೆದಿದ್ದು, ಪೊಲೀಸರು (Police) ಗುಂಡು ಹಾರಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರೌಡಿಶೀಟರ್​ಗಳಾದ ಜಾವೂರ್ ಮತ್ತು ಅಫ್ತಾಬ್​ ಕರಡಿಗುಡ್ಡ ನಡುವೆ ತಡರಾತ್ರಿ ಮಾರಾಮಾರಿ ನಡೆದಿದೆ. ಗಲಾಟೆ ವೇಳೆ ರೌಡಿಶೀಟರ್ ಅಫ್ತಾಬ್​ ಕರಡಿಗುಡ್ಡ ರೌಡಿಶೀಟರ್ ಜಾವೂರ್​ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದನು.

ವಿಚಾರ ತಿಳಿದು ಸೋಮವಾರ ಬೆಳಗ್ಗೆ ಪೊಲೀಸರು ರೌಡಿಶೀಟರ್ ಅಫ್ತಾಬ್​ನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಕಸಬಾಪೇಟೆ ಪೊಲೀಸರು ಆತ್ಮರಕ್ಷಣೆಗಾಗಿ ರೌಡಿಶೀಟರ್ ಅಫ್ತಾಬ್​ ಕರಡಿಗುಡ್ಡ ಕಾಲಿಗೆ ಗುಂಡು ಹೊಡೆದಿದ್ದಾರೆ. ಗಾಯಾಳು ರೌಡಿಶೀಟರ್ ಅಫ್ತಾಬ್​ನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಅವಳಿ ನಗರದಲ್ಲಿ ಪೊಲೀಸರಿಂದ ಮುಂದುವರೆದ ಗಾಂಜಾ ಕುಳಗಳ ಬೇಟೆ: 467 ಜನರು ವಶಕ್ಕೆ ಪಡೆದು ತಪಾಸಣೆ

ಕ್ಷುಲ್ಲಕ ವಿಚಾರಕ್ಕೆ ಗಲಾಟೆ, ಬಾಲಕನಿಗೆ ಚಾಕು ಇರಿತ

ಹುಬ್ಬಳ್ಳಿಯ ಮದಿನಿ ಕಾಲೋನಿಯಲ್ಲಿ ಇಬ್ಬರು ಅಪ್ತಾಪ್ತ ಬಾಲಕರ ನಡುವೆ ಕ್ಷುಲ್ಲಕ ವಿಚಾರಕ್ಕೆ ಗಲಾಟೆ ನಡೆದಿದ್ದು, ಓರ್ವನ ಕುತ್ತಿಗೆಗೆ ಚಾಕು ಇರಿಯಲಾಗಿದೆ. ಸಲೀಂ ಚಾಕು ಇರಿದ ಅಪ್ರಾಪ್ತ ಬಾಲಕ. ಮೊಹಮ್ಮದ್ ಸೋಫಿಯಾನ್ ಗಾಯಾಳು. ಗಾಯಗೊಂಡ ಮೊಹಮ್ಮದ್​ನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಕು ಇರಿದ ಅಪ್ರಾಪ್ತ ಬಾಲಕ ಸಲೀಂನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಬಾಲಕನ ಮೇಲೆ ಚಾಕು ಇರಿತ ಪ್ರಕರಣ ಸಂಬಂಧ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಮಾತನಾಡಿ, 15 ವರ್ಷದ ಬಾಲಕನಿಗೆ ಚಾಕು ಇರಿಯಲಾಗಿದೆ. ಪರಿಚಯಸ್ಥ ಹುಡಗನಿಗೆ ಚಾಕು ಇರಿಯಲಾಗಿದೆ. ಚಾಕು ಇರಿದು ಅಪ್ರಾಪ್ತ ಬಾಲಕನನ್ನು ವಶಕ್ಕೆ ಪಡೆಯಲಾಗಿದೆ. ಹತ್ತು ಸಾವಿರ ಸಾಲದ ವಿಷಯಕ್ಕಾಗಿ ಗಲಾಟೆ ನಡೆದಿದೆ. ಸಾಲಕ್ಕೆ ಪ್ರತಿಯಾಗಿ ಒಂದು ಸಾವಿರ ಬಡ್ಡಿ ಕಟ್ಟಬೇಕಿತ್ತು. ಅಪ್ರಾಪ್ತರನ್ನು ಬಳಸಿಕೊಂಡು ಕೆಲವರು ಬಡ್ಡಿ ವ್ಯವಹಾರ ಮಾಡುತ್ತಿದ್ದಾರೆ. ಚಾಕು ಇರಿದ ಸಲೀಂ ಸೇರಿ ಐವರನ್ನು ಬಂಧಿಸಲಾಗಿದೆ. ಬಂಧಿತರೆಲ್ಲರೂ ಅಪ್ರಾಪ್ತರು. ಬಡ್ಡಿ ಹಣ ನೀಡಿದ ಎಲ್ಲರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ