ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ಸ್‍ಗೆ ದಂಡ ವಿಧಿಸಿ ಗ್ರಾಹಕರ ಆಯೋಗ ಆದೇಶ
ಪ್ಲಾಟ್ ಖರೀದಿ ಪತ್ರ ಮಾಡಿಕೊಡದ ಬಿಲ್ಡರ್ಸ್‍ಗೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಗೀತಾ ಅವರು ನೀಡಿದ್ದ ರೂ. 3,66,000/- ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ.
ಧಾರವಾಡ, ಸೆಪ್ಟೆಂಬರ್ 6: ಬಾಗಲಕೋಟೆಯ ನಿವಾಸಿ ಗೀತಾ ಗೌಡರ ಧಾರವಾಡದ ಎಮ್.ಎಸ್. ಗ್ರೀನ್ ಕೌಂಟಿಯ ಮಾಲೀಕರಾದ ಶ್ರೀನಿವಾಸ ನಾಯ್ಡು ಅವರ ಇಟ್ಟಿಗಟ್ಟಿಯ ಬಳಿಯ ಲೇಔಟ್‌ನಲ್ಲಿ ಪ್ಲಾಟ್ (plot) ನಂ.108 ನ್ನು ರೂ. 4,80,000/-ಗಳಿಗೆ 2014ರಲ್ಲಿ ಖರೀದಿಸುವ ಕರಾರು ಒಪ್ಪಂದ ಮಾಡಿಕೊಂಡಿದ್ದರು. ಆ ಪೈಕಿ ಬೇರೆ ಬೇರೆ ದಿನಾಂಕದಂದು ಗೀತಾ ಒಟ್ಟು ರೂ. 3,66,000/- ಮುಂಗಡ ಹಣವನ್ನು ಕೊಟ್ಟಿದ್ದರು. ಬಾಕಿ ಮೊತ್ತವನ್ನು ಪಡೆದುಕೊಂಡು ಖರೀದಿ ಪತ್ರ ನೋಂದಣಿ ಮಾಡಿಕೊಡುವಂತೆ ಹಲವಾರು ಬಾರಿ ಕೇಳಿಕೊಂಡರೂ ಸಹ ಶ್ರೀನಿವಾಸ ನಾಯ್ದ ಖರೀದಿ ಪತ್ರ ನೋಂದಣಿ ಮಾಡಿ ಕೊಟ್ಟಿರಲಿಲ್ಲ. ಇದರಿಂದಾಗಿ ತನಗೆ ಮೋಸವಾಗಿದೆ ಮತ್ತು ಅವರು ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ಬಿಲ್ಡರ್ ವಿರುದ್ಧ ಗ್ರಾಹಕರ ರಕ್ಷಣಾ ಕಾಯಿದೆ ಅಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಈ ದೂರಿನ ಬಗ್ಗೆ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಮತ್ತು ಪ್ರಭು ಹಿರೇಮಠ ಅವರು ಹಣವನ್ನು ಪಡೆದುಕೊಂಡು ಗೀತಾ ಅವರಿಗೆ ಪ್ಲಾಟ್ ಖರೀದಿ ಪತ್ರ ನೋಂದಣಿ ಮಾಡಿಕೊಡಲು ವಿಫಲರಾಗಿರುವುದು ಮತ್ತು ಹಣವನ್ನು ಹಿಂತಿರುಗಿಸದೇ ಇರುವುದು ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ.
ಇದನ್ನೂ ಓದಿ: ಕೃಷ್ಣಂ ವಂದೇ ಜಗದ್ಗುರು : ಶ್ರೀಕೃಷ್ಣ ಜನ್ಮಾಷ್ಠಮಿಗೆ ಧಾರವಾಡದಲ್ಲಿ ಭಾವೈಕ್ಯತೆಯ ಮೆರಗು
ಈ ಹಿನ್ನೆಲೆಯಲ್ಲಿ ಗೀತಾ ಅವರು ನೀಡಿದ್ದ ರೂ. 3,66,000/- ಮತ್ತು ಅದರ ಮೇಲೆ ಪೂರ್ತಿ ಹಣ ಸಂದಾಯವಾಗುವವರೆಗೆ ಶೇ.8 ರಂತೆ ವಾರ್ಷಿಕ ಬಡ್ಡಿ ಲೆಕ್ಕ ಹಾಕಿ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ಕೊಡುವಂತೆ ಆಯೋಗ ಆದೇಶಿಸಿದೆ.
ಇದನ್ನೂ ಓದಿ: ಧಾರವಾಡ: ಸೇವಾ ನ್ಯೂನತೆ ಎಸಗಿದ ಬಿಸ್ಲೇರಿ ಕಂಪನಿಗೆ ದಂಡ ವಿಧಿಸಿದ ಗ್ರಾಹಕರ ಆಯೋಗ
ದೂರುದಾರರಿಗೆ ಆಗಿರುವ ಅನಾನುಕೂಲತೆ ಮತ್ತು ಮಾನಸಿಕ ಹಿಂಸೆಗಾಗಿ ರೂ. 50,000/- ಪರಿಹಾರ ಹಾಗೂ ಈ ಪ್ರಕರಣದ ಖರ್ಚು ವೆಚ್ಚ ಅಂತಾ ರೂ. 10,000/- ನೀಡುವಂತೆ ಶ್ರೀನಿವಾಸ ನಾಯ್ಡು ಅವರಿಗೆ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.