ವಿಮೆ ತಿರಸ್ಕರಿಸಿದ ಚೋಳಮಂಡಲ ವಿಮಾ ಕಂಪನಿಗೆ 15.6 ಲಕ್ಷ ರೂ. ದಂಡ ಮತ್ತು ಪರಿಹಾರ
ವಿಮಾ ಪಾಲಿಸಿಯ ನಿಯಮದಂತೆ ಮೃತನ ತಾಯಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ. 15 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ಅರ್ಜಿ ತಿರಸ್ಕರಿಸಿದ ದಿನದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಪರಿಹಾರ ಸಂದಾಯ ಮಾಡುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗ ತೀರ್ಪಿನಲ್ಲಿ ಆದೇಶಿಸಿದೆ.
ಧಾರವಾಡ, ಸೆಪ್ಟೆಂಬರ್ 4: ಉತ್ತರ ಕನ್ನಡ ಜಿಲ್ಲೆ ಶಿರಸಿಯ ನಾಗರತ್ನ ಫರ್ನಾಂಡಿಸ್ ಅವರ ಮಗ ರೋಷನ್ ತನ್ನ ದ್ವಿಚಕ್ರ ವಾಹನದ ಮೇಲೆ ಮಾರ್ಚ್ 27, 2021 ರಿಂದ ಮಾರ್ಚ್ 26, 2022 ರ ಅವಧಿಯ ವಿಮೆ (insurance company) ಮಾಡಿಸಿದ್ದರು. ಆ ವಿಮೆಯಲ್ಲಿ ಮಾಲೀಕ ಆಥವಾ ಚಾಲಕರ ಅವಘಡದ ವಿಮೆಯ ಕವರೇಜ್ ಸೇರಿತ್ತು. ರೋಷನ್ ತನ್ನ ತಾಯಿಯನ್ನು ಆ ಪಾಲಸಿಗೆ ನಾಮಿನಿಯಾಗಿ ಮಾಡಿದ್ದರು. ಜುಲೈ 20, 2021 ರಂದು ರೋಷನ್ ಬೈಕ್ ಓಡಿಸುವಾಗ ಮರಕ್ಕೆ ಗುದ್ದಿ, ಹತ್ತಿರವಿದ್ದ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಗಾಯಗೊಂಡಿದ್ದರು. ಅವರನ್ನು ಶಿರಸಿಯ ಟಿ.ಎಸ್.ಎಸ್. ಆಸ್ಪತ್ರೆಗೆ ಸಾಗಿಸಿದರೂ, ಚಿಕಿತ್ಸೆ ಪಲಿಸದೇ ಅಸುನೀಗಿದ್ದರು. ಮೃತ ರೋಷನ್ ಅವಿವಾಹಿತನಾದ್ದರಿಂದ ಅವರ ತಾಯಿ ವಿಮೆ ಪರಿಹಾರ ರೂ.15 ಲಕ್ಷ ಕೊಡುವಂತೆ ಕೋರಿ ಚೋಳಮಂಡಲ ವಿಮಾ ಕಂಪನಿಗೆ ದಾಖಲೆಗಳ ಸಮೇತ ಅರ್ಜಿ ಸಲ್ಲಿಸಿದ್ದರು.
ಅಪಘಾತವಾದ ವೇಳೆಯಲ್ಲಿ ಚಾಲಕ ರೋಷನ್‌ಗೆ ಕೇವಲ ಕಲಿಕೆಯ ಚಾಲನಾ ಪತ್ರ ಇತ್ತು. ಆಗ ಆತನ ಬಳಿ ಪರ್ಮನೆಂಟ್ ಲೈಸೆನ್ಸ್ ಇರಲಿಲ್ಲ. ಹೀಗಾಗಿ ವಿಮಾ ಷರತ್ತಿನ ಉಲ್ಲಂಘನೆಯಾಗಿದ್ದು, ಪರಿಹಾರ ಕೊಡಲು ಸಾಧ್ಯವಿಲ್ಲ ಅಂತಾ ಚೋಳಮಂಡಲ ವಿಮಾ ಕಂಪನಿಯವರು ಅರ್ಜಿಯನ್ನು ತಿರಸ್ಕರಿಸಿದ್ದರು.
ದ್ವಿಚಕ್ರ ವಾಹನ ಓಡಿಸಲು ಕಲಿಕೆಯ ಚಾಲನಾ ಪತ್ರ ಇದ್ದರೆ ಸಾಕು. ವಿಮಾ ಕಂಪನಿಯವರು ತಮಗೆ ಸೇವಾ ನ್ಯೂನ್ಯತೆ ಎಸಗಿದ್ದಾರೆ ಅಂತಾ ರೋಷನ್ ತಾಯಿ ಪರಿಹಾರ ಕೊಡಿಸುವಂತೆ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರನ್ನು ಸಲ್ಲಿಸಿದ್ದರು.
ಇದನ್ನೂ ಓದಿ: ಧಾರವಾಡ: ಸರ್ಕಾರಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ; ಅಕ್ಕಾಬಿಕ್ಕಿಯಾದ ಅಧಿಕಾರಿಗಳು
ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಕಟ್ಟಿ ಮತ್ತು ಪ್ರಭು ಹಿರೇಮಠ ಅವರು ಮೃತ ರೋಷನ್ ತನ್ನ ಬೈಕ್ ಮೇಲೆ ಪಡೆದ ವಿಮಾ ಪಾಲಿಸಿ ಅಪಘಾತ ಕಾಲಕ್ಕೆ ಚಾಲ್ತಿಯಲ್ಲಿತ್ತು.
ಅಪಘಾತದ ವೇಳೆ ಆತನಿಗೆ ಕಲಿಕಾ ಚಾಲನಾ ಪತ್ರ ಇದ್ದುದರಿಂದ ವಿಮಾ ಪರಿಹಾರ ಪಡೆಯಲು ಅಷ್ಟು ಸಾಕು ಅಂತಾ ಅಭಿಪ್ರಾಯಪಟ್ಟು, ಕಂಪನಿಯ ನಿಯಮಾವಳಿಯಂತೆ ವಿಮಾ ಹಣವನ್ನು ದೂರುದಾರರಿಗೆ ಕೊಡುವುದು ಕರ್ತವ್ಯವಾಗಿರುತ್ತದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ: ಡೆಪಾಸಿಟ್ ಹಿಂದಿರುಗಿಸದ ಸರಸ್ವತಿ ಕೋ ಆಪ್ ಸೊಸೈಟಿಗೆ 11 ಲಕ್ಷ ರೂ ದಂಡ ವಿಧಿಸಿದ ಕೋರ್ಟ್
ಈ ಪ್ರಕರಣದಲ್ಲಿ ಕಂಪನಿ ಕರ್ತವ್ಯ ನಿರ್ವಹಣೆಯಲ್ಲಿ ವಿಫಲವಾಗಿದೆ ಮತ್ತು ಗ್ರಾಹಕರ ರಕ್ಷಣಾ ಕಾಯ್ದೆ ಆಡಿ ಸೇವಾ ನ್ಯೂನತೆ ಎಸಗಿದ್ದಾರೆ ಅಂತಾ ಆಯೋಗ ತೀರ್ಪು ನೀಡಿದೆ. ವಿಮಾ ಪಾಲಿಸಿಯ ನಿಯಮದಂತೆ ಮೃತನ ತಾಯಿಗೆ ತೀರ್ಪು ನೀಡಿದ ಒಂದು ತಿಂಗಳ ಒಳಗಾಗಿ ರೂ. 15 ಲಕ್ಷ ವಿಮಾ ಹಣ ಮತ್ತು ಅದರ ಮೇಲೆ ಅರ್ಜಿ ತಿರಸ್ಕರಿಸಿದ ದಿನದಿಂದ ಶೇ.8 ರಂತೆ ಬಡ್ಡಿ ಲೆಕ್ಕ ಹಾಕಿ ಪರಿಹಾರ ಸಂದಾಯ ಮಾಡುವಂತೆ ಆಯೋಗ ತೀರ್ಪಿನಲ್ಲಿ ಆದೇಶಿಸಿದೆ.
ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕಾಗಿ ರೂ.50 ಸಾವಿರ ಪರಿಹಾರ ಮತ್ತು ರೂ.10 ಸಾವಿರ ಪ್ರಕರಣದ ಖರ್ಚು ವೆಚ್ಚವನ್ನು ಕೊಡುವಂತೆ ಚೋಳಮಂಡಲ ವಿಮಾ ಕಂಪನಿಗೆ ಆಯೋಗ ಆದೇಶಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:50 pm, Mon, 4 September 23