ಧಾರವಾಡ, ಅಕ್ಟೋಬರ್ 18: ಎಲೆಕ್ಟ್ರಿಕ್ ಬೈಕ್ (Electric Bike) ಬ್ಯಾಟರಿ ಸ್ಫೋಟಗೊಂಡು ಮನೆಯೊಂದು ಬೆಂಕಿಗೆ ಆಹುತಿಯಾದ ಘಟನೆ ಧಾರವಾಡ (Dharawad) ಜಿಲ್ಲೆ ಕಲಘಟಗಿ ತಾಲ್ಲೂಕಿನ ಬಿ.ಗುಡಿಹಾಳ ಗ್ರಾಮದಲ್ಲಿ ಬುಧವಾರ ಸಂಭವಿಸಿದೆ. ಅದೃಷ್ಟವಶಾತ್, ಸಾವು ನೋವು ಸಂಭವಿಸಿಲ್ಲ. ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ವೇಳೆ ಬ್ಯಾಟರಿ ಸ್ಫೋಟಗೊಂಡು ಬೈಕ್ ಸುಟ್ಟು ಕರಕಲಾಗಿದೆ. ಬೈಕ್‌ಗೆ ಹೊತ್ತಿದ ಬೆಂಕಿಯಿಂದ ಹಳೆಯ ಮಡಗಿ ಮನೆ ಹೊತ್ತಿ ಉರಿದಿದೆ. ಮನೆಯಲ್ಲಿ ಬೈಕ್ ಬ್ಯಾಟರಿ ಚಾರ್ಜಿಂಗ್ಗೆ ಹಾಕಿದ್ದ ವೇಳೆ ಘಟನೆ ಸಂಭವಿಸಿದೆ.
ಬಸಯ್ಯ ಹಿರೇಮಠ್ ಎಂಬುವವರ ಮನೆಯಲ್ಲಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಳ್ಳುತ್ತಲೇ ಕುಟುಂಬಸ್ಥರು ಹೊರಗೆ ಓಡಿ ಬಂದಿದ್ದಾರೆ. ಹೀಗಾಗಿ ಸಾವು ನೋವು ತಪ್ಪಿದೆ. ಸ್ಥಳಕ್ಕೆ ತಹಶೀಲ್ದಾರರು ಹಾಗೂ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಹುಬ್ಬಳ್ಳಿ ಸಿಸಿಬಿ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ಬೆಟ್ಟಿಂಗ್ ಕುಳಗಳನ್ನು ಬಂಧಿಸಲಾಗಿದೆ. ದಕ್ಷಿಣ ಆಫ್ರಿಕಾ ಹಾಗೂ ನೆದರ್ಲೆಂಡ್ ನಡುವಣ ವಿಶ್ವಕಪ್ ಕ್ರಿಕೆಟ್ ಮ್ಯಾಚ್ ವೇಳೆ ಬೆಟ್ಟಿಂಗ್ನಲ್ಲಿ ಭಾಗಿಯಾಗಿದ್ದ ಮೂವರನ್ನು ಬಂಧಿಸಲಾಗಿದ್ದು, ಇಬ್ಬರು ಪರಾರಿಯಾಗಿದ್ದಾರೆ. ಬಂಧಿತರಿಂದ 2 ಲಕ್ಷ 39 ಸಾವಿರ ರೂಪಾಯಿ ಹಣ ಹಾಗೂ ವಿವಿಧ ಕಂಪನಿಯ ಮೊಬೈಲ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ಧಾರವಾಡ ಕಾರಾಗೃಹದಲ್ಲಿ ಕೈದಿ ಮತ್ತು ಜೈಲು ಸಿಬ್ಬಂದಿ ನಡುವೆ ಹೊಡೆದಾಟ
ಹುಬ್ಬಳ್ಳಿಯ ಡಾಕಪ್ಪ ಸರ್ಕಲ್ನಲ್ಲಿ ಐವರು ಬೆಟ್ಟಿಂಗ್ನಲ್ಲಿ ತೊಡಗಿದ್ದರು. ನವೀನ್, ಮಹಮ್ಮದ್, ಪವನ್ ಬಂಧಿತ ಆರೋಪಿಗಳಾಗಿದ್ದಾರೆ. ಸಂತೋಷ್ ಹಾಗೂ ಗಿರೀಶ್ ಪರಾರಿಯಾಗಿದ್ದಾರೆ.
ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದರು. ಹುಬ್ಬಳ್ಳಿ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಇದಾಗಿದೆ. ವಿಶ್ವಕಪ್ ಆರಂಭವಾಗುತ್ತಲೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ