ಧಾರವಾಡ: ವಿದ್ಯುತ್ ತಂತಿಗಳನ್ನೂ ಕದ್ದೊಯ್ಯುತ್ತಿರುವ ಖದೀಮರು!
ಈ ತಂತಿಗಳನ್ನು ಅಳವಡಿಸೋದು ಈ ಯೋಜನೆಯ ಗುತ್ತಿಗೆ ಪಡೆದಿರೋ ಗುತ್ತಿಗೆದಾರನ ಕರ್ತವ್ಯ. ಆದರೆ ಆ ವ್ಯಕ್ತಿ ಇದುವರೆಗೂ ಈ ಕಡೆ ಬಂದೇ ಇಲ್ಲವಂತೆ. ಇನ್ನು ರೈತರೇ ಈ ತಂತಿಗಳನ್ನು ಹಾಕಿಸಿಕೊಳ್ಳಬೇಕೆಂದರೆ, ಈಗಾಗಲೇ ಕೃಷಿಗಾಗಿ ಖರ್ಚು ಮಾಡಿರೋ ಹಣವೇ ಲಕ್ಷ ಲಕ್ಷ ರೂಪಾಯಿ ಆಗಿದೆ.
ಧಾರವಾಡ, ಅಕ್ಟೋಬರ್ 18: ಈ ಬಾರಿ ರಾಜ್ಯದಲ್ಲಿ ಭಾರೀ ಬರಗಾಲ ಎದುರಾಗಿದೆ. ಮುಂಗಾರು ವೈಫಲ್ಯದ ಬಳಿಕ ಹಿಂಗಾರು ವೈಫಲ್ಯ ಆಗೋ ಎಲ್ಲ ಲಕ್ಷಣಗಳು ಈಗಾಗಲೇ ಕಂಡು ಬಂದಿವೆ. ಇದಕ್ಕೆ ಧಾರವಾಡ (Dharwad) ಜಿಲ್ಲೆ ಕೂಡ ಹೊರತಾಗಿಲ್ಲ. ಇದೇ ವೇಳೆ ಜಿಲ್ಲೆಯ ರೈತರಿಗೆ ಗಾಯದ ಮೇಲೆ ಬರೆ ಎಳೆಯುವಂಥ ಘಟನೆಗಳು ನಡೆಯುತ್ತಿವೆ. ಇದುವರೆಗೂ ರೈತರ ಜಮೀನಿನಲ್ಲಿ ಪಂಪ್ ಸೆಟ್ಗಳ ಸ್ಟಾರ್ಟರ್, ಟ್ರ್ಯಾಕ್ಟರ್ಗಳ ಬ್ಯಾಟರಿಗಳನ್ನು ಕದ್ದೊಯ್ಯುತ್ತಿದ್ದ ಕಳ್ಳರು ಇದೀಗ ವಿದ್ಯುತ್ ತಂತಿಗಳನ್ನು (Electricity Wires) ಕೂಡ ಬಿಡುತ್ತಿಲ್ಲ. ಇದರಿಂದಾಗಿ ರೈತರು ಹೈರಾಣಾಗಿ ಹೋಗಿದ್ದಾರೆ.
ವಿದ್ಯುತ್ ತಂತಿ ಕಳ್ಳತನದ ಬಗ್ಗೆ ಧಾರವಾಡ ತಾಲೂಕಿನ ನವಲಗುಂದ ತಾಲೂಕಿನ ತಲೆ ಮೊರಬ ಗ್ರಾಮದ ರೈತ ವಿರುಪಾಕ್ಷಪ್ಪ ಅಳಲು ತೋಡಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಸರಕಾರದಿಂದ ಈ ರೈತನ ಹೊಲಕ್ಕೆ ವಿದ್ಯುತ್ ಸಂಪರ್ಕದ ಯೋಜನೆ ಬಂದಿತ್ತು. ಆದರೆ ಕೊರೊನಾ ಲಾಕ್ ಡೌನ್ ಅಗಿ ಅದು ಈಗ ಜಾರಿಯಾಗಿದೆ. ಈಗಾಗಲೇ ಈ ಪ್ರದೇಶದ ಬಹುತೇಕ ಹೊಲಗಳಲ್ಲಿ ವಿದ್ಯುತ್ ಕಂಬಗಳನ್ನು ಹಾಕಲಾಗಿದ್ದು, ಟ್ರಾನ್ಸ್ಫಾರ್ಮರ್ ಕೂಡ ಅಳವಡಿಸಲಾಗಿದೆ. ಇತ್ತೀಚಿಗಷ್ಟೇ ಈ ಎಲ್ಲ ವಿದ್ಯುತ್ ಕಂಬಗಳಿಗೆ ವಿದ್ಯುತ್ ತಂತಿಯನ್ನು ಹಾಕಲಾಗಿತ್ತು. ಇನ್ನೇನು ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಅನ್ನುವಷ್ಟರಲ್ಲಿಯೇ ರಾತ್ರೋ ರಾತ್ರಿ ಕಳ್ಳರು ಎಲ್ಲ ವಿದ್ಯುತ್ ತಂತಿಗಳನ್ನು ಕದ್ದೊಯ್ದಿದ್ದಾರೆ. ಇದರಿಂದಾಗಿ ವಿದ್ಯುತ್ ಪಡೆಯೋ ರೈತರ ಕನಸು ನುಚ್ಚುನೂರಾಗಿ ಹೋಗಿದೆ.
ಇದುವರೆಗೂ ರೈತರ ಹೊಲಗಳಿಗೆ ನುಗ್ಗುತ್ತಿದ್ದ ರೈತರು ಟ್ರಾಕ್ಟರ್ಗಳ ಬ್ಯಾಟರಿ, ಬೋರ್ ವೆಲ್ಗಳ ಸ್ಟಾರ್ಟರ್ ಗಳನ್ನು ಕಳ್ಳತನ ಮಾಡುತ್ತಿದ್ದರು. ಆದರೆ ಇದೀಗ ವಿದ್ಯುತ್ ಕಂಬಳಿಗೆ ಅಳವಡಿಸಲಾಗಿರೋ ಅಲ್ಯುಮಿನಿಯಂ ತಂತಿಗಳನ್ನೇ ಕದ್ದೊಯ್ಯುತ್ತಿದ್ದಾರೆ. ಇದುವರೆಗೂ ಇಂಥ ಘಟನೆಗಳು ನಡೆದಿರಲೇ ಇಲ್ಲ. ಈಗಾಗಲೇ ರೈತ ಸಮುದಾಯ ಮಳೆ ಇಲ್ಲದೇ, ಸರಿಯಾದ ವಿದ್ಯುತ್ ಇಲ್ಲದೇ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಇಂಥ ವೇಳೆಯಲ್ಲಿ ವಿದ್ಯುತ್ ಸಂಪರ್ಕ ಸಿಕ್ಕರೆ ಕೊಳವೆ ಬಾವಿಯೋ ಅಥವಾ ಕೃಷಿ ಹೊಂಡಗಳಲ್ಲಿನ ನೀರಿನಿಂದಲೋ ಬೆಳೆಗೆ ನೀರುಣಿಸಿ, ಬೆಳೆಗಳನ್ನು ಉಳಿಸಿಕೊಳ್ಳುತ್ತಿದ್ದರು. ಆದರೆ ಈ ರೀತಿ ವಿದ್ಯುತ್ ವಿತರಿಸೋ ತಂತಿಗಳನ್ನೇ ಕದ್ದೊಯ್ದರೆ ಗತಿ ಏನು ಅಂತಾ ಚಿಂತೆಯಲ್ಲಿ ಬಿದ್ದಿದ್ದಾರೆ. ಇನ್ನು ಹೊಲಗಳಲ್ಲಿನ ಹತ್ತಿ, ಈರುಳ್ಳಿ ಬೆಳೆ ನೀರಿಲ್ಲದೇ ಒಣಗಿ ಹೋಗುತ್ತಿದೆ. ಈ ಎಲ್ಲ ಘಟನೆಗಳಿಂದಾಗಿ ರೈತರು ತೊಂದರೆಗೆ ಸಿಲುಕಿದ್ದಾರೆ.
ಇದನ್ನೂ ಓದಿ: ಧಾರವಾಡ: ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟ, ಬೆಂಕಿಗೆ ಆಹುತಿಯಾದ ಮನೆ
ಈ ತಂತಿಗಳನ್ನು ಅಳವಡಿಸೋದು ಈ ಯೋಜನೆಯ ಗುತ್ತಿಗೆ ಪಡೆದಿರೋ ಗುತ್ತಿಗೆದಾರನ ಕರ್ತವ್ಯ. ಆದರೆ ಆ ವ್ಯಕ್ತಿ ಇದುವರೆಗೂ ಈ ಕಡೆ ಬಂದೇ ಇಲ್ಲವಂತೆ. ಇನ್ನು ರೈತರೇ ಈ ತಂತಿಗಳನ್ನು ಹಾಕಿಸಿಕೊಳ್ಳಬೇಕೆಂದರೆ, ಈಗಾಗಲೇ ಕೃಷಿಗಾಗಿ ಖರ್ಚು ಮಾಡಿರೋ ಹಣವೇ ಲಕ್ಷ ಲಕ್ಷ ರೂಪಾಯಿ ಆಗಿದೆ. ಅಷ್ಟೆಲ್ಲಾ ಖರ್ಚು ಮಾಡಿದರೂ ಈ ಬಾರಿ ಬೆಳೆ ಬಾರದೇ ಸಾಲ ಬೆಳೆಯೋದು ಗ್ಯಾರಂಟಿ. ಇಂಥ ಸಂದರ್ಭದಲ್ಲಿ ರೈತರು ಈ ತಂತಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡೋದಾದರೂ ಹೇಗೆ ಅನ್ನೋದು ರೈತರ ಪ್ರಶ್ನೆ. ಒಟ್ಟಿನಲ್ಲಿ ವಿದ್ಯುತ್ ತಂತಿಯನ್ನೂ ಬಿಡದೇ ಕಳ್ಳತನ ಮಾಡುತ್ತಿರೋ ಕಳ್ಳರನ್ನು ಹಿಡಿದು, ರೈತರ ಬದುಕು ಮೂರಾಬಟ್ಟೆ ಆಗೋದನ್ನು ಪೊಲೀಸ್ ಇಲಾಖೆ ತಡೆಯಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ