ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಮತ್ತೊಂದು ಎಡವಟ್ಟು – ಪರಿಶಿಷ್ಟ ಜಾತಿಗೆ ಮೀಸಲಿದ್ದ ಸೀಟು ಬೇರೆಯವರ ಪಾಲು
ಪ್ರಕರಣದಲ್ಲಿ ಸೀಟು ವಂಚಿತರಾಗಿರುವ ಸಚಿನ್ ಕುರಾಡೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿ, 'ನನಗೆ ಆಗಿರುವ ಅನ್ಯಾಯ ಕುರಿತು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ದೂರು ನೀಡಲಾಗಿತ್ತು. ಆದರೆ ಅಲ್ಲಿ ವಿಚಾರಣೆಯ ಸಂದರ್ಭದಲ್ಲಿ ವಿವರಣೆ ನೀಡಲು ನನಗೆ ಅವಕಾಶ ನೀಡಿಲ್ಲ. ನನ್ನನ್ನು ಒಳಗೆ ಬಿಡಲೇ ಇಲ್ಲ. ಕೇವಲ ವಿಶ್ವವಿದ್ಯಾಲಯದ ಅಧಿಕಾರಿಗಳ ಮಾಹಿತಿಯನ್ನಷ್ಟೇ ದಾಖಲಿಸಿ ಪ್ರಕರಣ ಕೈಬಿಡಲಾಗಿದೆ ಅಂತಾ ತಮ್ಮ ನೋವನ್ನು ತೋಡಿಕೊಂಡರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಒಂದಿಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇರುತ್ತದೆ. ಸದಾ ವಿವಾದಗಳಿಂದಲೇ ಗಮನ ಸೆಳೆಯುವ ಈ ವಿಶ್ವವಿದ್ಯಾಲಯ, ಇದೀಗ ಪರಿಶಿಷ್ಟ ಜಾತಿಗೆ ಸೇರಿದ್ದ ವ್ಯಕ್ತಿಯ ಸೀಟನ್ನು ಬೇರೆ ವರ್ಗಕ್ಕೆ ನೀಡಿ, ವಿವಾದಕ್ಕೆ ಸಿಲುಕಿದೆ. ನೇಮಕಾತಿ ವಿಚಾರವಾಗಿ ಮೊದಲಿನಿಂದಲೂ ಇಲ್ಲಿ ಅನೇಕ ಆರೋಪಗಳು ಕೇಳಿ ಬರುತ್ತಲೇ ಇರುತ್ತವೆ. ಕೆಲ ವರ್ಷಗಳ ಹಿಂದೆ ನಡೆದಿದ್ದ ಸಹಾಯಕ ಪ್ರಾಧ್ಗಾಪಕರ ಹುದ್ದೆಯಲ್ಲಿ ಅಕ್ರಮ ನಡೆದಿದೆ ಅನ್ನುವ ಆರೋಪದಿಂದ ಹಿಡಿದು ಇದೀಗ ಪರಿಶಿಷ್ಟ ಜಾತಿಯ ವ್ಯಕ್ತಿಗೆ ಸಿಗಬೇಕಿದ್ದ ಸೀಟನ್ನು ಬೇರೆ ವರ್ಗದ ವ್ಯಕ್ತಿಗೆ ನೀಡಲಾಗಿದೆ ಅನ್ನುವ ಆರೋಪಗಳವರೆಗೆ ಇಲ್ಲಿನ ಆಡಳಿತ ಮಂಡಳಿಯ ಸಿಬ್ಬಂದಿ ಆರೋಪವನ್ನು ಎದುರಿಸುತ್ತಲೇ ಬಂದಿದ್ದಾರೆ. ಇದೀಗ ನಡೆದಿರುವ ಪ್ರಕರಣ ವಿವಾದಕ್ಕೆ ಕಾರಣವಾಗಿದೆ.
ಹಾಗಾದರೆ ನಡೆದದ್ದಾರೂ ಏನು? ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪ್ರಸಕ್ತ ಸಾಲಿನಲ್ಲಿ ಪಿಎಚ್‌ಡಿ ಪ್ರವೇಶವನ್ನು 15 ಅಭ್ಯರ್ಥಿಗಳಿಗೆ ನಿಗದಿಪಡಿಸಲಾಗಿತ್ತು. ಇದರಲ್ಲಿ ಪರಿಶಿಷ್ಟ ಜಾತಿಯ ಅಂಗವಿಕಲ ಅಭ್ಯರ್ಥಿ ಹಾಗೂ ಪರಿಶಿಷ್ಟ ಜಾತಿ ಅಭ್ಯರ್ಥಿ ಸೇರಿದಂತೆ ಒಟ್ಟು 2 ಸ್ಥಾನಗಳು ಮೀಸಲಿದ್ದವು. ಪರಿಶಿಷ್ಟ ಜಾತಿಯ ಅಂಗವಿಕಲರ ಮೀಸಲಾತಿಯಡಿ ಪ್ರವೇಶ ಬಯಸಿದ್ದ ವೆಂಕಟೇಶ ಸಾಲಿ ಎಂಬುವವರಿಗೆ ಪರಿಶಿಷ್ಟ ಜಾತಿ ಮೀಸಲಾತಿಯಡಿ ಪ್ರವೇಶ ನೀಡಲಾಗಿದೆ. ಆದರೆ ಖಾಲಿ ಉಳಿದಿದ್ದ ಮತ್ತೊಂದು ಪರಿಶಿಷ್ಟ ಜಾತಿಯ ಸ್ಥಾನಕ್ಕೆ 3 ಬಿ ಮೀಸಲಾತಿಯನ್ನು ಹೊಂದಿರುವ ಅಭ್ಯರ್ಥಿಗೆ ಸೀಟನ್ನು ನೀಡಲಾಗಿದೆ.
ಎಚ್ . ವೀರೇಶ್ ಅನ್ನೋ ಅಭ್ಯರ್ಥಿ ಅಂಗವಿಕಲರಾಗಿದ್ದರೂ ಅವರು 3 ಬಿ ವರ್ಗಕ್ಕೆ ಸೇರಿದವರಾಗಿದ್ದಾರೆ. ಇದೇ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಪರಿಶಿಷ್ಟ ಜಾತಿಯಲ್ಲಿ ಅಂಗವಿಕಲ ಅಭ್ಯರ್ಥಿ ಇಲ್ಲದ ಕಾರಣ ಬೇರೊಬ್ಬ ಅಭ್ಯರ್ಥಿಗೆ ಈ ಸೀಟನ್ನು ನೀಡಲಾಗಿದೆ ಅನ್ನೋ ಸಬೂನು ನೀಡಲಾಗುತ್ತಿದೆ. ಎಚ್. ವೀರೇಶ್ ಶೇ. 72.6 ರಷ್ಟು ಅಂಕ ಪಡೆದಿದ್ದಾರೆ. ಆದರೆ ಪರಿಶಿಷ್ಟ ಮೀಸಲಾತಿ ಜಾತಿಯಡಿ ಸೀಟು ಬಯಸಿದ್ದ ಸಚಿನ್ ಕುರಾಡೆ ಅನ್ನುವ ಅಭ್ಯರ್ಥಿ ಶೇ. 74.13 ಅಂಕ ಪಡೆದಿದ್ದಾರೆ. ಅಷ್ಟೇ ಅಲ್ಲದೇ ಸಚಿನ್ ನೆಟ್ ಹಾಗೂ ಕೆಸೆಟ್ ಪರೀಕ್ಷೆ ಉತ್ತೀರ್ಣರಾಗಿದ್ದಾರೆ. ವಿಶ್ವವಿದ್ಯಾಲಯದ ಈ ನಿರ್ಧಾರದಿಂದ ಸಚಿನ್ ಕುರಾಡೆ ಅವಕಾಶ ವಂಚಿತರಾಗಿದ್ದಾರೆ.
ವಿವಿಯ ನಿರ್ಧಾರವನ್ನು ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯೋಗದಲ್ಲಿ ಪ್ರಶ್ನಿಸಿದ ಸಚಿನ್ ತಮಗೆ ಅನ್ಯಾಯವಾಗಿದ್ದನ್ನು ಸಚಿನ್ ಕುರಾಡೆ ಪರಿಶಿಷ್ಟ ಜಾತಿ ಹಾಗೂ ಪಂಗಡದ ಆಯೋಗದಲ್ಲಿ ಪ್ರಶ್ನಿಸಿದ್ದರು. ವಿಚಾರಣೆ ನಡೆಸಿದ ಆಯೋಗ, ಸಚಿನ್ ಗೆ ಪ್ರವೇಶ ನೀಡುವಂತೆ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆದೇಶ ನೀಡಿತ್ತು. ಈ ಆದೇಶವಾಗಿ ಎರಡು ತಿಂಗಳು ಕಳೆದರೂ ಇದುವರೆಗೂ ವಿವಿ ಸಚಿನ್ ಗೆ ಸೀಟು ನೀಡಿಲ್ಲ. ವಿವಿಯ ಈ ನಿರ್ಲಕ್ಷ ವಿವಾದಕ್ಕೆ ಕಾರಣವಾಗಿದೆ. ಇನ್ನು ಇದೇ ವಿಭಾಗದಲ್ಲಿ ಉಳಿದ 13 ಸೀಟುಗಳಲ್ಲಿ ಪ್ರವೇಶ ಪರೀಕ್ಷೆ ಮೂಲಕ 6 ಸೀಟುಗಳು ಹಾಗೂ ನೆಟ್ ಮತ್ತು ಕೆಸೆಟ್ ಉತ್ತೀರ್ಣರಾದವರ ನೇರ ಪ್ರವೇಶಕ್ಕೆ 6 ಸೀಟುಗಳನ್ನು ಮೀಸಲಿಡಲಾಗಿತ್ತು.
ಉಳಿದ ಒಂದು ಸೀಟನ್ನು ಸಾಮಾನ್ಯ ವರ್ಗದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭ್ಯರ್ಥಿಗೆ ನೀಡಬೇಕು ಎಂದು ವಿಶ್ವವಿದ್ಯಾಲಯದ ನಿಬಂಧನೆಯಲ್ಲಿಯೇ ಹೇಳಲಾಗಿದೆ. ಆದರೆ ಈ ಸೀಟನ್ನು ಶೇ. 69.96 ರಷ್ಟು ಅಂಕ ಪಡೆದಿದ್ದ 3 ಬಿ ವರ್ಗಕ್ಕೆ ಸೇರಿದ ಸೀಮಾ ಖೈರಿ ಎಂಬುವವರಿಗೆ ನೀಡಲಾಗಿದೆ. ಆದರೆ ಸಾಮಾನ್ಯ ವರ್ಗದಲ್ಲಿ ಪ್ರವೇಶ ಬಯಸಿದ್ದ ಮೆಹಬೂಬ್ ಆರೀಫ್ ಸದರ್‌ಸೋಫೆವಾಲೆ ಎಂಬುವವರು ನೆಟ್ ಮತ್ತು ಕೆಸೆಟ್ ಪರೀಕ್ಷೆ ಪಾಸಾಗಿದ್ದು, ಶೇ 74.92 ರಷ್ಟು ಅಂಕಗಳನ್ನು ಕೂಡ ಹೊಂದಿದ್ದಾರೆ. ಹೀಗಿದ್ದಾಗ್ಯೂ ಅವರು ಅವಕಾಶ ವಂಚಿತರಾಗಿದ್ದಾರೆ. ಈ ಪ್ರಕರಣಗಳು ಇದೀಗ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಈ ಮುಂಚೆ ಹೀಗಾಗಿದ್ದಾಗ ಹೈಕೋರ್ಟ್ ಮೊರೆ ಹೋಗಿದ್ದ ಅಭ್ಯರ್ಥಿ ಈ ರೀತಿ ನಡೆಯುತ್ತಿರುವುದು ಈ ವಿಶ್ವವಿದ್ಯಾಲಯದಲ್ಲಿ ಹೊಸದೇನಲ್ಲ. ಅನೇಕ ಬಾರಿ ಹೀಗೆ ನಡೆದಾಗ ಅವಕಾಶ ವಂಚಿತ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಿ, ನ್ಯಾಯ ಪಡೆದುಕೊಂಡಿದ್ದಾರೆ. ಇದೇ ವಿಭಾಗದಲ್ಲಿ 2015 ರಲ್ಲಿ ಕೂಡ ಇಂಥದ್ದೇ ಘಟನೆ ನಡೆದಿತ್ತು. ಅವಕಾಶ ವಂಚಿತರಾಗಿದ್ದ ರಾಘವೇಂದ್ರ ಅನ್ನುವವರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಬಳಿಕ ವಿಚಾರಣೆ ನಡೆಸಿದ್ದ ಹೈಕೋರ್ಟ್, ಅವರಿಗೆ ಸೀಟು ನೀಡುವಂತೆ ಆದೇಶ ನೀಡಿತ್ತು. ಈ ಸೀಟು ಪಡೆದಿದ್ದ ಪ್ರಕರಣ ಮಾಸುವ ಮುನ್ನವೇ ಅಂಥದ್ದೇ ಮತ್ತೊಂದು ಪ್ರಕರಣ ಕಂಡು ಬಂದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ಸಮಗ್ರ ತನಿಖೆ ನಡೆಯಬೇಕಿದೆ – ಕೆ.ಎಸ್. ಜಯಂತ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಪ್ರವೇಶದ ತಾರತಮ್ಯ ಹಾಗೂ ನಿಯಮಾವಳಿ ಉಲ್ಲಂಘಿಸಿರುವ ಬಗ್ಗೆ ಯುಜಿಸಿಗೆ ಪತ್ರ ಬರೆದು ಗಮನಕ್ಕೆ ತರಲಾಗುವುದು ಎಂದು ವಿಶ್ವವಿದ್ಯಾಲಯ ಉಳಿಸಿ ಹೋರಾಟ ಸಮಿತಿಯ ಕೆ.ಎಸ್. ಜಯ೦ತ ಟಿವಿ-9 ಡಿಜಿಟಲ್ ಗೆ ತಿಳಿಸಿದ್ದಾರೆ. ಪಿಎಚ್.ಡಿ ಗೊಂದಲ ಕುರಿತು ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಈ ಬಗ್ಗೆ ಸಮಗ್ರ ತನಿಖೆ ನಡೆದಾಗ ಮಾತ್ರ ಈವರೆಗೂ ನಡೆದಿರುವ ಅನ್ಯಾಯಗಳು, ಅಕ್ರಮಗಳು ಬೆಳಕಿಗೆ ಬರಲಿವೆ. ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಈ ಬಗ್ಗೆ ನಿರ್ಣಯ ಕೈಗೊಂಡು ಸಮಗ್ರ ತನಿಖೆಗೆ ಒತ್ತಾಯಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ವಿವರಣೆಯನ್ನೇ ಕೇಳದ ಉಸ್ತುವಾರಿ ಸಮಿತಿ – ಸಚಿನ್ ಕುರಾಡೆ ಇನ್ನು ಈ ಪ್ರಕರಣದಲ್ಲಿ ಸೀಟು ವಂಚಿತರಾಗಿರುವ ಸಚಿನ್ ಕುರಾಡೆ ಟಿವಿ-9 ಡಿಜಿಟಲ್ ಜತೆಗೆ ಮಾತನಾಡಿ, ‘ನನಗೆ ಆಗಿರುವ ಅನ್ಯಾಯ ಕುರಿತು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಗೆ ದೂರು ನೀಡಲಾಗಿತ್ತು. ಆದರೆ ಅಲ್ಲಿ ವಿಚಾರಣೆಯ ಸಂದರ್ಭದಲ್ಲಿ ವಿವರಣೆ ನೀಡಲು ನನಗೆ ಅವಕಾಶ ನೀಡಿಲ್ಲ. ನನ್ನನ್ನು ಒಳಗೆ ಬಿಡಲೇ ಇಲ್ಲ. ಕೇವಲ ವಿಶ್ವವಿದ್ಯಾಲಯದ ಅಧಿಕಾರಿಗಳ ಮಾಹಿತಿಯನ್ನಷ್ಟೇ ದಾಖಲಿಸಿ ಪ್ರಕರಣ ಕೈಬಿಡಲಾಗಿದೆ ಅಂತಾ ತಮ್ಮ ನೋವನ್ನು ತೋಡಿಕೊಂಡರು.
ಸೀಟುಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ – ಡಾ . ಕೆ.ಟಿ. ಹನುಮಂತಪ್ಪ ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಕುಲಸಚಿವ ಡಾ. ಕೆ.ಟಿ. ಹನುಮಂತಪ್ಪ, ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದಲ್ಲಿ ಪಿಎಚ್.ಡಿ ಸೀಟುಗಳ ಹಂಚಿಕೆಯಲ್ಲಿ ಯಾವುದೇ ತಾರತಮ್ಯ ಆಗಿಲ್ಲ. ಎಲ್ಲವೂ ನಿಯಮಾನುಸಾರವೇ ನಡೆದಿದೆ. ಅಂಗವಿಕಲ ಅಭ್ಯರ್ಥಿಯ ಅಂಕಗಳು ಸಾಮಾನ್ಯ ಅಥವಾ ಮೀಸಲಾತಿ ಕೋಟಾದಲ್ಲಿ ಸೀಟು ಪಡೆಯುವಷ್ಟು ಇದ್ದಲ್ಲಿ, ಅದನ್ನು ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗೆ ನೀಡುವಂತೆ ನಿಯಮಾವಳಿ ಹೇಳಿದೆ. ಅಂಗವಿಕಲ ಕೋಟಾವನ್ನು ಎಚ್. ವೀರೇಶ್ ಅವರಿಗೂ, ಪರಿಶಿಷ್ಟ ಜಾತಿ ಕೋಟಾವನ್ನು ವೆಂಕಟೇಶ ಸಾಲಿ ಅವರಿಗೆ ನೀಡಲಾಗಿದೆ. ಮೀಸಲಾತಿ ಉಳಿಯದ ಕಾರಣ ಸಚಿನ್ ಕುರಾಡೆ ಅವರಿಗೆ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
– ನರಸಿಂಹಮೂರ್ತಿ ಪ್ಯಾಟಿ, ಹಿರಿಯ ವರದಿಗಾರ, ಟಿವಿ 9, ಧಾರವಾಡ