ಧಾರವಾಡ, ಮೇ 16: ಧಾರವಾಡದಲ್ಲಿ (Dharwad) ಮಾವು ಮೇಳ ಆರಂಭವಾಗಿದ್ದು, ಭರ್ಜರಿಯಾಗಿಯೇ ಮಾವುಗಳ ಪ್ರದರ್ಶನ, ವ್ಯಾಪಾರ ನಡೆಯುತ್ತಿದೆ. ವಿವಿಧ ತಳಿಯ ಮಾವಿನ ಹಣ್ಣುಗಳು ಮಾರಾಟವಾಗುತ್ತಿದ್ದು, ಈ ಪೈಕಿ ಮಿಯಾಜಾಕಿ ತಳಿಯ (Miyazaki Mango) ಒಂದು ಮಾವಿನ ಹಣ್ಣಿಗೆ ಬರೋಬ್ಬರಿ 10,000 ರೂಪಾಯಿಗೆ ಇದೆ! ಈ ಮಾವಿನ ಹಣ್ಣು ಈಗ ಮೇಳದ ಕೇಂದ್ರ ಬಿಂದುವಾಗಿದ್ದು, ಇದನ್ನು ನೋಡಲೆಂದೇ ಸಾವಿರಾರು ಜನ ಸೇರುತ್ತಿದ್ದಾರೆ.
ರಾಜ್ಯದಲ್ಲಿ ಈ ಮಾವಿನ ತಳಿಯ ಮಿಯಾಜಾಕಿ ಎಂಬ ಒಂದೇ ಒಂದು ಮರವಿದೆ ಎಂದು ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ತೋಟವನ್ನು ಹೊಂದಿರುವ ರೈತ ಪ್ರಮೋದ ಗಾಂವ್ಕರ್ ಹೇಳಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. 2012ರಲ್ಲಿ ಸಸಿ ನೆಟ್ಟಿದ್ದು, ಕಳೆದ ಕೆಲ ವರ್ಷಗಳಲ್ಲಿ ಒಂದಷ್ಟು ಮಾವು ಕಟಾವು ಮಾಡಿ ಲಕ್ಷಾಂತರ ರೂಪಾಯಿ ಆದಾಯ ಗಳಿಸಿರುವುದಾಗಿಯೂ ಅವರು ತಿಳಿಸಿದ್ದಾರೆ.
ಅಪರೂಪದ ಮಿಯಾಜಾಕಿ ತಳಿಯ ಗಿಡವನ್ನು ಮಹಾರಾಷ್ಟ್ರದಲ್ಲಿ ಖರೀದಿಸಿ ನೆಟ್ಟಿರುವುದಾಗಿ ಅವರು ತಿಳಿಸಿದ್ದಾರೆ.
ಗಾಂವ್ಕರ್ 1985 ರಿಂದಲೂ ಮಾವಿನ ತೋಟ ಹಾಗೂ ಮಾರಾಟದಲ್ಲಿ ತೊಡಗಿಕೊಂಡಿದ್ದು, ಈ ತಳಿಯು ಜಪಾನ್ ಮೂಲದ್ದಾಗಿದೆ. ಮರವು ಸ್ಥಳೀಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳ್ಳುವುದರಿಂದ ಯಾವುದೇ ಸಮಸ್ಯೆಗಳಿಲ್ಲ. ಮರವು ಪ್ರತಿ ಋತುವಿಗೆ ಗರಿಷ್ಠ 14 ಹಣ್ಣುಗಳನ್ನು ನೀಡುತ್ತದೆ. ಇತ್ತೀಚೆಗೆ ಸುಮಾರು 2.5 ಲಕ್ಷ ರೂ.ಗೆ ಹತ್ತಾರು ಮಾವಿನ ಹಣ್ಣು ಮಾರಾಟವಾಗಿತ್ತು. ಅಪರೂಪದ ಹಣ್ಣಾಗಿರುವುದರಿಂದ ಮತ್ತು ಆರೋಗ್ಯಕ್ಕೆ ಬಹಳ ಒಳ್ಳೆಯದಾಗಿರುವ ಕಾರಣ ಬೆಲೆಯೂ ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಮಾವಿನ ಹಣ್ಣನ್ನು ಕೊಪ್ಪಳದ ಗ್ರಾಹಕರೊಬ್ಬರಿಗೆ ಪ್ರತಿ ಹಣ್ಣಿಗೆ 10 ಸಾವಿರ ರೂ.ನಂತೆ ಮಾರಾಟ ಮಾಡಿದ್ದೇನೆ. ರಾಜ್ಯದಲ್ಲಿ ಕೆಲವೇ ಖರೀದಿದಾರರು ಲಭ್ಯವಿದ್ದಾರೆ. ಇದು ಪೌಷ್ಠಿಕಾಂಶದಿಂದ ಸಮೃದ್ಧವಾಗಿದೆ. ವಿಟಮಿನ್ ಎ, ಬಿ ಮತ್ತು ಸಿ ಹೊಂದಿದೆ. ಹಣ್ಣಿನ ಸೇವನೆ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಭದ್ರತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ಇತರ ಬೆಳೆಗಾರರಿಗೆ ಅರಿವು ಮೂಡಿಸುವುದಕ್ಕಾಗಿ ಇಲ್ಲಿ ಒಂದು ಹಣ್ಣನ್ನು ಪ್ರದರ್ಶಿಸಿದ್ದೇನಷ್ಟೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಧಾರವಾಡದಲ್ಲಿ ಮಾವು ಮೇಳ; ಇಲ್ಲಿವೆ ವಿವಿಧ ಬಗೆಯ ಹಣ್ಣುಗಳು
ಮಿಯಾಜಾಕಿ ತಳಿಯ ಮಾವು ನೇರಳೆ ಮಿಶ್ರಿತ ಕಡು ಕೆಂಪು ಬಣ್ಣದಿಂದ ಕೂಡಿದ್ದು, ಇದನ್ನು ಸೂರ್ಯನ ಮೊಟ್ಟೆ ಎಂದೂ ಕರೆಯುತ್ತಾರೆ. ಪ್ರತಿ ಹಣ್ಣು ಸುಮಾರು 200-350 ಗ್ರಾಂ ತೂಗುತ್ತದೆ.
ಧಾರವಾಡದಲ್ಲಿ ನಡೆಯುತ್ತಿರುವ ಮಾವು ಮೇಳ ಮತ್ತೆ 3 ದಿನ ವಿಸ್ತರಣೆಯಾಗಿದೆ. ಇಂದು ಕೊನೆಯಾಗಲಿದ್ದ ಮೇಳವನ್ನು ಸಾರ್ವಜನಿಕರ ಒತ್ತಾಸೆಗೆ ಮತ್ತೆ ವಿಸ್ತರಣೆ ಮಾಡಲಾಗಿದೆ. ಧಾರವಾಡದ ತೋಟಗಾರಿಕಾ ಇಲಾಖೆ ಆವರಣದಲ್ಲಿ ನಡೆಯುತ್ತಿರುವ ಮೇಳ ನಡೆಯುತ್ತಿದ್ದು, 30ಕ್ಕೂ ಹೆಚ್ಚು ರೈತರ ತೋಟಗಳಿಂದ ಮಾವಿನ ಹಣ್ಣುಗಳನ್ನು ತರಲಾಗಿದೆ. ರೈತರಿಂದಲೇ ನೇರವಾಗಿ ಗ್ರಾಹಕರಿಗೆ ಮಾವಿನಹಣ್ಣು ಮಾರಾಟ ಮಾಡಲಾಗುತ್ತಿದೆ. ಧಾರವಾಡ ಆಪೋಸಾ ಸೇರಿ ವಿವಿಧ ತಳಿಗಳ ಮಾವುಗಳ ಮಾರಾಟವಾಗುತ್ತಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ