ಧಾರವಾಡ: ಕಳೆನಾಶಕ ಸಿಂಪಡಿಸಿ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಹತ್ತಿ ನಾಶ ಮಾಡಿದ ದುಷ್ಕರ್ಮಿಗಳು
ಕಿಡಿಗೇಡಿಗಳ ಈ ಕೃತ್ಯದಿಂದ ರೈತ ಗಂಗಪ್ಪ ಆಘಾತಕ್ಕೆ ಒಳಗಾಗಿದ್ದಾರೆ. ರಾತ್ರೋರಾತ್ರಿ ಕಳೆನಾಶಕ ಹೊಡೆದು ಹೋಗಿರುವ ಕಿಡಿಗೇಡಿಗಳು ಹೊಟ್ಟೆ ಕಿಚ್ಚಿನಿಂದ ಹೀಗೆ ಮಾಡಿರಬಹುದು ಅನ್ನೋ ಅನುಮಾನ ಶುರುವಾಗಿದೆ.
ಧಾರವಾಡ, ಅಕ್ಟೋಬರ್ 24: ರಾಜ್ಯದಲ್ಲಿ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ತೀರಾ ಸಂಕಷ್ಟದಲ್ಲಿದ್ದಾರೆ. ಅಳಿದುಳಿದ ಬೆಳೆ ಕಾಪಾಡಿಕೊಳ್ಳಲು ರೈತರು ಅಕ್ಷರಶಃ ಹರಸಾಹಸ ಪಡುತ್ತಿದ್ದಾರೆ. ಇಂಥ ಪರಿಸ್ಥಿತಿಯಲ್ಲಿಯೇ ಧಾರವಾಡದಲ್ಲಿ (Dharawad) ರೈತನೊಬ್ಬನ ಹತ್ತಿ (Cotton) ಬೆಳೆಗೆ ನೀಚರು ರಾತ್ರೋರಾತ್ರಿ ಕಳೆನಾಶಕ ಸಿಂಪಡಿಸಿ ಹಾನಿ ಮಾಡಿದ್ದಾರೆ. ಇದರಿಂದಾಗಿ ಕೈಗೆ ಬಂದಿದ್ದ ಹತ್ತಿ ಬೆಳೆ ಇದೀಗ ಒಣಗಿ ಹೋಗುತ್ತಿದೆ.
ಸಮೃದ್ಧವಾಗಿ ಬೆಳೆದು ನಿಂತಿರೋ ಹತ್ತಿ ಬೆಳೆ, ಈಗಾಗಲೇ ಕಾಯಿ ಒಡೆದು ಹೊರಬಂದಿರೋ ಬಿಳಿ ಬಂಗಾರ, ಆದರೆ ಹಸಿರು ಬೆಳೆಯ ಮಧ್ಯೆಯೇ ಸಂಪೂರ್ಣ ಒಣಗಿ ಹೋಗುತ್ತಿರೋ ಬೆಳೆ, ಇದಕ್ಕೆಲ್ಲ ಕಾರಣ ಅಮಾಯಕ ರೈತನ ಮೇಲೆ ನೀಚರ ಸೇಡು. ಹೌದು, ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿನ ಗಂಗಪ್ಪ ಬಾರ್ಕಿ ಎಂಬ ರೈತರ ಜಮೀನಿನಲ್ಲಿ ನೀಚರು ಅಟ್ಟಹಾಸ ಪ್ರದರ್ಶಿಸಿದ್ದಾರೆ. ಒಂದೂವರೆ ಎಕರೆ ಪ್ರದೇಶದಲ್ಲಿ ಅವರು ಕಷ್ಟಪಟ್ಟು ಹತ್ತಿ ಬೆಳೆದಿದ್ದಾರೆ. ಇನ್ನೇನು ಹತ್ತಿ ಕಾಯಿಯೆಲ್ಲ ಒಡೆದು, ಇನ್ನೇನು ಹತ್ತಿ ಬಿಡಿಸಬೇಕು ಅನ್ನೋ ಸಿದ್ಧತೆಯಲ್ಲಿರೋವಾಗ ಗಂಗಪ್ಪ ಅವರಿಗೆ ಆಘಾತವೊಂದು ಎದುರಾಗಿದೆ. ಬರಗಾಲ ಇದ್ದರೂ ಗಂಗಪ್ಪ ನೀರು ಹಾಯಿಸಿ ಹತ್ತಿ ಬೆಳೆದಿದ್ದಾರೆ. ಸೊಂಪಾಗಿ ಬೆಳೆದ ಹತ್ತಿಯ ಫಸಲು ಇನ್ನೇನು ಕೈಸೇರಬೇಕು ಎನ್ನುವಷ್ಟರಲ್ಲಿ ಕಿಡಿಗೇಡಿಗಳು ರಾತ್ರೋರಾತ್ರಿ ಹತ್ತಿ ಬೆಳೆಗೆ ಕಳೆನಾಶಕ ಹೊಡೆದು ಪರಾರಿಯಾಗಿದ್ದಾರೆ. ಇದರಿಂದಾಗಿ ಬೆಳೆಯಲ್ಲಾ ಒಣಗುತ್ತಿದೆ.
ಕಿಡಿಗೇಡಿಗಳ ಈ ಕೃತ್ಯದಿಂದ ರೈತ ಗಂಗಪ್ಪ ಆಘಾತಕ್ಕೆ ಒಳಗಾಗಿದ್ದಾರೆ. ರಾತ್ರೋರಾತ್ರಿ ಕಳೆನಾಶಕ ಹೊಡೆದು ಹೋಗಿರುವ ಕಿಡಿಗೇಡಿಗಳು ಹೊಟ್ಟೆ ಕಿಚ್ಚಿನಿಂದ ಹೀಗೆ ಮಾಡಿರಬಹುದು ಅನ್ನೋ ಅನುಮಾನ ಶುರುವಾಗಿದೆ. ಏಕೆಂದರೆ ಗಂಗಪ್ಪ ಈ ಸಲ ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದರು. ಅದಕ್ಕೆ ಒಳ್ಳೆ ಬೆಲೆ ಸಿಕ್ಕು ಸಾಕಷ್ಟು ಲಾಭವನ್ನು ಗಳಿಸಿದ್ದರು. ಗಂಗಪ್ಪ ಟೊಮ್ಯಾಟೋ ಬೆಳೆಯಲು ಕೇವಲ 2 ಲಕ್ಷ ರೂಪಾಯಿ ಬಂಡವಾಳ ಹಾಕಿ, ಸುಮಾರು 15 ಲಕ್ಷ ರೂಪಾಯಿ ಆದಾಯ ತೆಗೆದಿದ್ದರಂತೆ. ಇದು ಅನೇಕರಿಗೆ ಹೊಟ್ಟೆ ಉರಿ ತರಿಸಿತ್ತಂತೆ. ಬಹುಶಃ ಇದೇ ಹೊಟ್ಟೆ ಕಿಚ್ಚಿನಿಂದ ಹೀಗೆ ಮಾಡಿರಬಹುದು ಅನ್ನೋದು ಸ್ಥಳೀಯರ ಅನುಮಾನ.
ಇದನ್ನೂ ಓದಿ: ಧಾರವಾಡ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಕಚೇರಿಯಲ್ಲಿ ಕೋಟಿಗೂ ಅಧಿಕ ಹಣ ಕಳ್ಳತನ
ಈ ಬಾರಿ ಮಳೆಯಾಗದೇ ಎಲ್ಲ ಬೆಳೆಗೂ ಸಂಕಷ್ಟವೊದಗಿದೆ. ಅದರಲ್ಲೂ ಹೆಚ್ಚು ಶ್ರಮ ಹಾಗೂ ಖರ್ಚನ್ನು ಬೇಡೋ ಹತ್ತಿಯಂಥ ವಾಣಿಜ್ಯ ಬೆಳೆಗಳ ಕಥೆಯನ್ನಂತೂ ಹೇಳಲೇಬಾರದು. ಏನೆಲ್ಲ ಕಷ್ಟಪಟ್ಟು ಹೀಗೆ ರೈತರು ಬೆಳೆದರೆ ಯಾರೋ ಬಂದು ಇಂಥ ಕೃತ್ಯವೆಸಗಿ ಹೋಗುತ್ತಿರೋದು ವಿಪರ್ಯಾಸದ ಸಂಗತಿ. ಇದೀಗ ರೈತ ಗಂಗಪ್ಪ ಪೊಲೀಸರ ಮೊರೆ ಹೋಗಲು ನಿರ್ಧರಿಸಿದ್ದು, ಪೊಲೀಸರು ಈ ಕೃತ್ಯವೆಸಗಿದವರನ್ನು ಪತ್ತೆ ಹಚ್ಚಿ, ಸೂಕ್ತ ಕ್ರಮ ತೆಗೆದುಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ