ಧಾರವಾಡ ಜಿಲ್ಲೆಯಲ್ಲಿ ಯಾವುದೇ ಕೊವಿಡ್ ಪ್ರಕರಣವಿಲ್ಲ, ಗಾಬರಿ ಬೇಡ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಧಾರವಾಡ ಜಿಲ್ಲೆಯಲ್ಲಿ ಯಾವುದೇ ಕೊವಿಡ್-19 ರ ಪ್ರಕರಣವು ವರದಿಯಾಗಿಲ್ಲ. ಸಾರ್ವಜನಿಕರು ಯಾವುದೇ ಗಾಬರಿ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ. ಆರೋಗ್ಯ ಸುರಕ್ಷತೆಗಾಗಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ತಿಳಿಸಲಾಗಿದೆ.
ಧಾರವಾಡ, ಡಿಸೆಂಬರ್ 21: ಕಳೆದ ಒಂದು ವಾರದಿಂದ ದೇಶದಲ್ಲಿ ಕೊವಿಡ್ (covid 19) ರೋಗ ಮತ್ತೆ ಸದ್ದು ಮಾಡುತ್ತಿದೆ. ಅನೇಕ ರಾಜ್ಯ ಹಾಗೂ ನಮ್ಮ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಕೊವಿಡ್ ಹೊಸ ತಳಿಯ ರೋಗಾಣು ಪತ್ತೆಯಾಗಿರುವ ವರದಿಯಾಗಿದೆ. ಆದರೆ ಜಿಲ್ಲೆಯಲ್ಲಿ ಇಂದಿನವರೆಗೂ ಮತ್ತೆ ಯಾವುದೇ ಸ್ವರೂಪದ ಕೊವಿಡ್ ಪ್ರಕರಣಗಳು ವರದಿಯಾಗಿಲ್ಲ. ಸಾರ್ವಜನಿಕರು ಕೊವಿಡ್ ಬಗ್ಗೆ ಗಾಬರಿ ಪಡದೇ ಆರೋಗ್ಯ ಸುರಕ್ಷತೆಗಾಗಿ ಸೂಕ್ತ ಮುನ್ನೆಚ್ಚರಿಕೆ, ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.
ಕೊವಿಡ್-19 ರಾಜ್ಯ ತಾಂತ್ರಿಕ ಸಲಹಾ ಸಮಿತಿಯು ಕೊವಿಡ್-19 ರ ಅಂಕಿ–ಅಂಶಗಳು, ಕೇರಳದಲ್ಲಿನ ಕೊವಿಡ್-19 ಪ್ರಕರಣಗಳ ಹೆಚ್ಚಳ, ತಮಿಳುನಾಡು ಹಾಗೂ ಕೇರಳ ರಾಜ್ಯದಲ್ಲಿ ಕೊವಿಡ್-19 ರ ಉಪತಳಿ ಜೆಎನ್.1 (JN.1) ವರದಿ, ಚಳಿಗಾಲದ ಹವಾಮಾನ, ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಹೆಚ್ಚಾಗುವ ಸಂಭವನೀಯ ಜನದಟ್ಟಣೆಯನ್ನು ಗಮನದಲ್ಲಿರಿಸಿಕೊಂಡು ಕೆಲವು ಸಲಹಾತ್ಮಕ ಮಾರ್ಗಸೂಚಿಗಳನ್ನು ಶಿಫಾರಸ್ಸು ಮಾಡಿದೆ. ಈ ಅಂಶಗಳನ್ನು ಜಿಲ್ಲೆಯ ಸಾರ್ವಜನಿಕರು ಸಹ ಪಾಲಿಸುವಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದ್ದಾರೆ.
ಇದನ್ನೂ ಓದಿ: ಕೋವಿಡ್ ಎದುರಿಸಲು ಸಿದ್ಧವಾದ ಹುಬ್ಬಳ್ಳಿಯ ಕಿಮ್ಸ್: ರೋಗಿಗಳಿಗಾಗಿ 100 ಬೆಡ್ ಮೀಸಲು
60 ವರ್ಷ ಹಾಗೂ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರು, ವಿಶೇಷವಾಗಿ ಕಿಡ್ನಿ, ಹೃದಯ, ಲೀವರ್ ಮತ್ತು ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಗರ್ಭಿಣಿಯರು, ಎದೆ ಹಾಲುಣಿಸುವ ತಾಯಂದಿರು ಜನದಟ್ಟಣೆ, ಹೊರಾಂಗಣ ಪ್ರದೇಶಗಳಿಗೆ ತೆರಳಿದಾಗ ಮಾಸ್ಕ್ ಧರಿಸಬೇಕು, ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಸಾಧ್ಯವಾದಷ್ಟು ತೆರಳದಂತೆ ತಿಳಿಸಿದ್ದಾರೆ.
ಜ್ವರ, ಕೆಮ್ಮು, ನೆಗಡಿ, ಉಸಿರಾಟದ ಸೋಂಕಿನ ಲಕ್ಷಣಗಳನ್ನು ಹೊಂದಿದವರು ತಕ್ಷಣವೇ ಅಗತ್ಯ ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ಮೂಗು ಹಾಗೂ ಬಾಯಿ ಮುಚ್ಚುವಂತೆ ಮಾಸ್ಕ್ ಧರಿಸಬೇಕು, ಅಗತ್ಯ ಗಾಳಿ-ಬೆಳಕಿನ ವ್ಯವಸ್ಥೆಯಿಲ್ಲದ ಮತ್ತು ಹೆಚ್ಚು ಜನಸಂದಣಿಯಿರುವ ಪ್ರದೇಶಗಳಿಗೆ ಭೇಟಿ ನೀಡಬಾರದೆಂದು ತಿಳಿಸಿದ್ದಾರೆ. ಉತ್ತಮ ವೈಯಕ್ತಿಕ ಸ್ವಚ್ಚತೆ, ಆಗಾಗ್ಗೆ ಕೈಗಳನ್ನು ಸೋಪು ಹಾಗೂ ನೀರಿನಿಂದ ತೊಳೆದುಕೊಳ್ಳುವುದು, ಮುಂಗೃತೆಯ ಪಾಲನೆಯು ಅಗತ್ಯವಾಗಿದೆ.
ಆರೋಗ್ಯ ಸಮಸ್ಯೆಗಳು ಕಂಡುಬಂದಲ್ಲಿ ಮನೆಯಲ್ಲಿರುವುದು ಸೂಕ್ತ. ಇತರ ವ್ಯಕ್ತಿಗಳೊಂದಿಗೆ, ವಿಶೇಷವಾಗಿ ಹಿರಿಯ ನಾಗರಿಕರು, ದುರ್ಬಲರನ್ನು (Vulnerable) ಅವಶ್ಯವಿದ್ದಲ್ಲಿ ಮಾತ್ರವೇ ಭೇಟಿ ಮಾಡಬೇಕು. ಆರೋಗ್ಯ ಸಮಸ್ಯೆಗಳನ್ನು ಹೊಂದಿದವರು ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ. ಅಂತರರಾಷ್ಟ್ರೀಯ ಪ್ರಯಾಣದ ಸಂದರ್ಭದಲ್ಲಿ ಎಚ್ಚರಿಕೆಯಿಂದಿದ್ದು, ವಿಮಾನ ನಿಲ್ದಾಣದಲ್ಲಿ ಹಾಗೂ ವಿಮಾನದ ಒಳಗೆ ಮಾಸ್ಕ್ ಧರಿಸಬೇಕೆಂದು ಹೇಳಿದ್ದಾರೆ.
ಧಾರವಾಡ ಜಿಲ್ಲೆಯಲ್ಲಿ ಕೈಗೊಂಡ ಮುಂಜಾಗೃತಾ ಕ್ರಮಗಳು
ಜಿಲ್ಲೆಯಲ್ಲಿ ಕೊವಿಡ್–19 ನಿಯಂತ್ರಣಕ್ಕಾಗಿ ಎಲ್ಲ ಅಗತ್ಯ ಕ್ರಮಗಳನ್ನು ಕೈಕೊಳ್ಳಲಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ, ಧಾರವಾಡ ಜಿಲ್ಲಾ ಆಸ್ಪತ್ರೆ ಮತ್ತು ಕಲಘಟಗಿ, ನವಲಗುಂದ ಮತ್ತು ಕುಂದಗೋಳ ತಾಲೂಕಾ ಆಸ್ಪತ್ರೆಗಳಲ್ಲಿ ಕೊವಿಡ್-19 ನಿಯಂತ್ರಣಕ್ಕೆ ಸಂಬಂಧಪಟ್ಟಂತೆ ಎಲ್ಲ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿಂದು ಹೊಸದಾಗಿ 24 ಜನರಿಗೆ ಕೊರೊನಾ ಸೋಂಕು; ಇಲ್ಲಿದೆ ವಿವರ
ಕೊವಿಡ್-19 ರ ಚಿಕಿತ್ಸೆಗಾಗಿ ವಿವಿಧ ಆಸ್ಪತೆಗಳಲ್ಲಿ ಒಟ್ಟು 5,450 ಹಾಸಿಗೆಗಳು ಲಭ್ಯವಿವೆ. 1,666 ಆಕ್ಸಿಜನ್ ಹಾಸಿಗೆಗಳು, 565 ಐ.ಸಿ.ಯು. ಹಾಸಿಗೆಗಳು, 205 ವೆಂಟಿಲೇಟರ್ಸ್ ಹಾಸಿಗೆಗಳು, 500 ಆಕ್ಷಿಜನ್ ಕಾನಸೆಂಟ್ರೇಟರ್ಸ್, 1,307 ಆಕ್ಷಿಜನ್ ಸಿಲಿಂಡರ್‍ಗಳು, 15 ಪಿ.ಎಸ್.ಎ ಪ್ಲ್ಯಾಂಟ್‍ಗಳು ಹಾಗೂ 21 ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಸ್ಟೋರೆಜ್ ಟ್ಯಾಂಕ್‍ಗಳು ಲಭ್ಯವಿದ್ದು, ಎಲ್ಲ ಸುಸ್ಥಿತಿಯಲ್ಲಿವೆ.
ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತು ಧಾರವಾಡದ ಡಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕೊವಿಡ್–19 ಪರೀಕ್ಷೆ ಕೈಗೊಳ್ಳಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಆಸ್ಪತ್ರೆ ಮುಖ್ಯಸ್ಥರಿಗೆ ಕೂಡಾ ಕೊವಿಡ್–19 ನ್ನು ಎದುರಿಸುವ ನಿಟ್ಟಿನಲ್ಲಿ ಅಗತ್ಯ ಸೌಲಭ್ಯಗಳೊಂದಿಗೆ ಸನ್ನದ್ಧರಾಗುವಂತೆ ಸೂಚಿಸಲಾಗಿದೆ.
ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಕೊವಿಡ್-19 ರ ಪ್ರಕರಣವು ವರದಿಯಾಗಿಲ್ಲ. ಸಾರ್ವಜನಿಕರು ಯಾವುದೇ ಗಾಬರಿ ಪಡುವ ಅಗತ್ಯವಿಲ್ಲ. ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಪಾಲನೆ ಮಾಡಬೇಕು ಹಾಗೂ ಕೊವಿಡ್-19 ರ ಲಕ್ಷಣಗಳು ಕಂಡು ಬಂದಲ್ಲಿ ಸಮೀಪದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.