ವೆಜ್​ ಬದಲಿಗೆ ನಾನ್​ ವೆಜ್​ ಡೆಲಿವರಿ: ಡೊಮಿನೊಸ್ ಸಂಸ್ಥೆಗೆ 50 ಸಾವಿರ ರೂ. ದಂಡ

ಮನೆಯಲ್ಲೇ ಕುಳಿತು, ತಮಗೆ ಬೇಕಾದ ಆಹಾರ ಪದಾರ್ಥಗಳನ್ನು ತರೆಯಿಸಿಕೊಳ್ಳಲು ಅಂತ ಅನೇಕ ಆನ್​ಲೈನ್ ಸರ್ವಿಸ್​ಗಳಿವೆ. ಅಂಥದ್ದೇ ಒಂದು ಪ್ರತಿಷ್ಠಿತ ಆಹಾರ ಸಂಸ್ಥೆಯಿಂದ ಓರ್ವ ವಿದ್ಯಾರ್ಥಿ ತಾನಿದ್ದ ರೂಮ್​ಗೆ ಸಸ್ಯಹಾರ ಆಹಾರವನ್ನು ಆರ್ಡರ್ ಮಾಡಿಕೊಂಡಿದ್ದನು. ಆದರೆ, ಸಸ್ಯಹಾರಿ ಆಹಾರ ಆರ್ಡರ್ ಮಾಡಿದ್ದ ವಿದ್ಯಾರ್ಥಿಗೆ, ನಾನ್ ವೆಜ್ ಆಹಾರ ಡೆಲಿವರಿ ಮಾಡಲಾಗಿತ್ತು. ಇದರ ವಿರುದ್ಧ ಗ್ರಾಹಕರ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿಗೆ ನ್ಯಾಯ ಸಿಕ್ಕಿದೆ. ಗ್ರಾಹಕರ ನ್ಯಾಯಾಲಯ ಇದೀಗ ಆ ಸಂಸ್ಥೆಗೆ ದಂಡ ವಿಧಿಸಿ ತೀರ್ಪು ನೀಡಿದೆ.

ವೆಜ್​ ಬದಲಿಗೆ ನಾನ್​ ವೆಜ್​ ಡೆಲಿವರಿ: ಡೊಮಿನೊಸ್ ಸಂಸ್ಥೆಗೆ 50 ಸಾವಿರ ರೂ. ದಂಡ
ಡೊಮಿನೊಸ್
Edited By:

Updated on: Jul 19, 2025 | 9:49 PM

ಧಾರವಾಡ, ಜುಲೈ 12: ವೆಜ್​ ಆರ್ಡರ್​ ಮಾಡಿದ್ದ ವಿದ್ಯಾರ್ಥಿಗೆ ನಾನ್​ ವೆಜ್​ ಡೆಲಿವರಿ ಮಾಡಿದ ಡೊಮಿನೊಸ್ (Domino’s)​ ಕಂಪನಿಗೆ ಗ್ರಾಹಕರ ನ್ಯಾಯಾಲಯ (Consumer Court) 50 ಸಾವಿರ ರೂ. ದಂಡ ವಿಧಿಸಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಮೂಲದ ಪ್ರದ್ಯುಮ್ನ ಇನಾಮದಾರ ಎಂಬುವರು ಧಾರವಾಡದ (Dharwad) ಕಾಲೇಜು ಒಂದರಲ್ಲಿ ಪಿಯುಸಿ ಎರಡನೇ ವರ್ಷದಲ್ಲಿ ಓದುತ್ತಿರುವಾಗ ತನ್ನ ಸ್ನೇಹಿತನೊಂದಿಗೆ ದಾನೇಶ್ವರ ಬಡಾವಣೆಯಲ್ಲಿ ರೂಂ ಮಾಡಿಕೊಂಡು ವಾಸವಾಗಿದ್ದರು.

2025ರ ಜುಲೈ 12ರಂದು ರಾತ್ರಿ ವಿದ್ಯಾಗಿರಿಯಲ್ಲಿರುವ ಡೊಮಿನೊಸ್​ಗೆ ಪಿಜ್ಜಾ ಆರ್ಡರ್ ಮಾಡಿದ್ದರು. ಒಂದು ವೆಜ್ ಪಿಜ್ಜಾ, ಎರಡು ಜಿಂಗಿ ಪಾರ್ಸಲ್, ಗಾರ್ಲಿಕ್ ಪಿಜ್ಜಾ ಆರ್ಡರ್ ಮಾಡಿದ್ದರು. ಆರ್ಡರ್​ ಅನ್ನು ತಡವಾಗಿ ಡೆಲಿವರಿ ಮಾಡಿದ್ದಕ್ಕೆ ಪ್ರದ್ಯಮ್ನ ಮತ್ತು ಡೆಲಿವರಿ ಬಾಯ್ ನಡುವೆ ಕೊಂಚ ಮಾತಿನ ಚಕಮಕಿ ನಡೆದಿತ್ತು.

ಇದಾದ ಬಳಿಕ ರೂಮ್​ಗೆ ಹೋಗಿ ಪಾರ್ಸಲ್ ಓಪನ್ ಮಾಡಿ  ಸೇವಿಸಿದಾಗ, ವೆಜ್ ಬದಲಿಗೆ ನಾನ್ ವೆಜ್ ಡೆಲವರಿ ಮಾಡಿರುವುದು ಗೊತ್ತಾಗಿದೆ. ಚಿಕನ್ ಪೀಸ್ ಡೆಲಿವರಿ ಮಾಡಲಾಗಿತ್ತು. ಈ ಬಗ್ಗೆ ಡೊಮಿನೊಸ್​​ಗೆ ಕರೆ ಮಾಡಿ ವಿಚಾರಿಸಿದಾಗ, ಮತ್ತೊಂದು ಸಾರಿ ಆರ್ಡರ್​ ಮಾಡಿದಾಗ ಬೇರೆ ಏನಾದರೂ ಪರಿಹಾರವಾಗಿ ಆಹಾರ ಕಳುಹಿಸುತ್ತೇವೆ ಅಂತಷ್ಟೆ ಸಮಜಾಯಿಸಿ ನೀಡಿದ್ದರು. ಇದರಿಂದ ನೊಂದ ಪ್ರದ್ಯುಮ್ನ, 2025ರ ಜನವರಿಯಲ್ಲಿ ಗ್ರಾಹಕರ ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ನಡೆಸಿದ ಗ್ರಾಹಕರ ನ್ಯಾಯಾಲಯ, ಡೊಮಿನೊಸ್ ಸಂಸ್ಥೆಗೆ ಬರೋಬ್ಬರಿ ದಂಡ ವಿಧಿಸಿ ಆದೇಶ ಮಾಡಿದೆ.

ಪ್ರದ್ಯುಮ್ನ ಇನಾಮದಾರ ಪನೀರ್ ಪಿಜ್ಜಾ, ಪನೀರ್‌ ಟಿಕ್ಕಾ, ಸ್ಟಫ್ಟ್ ಗಾರ್ಲಿಕ್ ಬ್ರೆಡ್, ವೆಜ್‌ಜಿಂಗಿ ಪಾರ್ಸೆಲ್ ಹಾಗೂ ಚೀಸ್‌ಡಿಪ್‌ ಗಾಗಿ ರೂ. 555 ಪಾವತಿಸಿದ್ದರು. ಅದು ರೂಮಿಗೆ ತಲುಪಿದ ನಂತರ ಅದನ್ನು ಸೇವಿಸಿದಾಗ, ಅದು ಸಸ್ಯಹಾರ ಅಲ್ಲ. ಮಾಂಸಹಾರ ಎನ್ನುವುದು ಗೊತ್ತಾಗಿತ್ತು. ಡೊಮಿನೊಸ್ ಕಳುಹಿಸಿದಂತಹ ವೆಜ್‌ ಜಿಂಗಿ ಪಾರ್ಸೆಲ್ ಬಾಕ್ಸ್‌ ಮೇಲೆ ಹಸಿರು ಸ್ಟಿಕ‌ರ್ ಅಂಟಿಸಲಾಗಿತ್ತು. ಆದರೆ, ಅದರಲ್ಲಿ ಮಾಂಸಹಾರ ಪದಾರ್ಥ ಕಳುಹಿಸಿ ಅದನ್ನು ತಾನು ಸೇವಿಸಿದ್ದರಿಂದ ತನಗೆ ಧರ್ಮ ಭ್ರಷ್ಟ ಮಾಡಿದಂತಾಗಿದೆ ಎಂದು ಪ್ರದ್ಯುಮ್ನ ದೂರು ದಾಖಲಿಸಿದ್ದರು.

ಈ ದೂರು ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷ ಈಶಪ್ಪ ಭೂತೆ ಹಾಗೂ ಸದಸ್ಯರಾದ ವಿಶಾಲಾಕ್ಷಿ ಬೋಳಶೆಟ್ಟಿ ಅವರು, ವಿದ್ಯಾರ್ಥಿಯು ಸಂಪೂರ್ಣ ಸಸ್ಯಹಾರಿಯಾಗಿದ್ದಾರೆ. ಡೊಮಿನೊಸ್​ನವರು ಸಸ್ಯಹಾರಿಯ ಆಹಾರ ಪದಾರ್ಥದ ಬದಲು ಮಾಂಸಹಾರ ನೀಡಿದ್ದು ಸೇವಾ ನ್ಯೂನ್ಯತೆ ಮಾಡಿದಂತೆ. ಅದು ದಾಖಲೆಗಳಿಂದಲೂ ಸಾಬೀತಾಗಿದೆ. ದೂರುದಾರರಿಗೆ ಆಗಿರುವ ಮಾನಸಿಕ ತೊಂದರೆ ಹಾಗೂ ಅನಾನುಕೂಲಕ್ಕೆ 50 ಸಾವಿರ ರೂ. ಪರಿಹಾರ ಹಾಗೂ ಪ್ರಕರಣದ ಖರ್ಚು ವೆಚ್ಚವಾಗಿ 10 ಸಾವಿರ ರೂ. ಕೊಡುವಂತೆ ಡೊಮಿನೊಸ್ ಸಂಸ್ಥೆಗೆ ಆದೇಶಿಸಿದೆ.

ಇದನ್ನೂ ಓದಿ: 89 ರೂ. ಚಾಕಲೇಟ್​ನಲ್ಲಿ ಹುಳಗಳು! 50 ಲಕ್ಷ ರೂ. ಪರಿಹಾರ ಕೋರಿದ ಗ್ರಾಹಕ, ಕೋರ್ಟ್ ಹೇಳಿದ್ದೇನು?

ಆಹಾರ ನೀಡಲು ಬಂದಾಗ ಕೂಡ ಸಿಬ್ಬಂದಿ ವರ್ತನೆಯ ಬಗ್ಗೆಯೂ ದೂರಿನಲ್ಲಿ ತಿಳಿಸಲಾಗಿತ್ತು. ಈ ಆದೇಶದಿಂದಾಗಿ ಗ್ರಾಹಕರಿಗೆ ಬೆದರಿಸುವುದು ಎಷ್ಟರಮಟ್ಟಿಗೆ ಪರಿಣಾಮ ಬೀರುತ್ತೆ ಅನ್ನೋದು ಗೊತ್ತಾಗುತ್ತಿದೆ. ಒಟ್ಟಾರೆಯಾಗಿ ತಪ್ಪು ಮಾಡಿದವರು ಯಾರೇ ಆದರೂ ಅವರಿಗೆ ಶಿಕ್ಷೆ ತಪ್ಪಿದ್ದಲ್ಲ ಎಂಬುವುದು ಈ ಪ್ರಕರಣದಿಂದ ಸಾಬೀತಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:40 pm, Sat, 19 July 25