ಬಿಜೆಪಿ ಮುಖಂಡನಿಂದ ರೈತನಿಗೆ ಜಮೀನು ಖರೀದಿಯಲ್ಲಿ ಮೋಸ ಆರೋಪ; ರೈತನಿಗೆ ನ್ಯಾಯ ಕೊಡಿಸಲು ಮನೆ ಮುಂದೆ ಪ್ರತಿಭಟನೆ
ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ಬಸವರಾಜ ದೇಸಾಯಿ ಅನ್ನುವ ರೈತನಿಗೆ ಸೇರಿದ್ದ 2 ಎಕರೆ 4 ಗುಂಟೆ ಜಮೀನಿದೆ. ಅದರ ಈಗಿನ ಮಾರುಕಟ್ಟೆ ಬೆಲೆ ಸುಮಾರು 50 ಲಕ್ಷ ರೂಪಾಯಿ. ಆದರೆ ಈ ಜಮೀನನ್ನು ಧಾರವಾಡದ ಬಿಜೆಪಿ ಮುಖಂಡ ಸುಧೀರ್ ಕ್ಷತ್ರೀಯ 2014 ರಲ್ಲಿ ನ್ಯಾಯವಾದಿ ರವೀಶ್ ಅನ್ನೋರಿಗೆ ಮಾರಾಟ ಮಾಡಿದ್ದಾರೆ.
ಹುಬ್ಬಳ್ಳಿ-ಧಾರವಾಡ ಅವಳಿ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಲೇ ಹೋಗುತ್ತಿದೆ. ಇದರಿಂದಾಗಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮವೂ ದೊಡ್ಡದಾಗುತ್ತಾ ಸಾಗಿದೆ. ಯಾವಾಗ ಇಲ್ಲಿನ ಭೂಮಿಗೆ ಹೆಚ್ಚಿನ ಬೆಲೆ ಸಿಗೋಕೆ ಆರಂಭವಾಯ್ತೋ ಮೋಸ, ವಂಚನೆ ಪ್ರಕರಣಗಳು ಕೂಡ ಹೆಚ್ಚಾಗತೊಡಗಿವೆ. ಇದೀಗ ಭೂಮಿಯೊಂದಕ್ಕೆ ಸಂಬಂಧಿಸಿದಂತೆ ತಮಗೆ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾನೆ ಅನ್ನೋ ಆರೋಪ ಧಾರವಾಡದ ಬಿಜೆಪಿ ಮುಖಂಡನ ಮೇಲೆ ಬಂದಿದೆ. ಬಡ ರೈತನ ಜಮೀನಿಗೆ ಸಂಬಂಧಿಸಿದಂತೆ ಇದೀಗ ಬಂದಿರೋ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಬಸವರಾಜ ದೇಸಾಯಿ ಮತ್ತು ಸುಧೀರ್ ಕ್ಷತ್ರೀಯ ನಡುವೆ ಜಟಾಪಟಿ ಧಾರವಾಡ ತಾಲೂಕಿನ ಚಂದನಮಟ್ಟಿ ಗ್ರಾಮದಲ್ಲಿ ಬಸವರಾಜ ದೇಸಾಯಿ ಅನ್ನುವ ರೈತನಿಗೆ ಸೇರಿದ್ದ 2 ಎಕರೆ 4 ಗುಂಟೆ ಜಮೀನಿದೆ. ಅದರ ಈಗಿನ ಮಾರುಕಟ್ಟೆ ಬೆಲೆ ಸುಮಾರು 50 ಲಕ್ಷ ರೂಪಾಯಿ. ಆದರೆ ಈ ಜಮೀನನ್ನು ಧಾರವಾಡದ ಬಿಜೆಪಿ ಮುಖಂಡ ಸುಧೀರ್ ಕ್ಷತ್ರೀಯ 2014 ರಲ್ಲಿ ನ್ಯಾಯವಾದಿ ರವೀಶ್ ಅನ್ನೋರಿಗೆ ಮಾರಾಟ ಮಾಡಿದ್ದಾರೆ. ಬಸವರಾಜ ಅವರ ಅಣ್ಣ ಶಿವಾನಂದ ದೇಸಾಯಿ ಸುಧೀರ್ ಕ್ಷತ್ರೀಯ ಅವರ ಬಳಿ ಕೆಲಸ ಮಾಡುತ್ತಿದ್ದರು. ಅದೇ ಶಿವಾನಂದ ದೇಸಾಯಿಯ ಮೂಲಕವೇ ಈ ಜಮೀನನ್ನು ರವೀಶ್ ಗೆ ಬರೆದುಕೊಟ್ಟಿದ್ದಾರೆ. ಅಷ್ಟೇ ಅಲ್ಲ, ಮುಂಗಣ ಹಣ ನೀಡಿ ಅದನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿಯನ್ನು ಕೂಡ ಮಾಡಿಸಲಾಗಿದೆ. ಒಟ್ಟು ಜಮೀನಿಗೆ 24 ಲಕ್ಷ ರೂಪಾಯಿ ನಿಗದಿ ಮಾಡಲಾಗಿತ್ತು. ಇದರಲ್ಲಿ 4 ಲಕ್ಷ ರೂಪಾಯಿ ಬಾಕಿ ಉಳಿದಿತ್ತು. ಬಳಿಕ ಈ 4 ಲಕ್ಷಕ್ಕೆ ಒಟ್ಟು ಹತ್ತು ಲಕ್ಷ ರೂಪಾಯಿ ನೀಡಬೇಕೆನ್ನುವ ಒಪ್ಪಂದವೂ ಆಗಿತ್ತು. ಆದರೆ ಇದೀಗ ಆ ಹಣವನ್ನು ಬಸವರಾಜ ದೇಸಾಯಿಗೆ ನೀಡಲು ಸುಧೀರ್ ಕ್ಷತ್ರೀಯ ಸಿದ್ಧನಿಲ್ಲ. ಇದೇ ಕಾರಣಕ್ಕೆ ಇದೀಗ ಬಸವರಾಜ ದೇಸಾಯಿ ಮತ್ತು ಸುಧೀರ್ ಕ್ಷತ್ರೀಯ ಅವರ ನಡುವೆ ಜಟಾಪಟಿ ಶುರುವಾಗಿದೆ.
ರೈತನಿಗೆ ನ್ಯಾಯ ಕೊಡಿಸಲು ಸುಧೀರ್ ಮನೆ ಮುಂದೆ ಜಯ ಕರ್ನಾಟಕ ಸಂಘಟನೆ ಪ್ರತಿಭಟನೆ ಹಲವಾರು ವರ್ಷಗಳಿಂದಲೂ ಈ ವ್ಯಾಜ್ಯ ನಡೆದಿರುವುದರಿಂದ ಬಸವರಾಜ ದೇಸಾಯಿ ನ್ಯಾಯ ಕೊಡಿಸುವಂತೆ ಜಯ ಕರ್ನಾಟಕ ಸಂಘಟನೆ ಮೊರೆ ಹೋಗಿದ್ದರು. ಸ್ವತಃ ಸಂಘಟನೆ ಸದಸ್ಯರೂ ಆಗಿರುವ ಬಸವರಾಜ ಕೊನೆಗೆ ಸಂಘಟನೆ ನಾಯಕರೊಂದಿಗೆ ಧಾರವಾಡದ ಬಸವೇಶ್ವರ ನಗರದ ಸುಧೀರ್ ಅವರ ಮನೆ ಪ್ರತಿಭಟನೆ ನಡೆಸಿದ್ದಾರೆ. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಉಪ ನಗರ ಠಾಣೆ ಪೊಲೀಸರು ಎಲ್ಲ ಪ್ರತಿಭಟನಾಕಾರರನ್ನು ಠಾಣೆಗೆ ಕರೆ ತಂದಿದ್ದಾರೆ. ಇದೇ ವೇಳೆ ಸುಧೀರ್ ಕ್ಷತ್ರೀಯ ಕೂಡ ಠಾಣೆಗೆ ಆಗಮಿಸಿ, ತನ್ನ ಸ್ಪಷ್ಟನೆಯನ್ನೂ ನೀಡಿದ್ದಾರೆ. ಪೊಲೀಸರು ಗಂಟೆಗಟ್ಟಲೇ ವಿಚಾರಣೆ ನಡೆಸಿ, ಇಬ್ಬರ ನಡುವೆ ಸಂಧಾನಕ್ಕೆ ಯತ್ನಿಸಿದರೂ ಸಾಧ್ಯವಾಗಲೇ ಇಲ್ಲ. ಕೊನೆಗೆ ಈ ಸಮಸ್ಯೆಗೆ ಸಂಬಂಧಿಸಿದಂತೆ ಇಬ್ಬರೂ ಏನು ದೂರು ನೀಡುತ್ತಾರೋ ಅದರ ಮೇಲೆ ಮುಂದಿನ ಕ್ರಮ ಕೈಗೊಳ್ಳೋದಾಗಿ ಪೊಲೀಸರು ಹೇಳಿದ್ದಾರೆ.
ನಮ್ಮ ತಾಯಿಯ ನಕಲಿ ಮರಣ ಪತ್ರ ಸೃಷ್ಟಿಸಿ ಆಸ್ತಿ ಮಾರಾಟ ಮಾಡಲಾಗಿದೆ ಈ ಜಮೀನು ನಮ್ಮ ತಂದೆಯಿಂದ ನಮಗೆ ಬಂದಿದೆ. ಇದರಲ್ಲಿ ನಮ್ಮ ತಾಯಿ ಹಾಗೂ ನಮ್ಮ ಸಹೋದರರ ಹೆಸರನ್ನು ಸೇರಿಸಬೇಕಿತ್ತು. ಆದರೆ ನಮ್ಮ ತಾಯಿ ಮೃತಪಟ್ಟಿದ್ದಾರೆ ಅಂತಾ ನಕಲಿ ದಾಖಲೆ ಸೃಷ್ಟಿಸಿ ಸುಧೀರ್ ಕ್ಷತ್ರೀಯ ಅವರು ರವೀಶ್ ಅನ್ನುವ ವಕೀಲರಿಗೆ ಮಾರಾಟ ಮಾಡಿದ್ದಾರೆ. ತಂದೆಯ ಹೆಸರಿನಲ್ಲಿದ್ದ ಜಮೀನಿನ ದಾಖಲೆಯಲ್ಲಿ ಕುಟುಂಬದ ಯಾರ ಹೆಸರನ್ನೂ ನಮೂದಿಸದೇ ನೇರವಾಗಿ ರವೀಶ್ ಅವರಿಗೆ ಮಾರಾಟ ಮಾಡಿರೋದು ಎಷ್ಟು ಸರಿ ಅನ್ನೋದು ಕೂಡ ಬಸವರಾಜ ದೇಸಾಯಿ ಪ್ರಶ್ನೆ. ನಾನು ಈ ಪ್ರಕರಣವನ್ನು ಇಲ್ಲಿಗೆ ಬಿಡುವುದಿಲ್ಲ. ಈ ಬಗ್ಗೆ ಕಾನೂನು ಹೋರಾಟ ಮಾಡುತ್ತೇನೆ ಎಂದು ಸುಧೀರ್ ತಿಳಿಸಿದ್ದಾರೆ.
ತಾನು ಆ ಭೂಮಿಯನ್ನು ನ್ಯಾಯವಾದಿ ರವೀಶ್ ಗೆ ಕೊಡಿಸಿದ್ದು ಸತ್ಯ. ಅಲ್ಲದೇ ಈಗಾಗಲೇ 20 ಲಕ್ಷ ರೂಪಾಯಿ ಕೂಡ ನೀಡಲಾಗಿದೆ. ಇನ್ನುಳಿದ 4 ಲಕ್ಷ ರೂಪಾಯಿ ಬದಲಿಗೆ 10 ಲಕ್ಷ ರೂಪಾಯಿ ನೀಡೋದಾಗಿ ಹೇಳಿದರೂ ಅದರ ಬದಲು 80 ಲಕ್ಷ ರೂಪಾಯಿ ನೀಡುವಂತೆ ದೇಸಾಯಿ ಕುಟುಂಬದವರು ಒತ್ತಾಯಿಸುತ್ತಿದ್ದಾರೆ. ಅಲ್ಲದೇ ನನ್ನ ಮನೆಯ ಮುಂದೆ ಬಂದು ಪ್ರತಿಭಟನೆ ನಡೆಸುವುದು, ಜೀವ ಬೆದರಿಗೆ ಹಾಕುವುದು ಎಷ್ಟರಮಟ್ಟಿಗೆ ಸರಿ? ಒಂದು ವೇಳೆ ನನಗೆ ಏನಾದರೂ ಆದರೆ ಅದಕ್ಕೆ ಇವರೇ ಹೊಣೆ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ನ್ಯಾಯವಾದಿ ರವೀಶ್ ಅವರನ್ನು ಕೇಳಿದರೆ, ಸುಧೀರ್ ಅವರ ವಿರುದ್ಧವೇ ಹರಿಹಾಯುತ್ತಾರೆ. ನಾನು ಕಾನೂನಾತ್ಮಕವಾಗಿಯೇ ಈ ಜಮೀನನ್ನು ಖರೀದಿ ಮಾಡಿದ್ದೇನೆ. ನನಗೂ ಕೂಡ ಸುಧೀರ್ ಕ್ಷತ್ರೀಯ ಅನೇಕ ರೀತಿಯ ತೊಂದರೆ ನೀಡಿದ್ದಾರೆ. ಹೀಗಾಗಿ ಇದೀಗ ಈ ಜಮೀನಿಗೆ ಸಂಬಂಧಿಸಿದಂತೆ ತಮಗೆ ನೋಂದಣಿ ಮಾಡಿಕೊಡುವಂತೆ ನ್ಯಾಯಾಲಯದಲ್ಲಿ ತಾವು ದಾವೆ ಹೂಡಿರೋದಾಗಿ ನ್ಯಾಯವಾದಿ ರವೀಶ್ ಹೇಳುತ್ತಾರೆ. ಈ ಮುಂಚೆಯೂ ಸುಧೀರ್ ಕ್ಷತ್ರೀಯ ಅವರ ಮೇಲೆ ಇಂಥ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಆದರೆ ಪಕ್ಷದ ಹಾಗೂ ನಾಯಕರ ಪ್ರಭಾವ ಬಳಸಿಕೊಂಡು ಸುಧೀರ್ ಅವುಗಳನ್ನು ಮುಗಿಸಿಕೊಳ್ಳುತ್ತಿದ್ದರು ಎನ್ನಲಾಗುತ್ತಿದೆ. ಆದರೆ ಈ ಕೇಸ್ ಮಾತ್ರ ಅವರನ್ನು ಠಾಣೆಗೆ ಬರುವಂತೆ ಮಾಡಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9 ಧಾರವಾಡ
ಇದನ್ನೂ ಓದಿ: ಚೀನಾ ವಿರುದ್ಧ ಭಾರತ ಸರ್ಕಾರದ ಬಳಿ ಕಾರ್ಯತಂತ್ರವಿಲ್ಲ, ಮಿಸ್ಟರ್ 56 ಹೆದರಿಕೊಂಡಿದ್ದಾರೆ: ರಾಹುಲ್ ಗಾಂಧಿ