ಶಿಕ್ಷಣ ಕಾಶಿ ಧಾರವಾಡದಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ! ಜನವರಿ 28 ರಂದು ಅಮಿತ್ ಶಾ ಶಂಕುಸ್ಥಾಪನೆ
FSL university Dharwad ಜನವರಿ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಧಾರವಾಡಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದಾರೆ.
ಧಾರವಾಡ (Dharwad) ಅಂದ್ರೆ ಶಿಕ್ಷಣ ಕಾಶಿ. ಇದಕ್ಕೆ ಕಾರಣವಾಗಿದ್ದು ಇಲ್ಲಿರೋ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯದ ಜೊತೆಗೆ ಕೃಷಿ ಮತ್ತು ಕಾನೂನು ವಿಶ್ವವಿದ್ಯಾಲಯಗಳು. ಈಗ ಅದಕ್ಕೆ ಮತ್ತೊಂದು ವಿಶ್ವವಿದ್ಯಾಲಯದ ಕ್ಯಾಂಪಸ್ ಸೇರ್ಪಡೆಯಾಗುತ್ತಿದ್ದು, ಈ ಮೂಲಕ ಧಾರವಾಡ ಈಗ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಹಾಗಾದ್ರೆ ಯಾವುದು ಆ ವಿಶ್ವವಿದ್ಯಾಲಯ ಕ್ಯಾಂಪಸ್? ಇಲ್ಲಿದೆ ನೋಡಿ… ಯಾವುದೇ ಒಂದು ಅಪರಾಧ ಪ್ರಕರಣ ನಡೆದರೂ ಅದರ ಮೂಲ ಹೊರಬರಬೇಕಾದ್ರೆ ತನಿಖೆಯಲ್ಲಿ ಪ್ರಮುಖ ಪಾತ್ರ ವಹಿಸೋದೇ ವಿಧಿ ವಿಜ್ಞಾನ ತಂತ್ರಜ್ಞಾನ. ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣಕ್ಕೆ ವಿಧಿ ವಿಜ್ಞಾನ ತಜ್ಞರಿಗೂ ಬೇಡಿಕೆ ಇದೆ. ಆದರೆ ದಕ್ಷಿಣ ಭಾರತ ಅದರಲ್ಲಿಯೂ ಕರ್ನಾಟಕಕ್ಕೆ ಹೋಲಿಸಿದ್ರೆ ಈ ಕ್ಷೇತ್ರದಲ್ಲಿ ತೀರಾ ಹಿಂದುಳಿದೆ. ಇದೇ ಕಾರಣಕ್ಕೆ ಈಗ ಕೇಂದ್ರ ಸರ್ಕಾರ ರಾಷ್ಟ್ರೀಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ (FSL university) ಕ್ಯಾಂಪಸ್ಸನ್ನು ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಆರಂಭಿಸೋಕೆ ಮುಂದಾಗಿದ್ದು, ಈ ಭಾಗದ ಮೊದಲ ಕ್ಯಾಂಪಸ್ ಧಾರವಾಡದಲ್ಲಿ ಆಗುತ್ತಿದೆ.
ಹೌದು, ಇದು ಕರ್ನಾಟಕದ ವಿಷಯಕ್ಕೂ ಹೆಮ್ಮೆಯ ಸಂಗತಿ. ಸದ್ಯ ಗುಜರಾತ್ ರಾಜ್ಯದ ಗಾಂಧಿ ನಗರದಲ್ಲಿ ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಇದ್ದು, ಇದು ನೇರವಾಗಿ ಕೇಂದ್ರ ಗೃಹ ಸಚಿವಾಲಯದ ಅಧೀನದಲ್ಲಿಯೇ ನಡೆಯುತ್ತದೆ. ಈ ವಿವಿ ದೇಶದ ಒಟ್ಟು 8 ಕಡೆ ತನ್ನ ಕ್ಯಾಂಪಸ್ ಹೊಂದಿದೆ. ಆದರೆ ದಕ್ಷಿಣ ಭಾರತದಲ್ಲಿ ಇರಲೇ ಇಲ್ಲ. ಆದ್ರೆ ದಕ್ಷಿಣ ಭಾರತದ ಮೊದಲ ಈ ಕ್ಯಾಂಪಸ್ ಧಾರವಾಡದಲ್ಲಿ ಆರಂಭ ಆಗೋಕೆ ಕಾರಣವಾಗಿದ್ದು, ಧಾರವಾಡ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Palhad Joshi). ಇದೀಗ ಈ ಕ್ಯಾಂಪಸ್ ಗೆ ಶಂಕುಸ್ಥಾಪನೆಯನ್ನು ಜನವರಿ 28 ರಂದು ಕೇಂದ್ರ ಗೃಹಸಚಿವ ಅಮಿತ್ ಶಾ (Amit Shah) ನೆರವೇರಿಸಲಿದ್ದಾರೆ.
ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೇಂದ್ರ ಸರ್ಕಾರ ಮಟ್ಟದಲ್ಲಿ ಯಾವ ಮಟ್ಟಿಗೆ ಪ್ರಭಾವ ಬೀರಿದ್ದಾರೆ ಅಂದ್ರೆ ಜನವರಿ ಎರಡನೇ ವಾರದಲ್ಲಿ ಧಾರವಾಡದಲ್ಲಿ ಈ ವಿಶ್ವವಿದ್ಯಾಲಯ ಮಾಡೋದಕ್ಕೆ ಮಂಜೂರಾತಿ ಸಿಕ್ಕಿತ್ತು. ಇಗ ಜನವರಿ ಕೊನೆಯಲ್ಲಿ ಶಂಕುಸ್ಥಾಪನೆ ನೆರವೇರುವಂತಾಗಿದೆ. ಹೌದು, ಜನವರಿ 28ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ನೇರವಾಗಿ ಧಾರವಾಡಕ್ಕೆ ಬಂದು ಶಂಕುಸ್ಥಾಪನೆ ಮಾಡಲಿದ್ದು, ಈ ವಿಶ್ವವಿದ್ಯಾಲಯಕ್ಕೆ ಒಟ್ಟು 50 ಎಕರೆ ಜಾಗ ಬೇಕಿತ್ತು.
ಧಾರವಾಡದ-ಬೆಳಗಾವಿ ರಸ್ತೆಗೆ ಹೊಂದಿಕೊಂಡಿರೋ ಕೃಷಿ ವಿಶ್ವವಿದ್ಯಾಲಯದ 48 ಎಕರೆ ಜಾಗವನ್ನು ಈಗ ಕೊಡಲಾಗುತ್ತಿದ್ದು, ರಾಜ್ಯ ಸರ್ಕಾರದಿಂದ ಜಾಗ ಮಾತ್ರ ಕೊಡಬೇಕು. ಉಳಿದಂತೆ ನೇರವಾಗಿ ಗೃಹ ಸಚಿವಾಲಯವೇ ಇಲ್ಲಿ ಕ್ಯಾಂಪಸ್ ನಿರ್ಮಾಣದ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಮಂಚಿತವಾಗಿಯೇ ಗಾಂಧಿನಗರದಲ್ಲಿರೊ ಮುಖ್ಯ ವಿವಿ ಹಾಗೂ ಗೃಹ ಸಚಿವಾಲಯದ ತಂಡವು ಧಾರವಾಡಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ಮಾಡಿ ಫೈನಲ್ ಮಾಡಿದ್ದು, ಆಯಕಟ್ಟಿನ ಜಾಗ ಅಂತಾ ಹರ್ಷ ಸಹ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ ಈಗಾಗಲೇ ಐಐಟಿ ಮತ್ತು ತ್ರಿಬಲ್ ಐಟಿಯೊಂದಿಗೆ ರಾಷ್ಟ್ರಮಟ್ಟದಲ್ಲಿ ಧಾರವಾಡದ ಕೀರ್ತಿ ಬೆಳೆಗುತ್ತಿದ್ದು, ಈಗ ವಿಧಿವಿಜ್ಞಾನ ವಿವಿ ಲಭಿಸಿರುವುದು ಮತ್ತೊಂದು ಹೆಮ್ಮೆಯ ಸಂಗತಿಯಾಗಿದೆ. ಈ ವಿಶ್ವವಿದ್ಯಾಲಯ ಜೊತೆಗೆ ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾದೇಶಿಕ ಕಚೇರಿಯನ್ನೂ ಇದೇ ಕ್ಯಾಂಪಸ್ನಲ್ಲಿ ತೆರೆಯಲು ಯೋಜನೆ ಹಾಕಿಕೊಳ್ಳುತ್ತಿದ್ದು, ಭವಿಷ್ಯದಲ್ಲಿ ಧಾರವಾಡ ಇನ್ನು ಹೆಚ್ಚು ಪ್ರಸಿದ್ಧಿಗೆ ಬರಲಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ವರದಿ: ನರಸಿಂಹಮೂರ್ತಿ ಪ್ಯಾಟಿ, ಟಿವಿ9, ಧಾರವಾಡ