Hubballi News: ವಿಧಾನಸಭೆಯಲ್ಲಿ ಹುಬ್ಬಳ್ಳಿ ದರ್ಗಾ ತೆರವು ವಿಚಾರ ಪ್ರಸ್ತಾಪ: ನನ್ನದು 19 ಗುಂಟೆ ಜಾಗ ಹೋಗಿದೆ ಎಂದ ಸಿಎಂ ಬೊಮ್ಮಾಯಿ
ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭೈರಿದೇವರಕೊಪ್ಪ ದರ್ಗಾ ತೆರವು ಕಾರ್ಯಾಚರಣೆಯನ್ನು ಜಿಲ್ಲಾಡಳಿತ ಇಂದು (ಡಿ. 21) ಮಾಡಿದೆ. ಈ ವಿಚಾರವನ್ನು ಇಂದಿನ ವಿಧಾನಸಭೆಯಲ್ಲಿ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪ ಮಾಡಿದರು.
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಬರುವ ಭೈರಿದೇವರಕೊಪ್ಪ ದರ್ಗಾ (Byridevarakoppa Dargah) ರಸ್ತೆ ಅಗಲೀಕರಣಕ್ಕಾಗಿ ಮುಖ್ಯರಸ್ತೆಯಿಂದ 44 ಮೀಟರ್ ಭೂಮಿಯನ್ನಯ BRTS (Bus Rapid Transit System) ವಶಕ್ಕೆ ಪಡೆದಿದೆ. ರಸ್ತೆ ಅಗಲೀಕರಣ ಹಿನ್ನೆಲೆ ದರ್ಗಾ ತೆರವಿಗೆ ಹೈಕೋರ್ಟ್ ಆದೇಶ (Highcourt Order) ನೀಡಿದ್ದು ಇಂದು (ಡಿ. 21) ಭೈರಿದೇವರಕೊಪ್ಪದಲ್ಲಿರುವ ದರ್ಗಾವನ್ನು ಜಿಲ್ಲಾಡಳಿತ ತೆರವು ಮಾಡಿದೆ. ಹೀಗಾಗಿ ಹಜರತ್ ಸೈಯದ್ ಮೆಹಮೂದ್ ಷಾ ಖಾದ್ರಿ ದರ್ಗಾ ಸುತ್ತ ಡಿಸಿಪಿ ಸಾಹಿಲ್ ಬಾಗ್ಲಾ ನೇತೃತ್ವದಲ್ಲಿ ಭದ್ರತೆ ಕೈಗೊಳ್ಳಲಾಗಿತ್ತು. ಭೂಸ್ವಾಧೀನ ಪ್ರಶ್ನಿಸಿ ದರ್ಗಾ ಕಮಿಟಿ ಕೋರ್ಟ್ ಮೆಟ್ಟಿಲೇರಿತ್ತು. ನ್ಯಾಯಾಲಯದಲ್ಲಿ ಸ್ಟೇ ಅವಧಿ ಮುಗಿದ ಹಿನ್ನೆಲೆ ತೆರವು ಮಾಡಲು ಜಿಲ್ಲಾಡಳಿತ ಮುಂದಾಗಿದೆ. ದರ್ಗಾ ಕಮಿಟಿಯ ಸದಸ್ಯರ ಜೊತೆ ಸೌಹಾರ್ದ ತೆರವಿಗೆ ಜಿಲ್ಲಾಡಳಿತ ಮನವಿ ಮಾಡಿತ್ತು. ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸಿ ತೆರವಿಗೆ ಅವಕಾಶ ನೀಡಲಾಗಿತ್ತು.
ನನ್ನ ಜಾಗ ಸಹ ಹೋಗಿದೆ: ಸಿಎಂ ಬೊಮ್ಮಾಯಿ
ಈ ವಿಚಾರವನ್ನು ಶೂನ್ಯವೇಳೆ ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕ ಅಬ್ಬಯ್ಯ ಪ್ರಸಾದ್ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿಯಲ್ಲಿ ರಸ್ತೆ ಅಗಲೀಕರಣದಿಂದ ನನ್ನ ಜಾಗ ಸಹ ಹೋಗಿದೆ. ನನ್ನ 19 ಗುಂಟೆ ಜಾಗ ಹೋಗಿದೆ, 5 ಲಕ್ಷ ಮಾತ್ರ ಪರಿಹಾರ ಸಿಕ್ಕಿದೆ. ದರ್ಗಾ ಒಡೆಯುವ ವಿಚಾರದಲ್ಲಿ ಯಾರ ಭಾವನೆಗಳಿಗೆ ಧಕ್ಕೆ ತರಲ್ಲ. ಕೋರ್ಟ್ ಆದೇಶದಂತೆ ನಡೆಯುತ್ತಿದೆ. ಶುಕ್ರವಾರ ಹುಬ್ಬಳ್ಳಿಗೆ ಹೋಗಿ ಸ್ಥಳೀಯ ಮುಖಂಡರ ಜೊತೆ ಚರ್ಚೆ ಮಾಡಿ, ಬೇಕಾದ ಅನುಕೂಲ ಮಾಡಿಕೊಡುವೆ. ಮುಂದಿನ ಕಾರ್ಯಾಚರಣೆ ಮಾತುಕತೆ ಮೂಲಕ ಒಪ್ಪಿಸಿ ಮಾತನಾಡುವೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
ಇದನ್ನೂ ಓದಿ: Hubballi Dargah Demolition: ರಸ್ತೆ ಅಗಲೀಕರಣ ಹಿನ್ನೆಲೆ ಹುಬ್ಬಳ್ಳಿಯ ಭೈರಿದೇವರಕೊಪ್ಪದಲ್ಲಿರುವ ದರ್ಗಾ ತೆರವು
ಭೈರಿದೇವರಕೊಪ್ಪ ದರ್ಗಾ ಸರ್ವಧರ್ಮ ಸಮನ್ವಯ ಇದ್ದಂತಹ ದರ್ಗಾ: ಸಿದ್ದರಾಮಯ್ಯ
ಇನ್ನು ಈ ವಿಚಾರವಾಗಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಹುಬ್ಬಳ್ಳಿಯ ಹಜರತ್ ಷಾ ಖಾದ್ರಿ ದರ್ಗಾ ಬಹಳ ವರ್ಷದಿಂದ ಇದೆ. ನಾನು ಸಿಎಂ ಆಗಿದ್ದಾಗ ದರ್ಗಾ, ದೇಗುಲ ಒಡೆಯಲು ಅವಕಾಶ ನೀಡಿಲ್ಲ. ಪಕ್ಕದ ಜಾಗ ಪಡೆದು ರಸ್ತೆ ಮಾಡುವಂತೆ ಸೂಚಿಸಿದ್ದೆ. ಭೈರಿದೇವರಕೊಪ್ಪ ದರ್ಗಾ ಸರ್ವಧರ್ಮ ಸಮನ್ವಯ ಇದ್ದಂತಹ ದರ್ಗಾ. ಈ ದರ್ಗಾಕ್ಕೆ ಹಿಂದೂ, ಕ್ರಿಶ್ಚಿಯನ್, ಮುಸ್ಲಿಮರು ಹೋಗುತ್ತಿದ್ದರು. ದರ್ಗಾ ತೆರವಿನಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗುತ್ತೆ. ದೇಗುಲ, ದರ್ಗಾ ಒಡೆಯಬೇಕು ಅಂತಿದ್ರೆ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು. ಸಿಎಂ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಬೇಕು ಎಂದು ಹೇಳಿದರು.
ಎಲ್ಲರ ಮನವೊಲಿಕೆ ಮಾಡಿ ದರ್ಗಾ ತೆರವು ಮಾಡಲಾಗಿದೆ; ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹುಬ್ಬಳ್ಳಿಯಲ್ಲಿ ಹೇಳಿಕೆ ನೀಡಿದ್ದು, ಹೈಕೋರ್ಟ್ ಆದೇಶದಂತೆ ದರ್ಗಾ ತೆರವು ಮಾಡಲಾಗಿದೆ. ಧಾರ್ಮಿಕ ಭಾವನೆಗೆ ಧಕ್ಕೆ ಬರದಂತೆ ತೆರವು ಮಾಡಲಾಗಿದೆ. ಎಲ್ಲರ ಮನವೊಲಿಕೆ ಮಾಡಿ, ಧಾರ್ಮಿಕ ವಿಧಿವಿಧಾನ ಪೂರೈಸಿ ತೆರವು ಕಾರ್ಯಾಚರಣೆ ಮಾಡಲಾಗಿದೆ. ಈವರೆಗೆ 13 ಧಾರ್ಮಿಕ ಕೇಂದ್ರಗಳನ್ನು ತೆರವು ಮಾಡಲಾಗಿದೆ. BRTS ಯೋಜನೆ ವ್ಯಾಪ್ತಿಯಲ್ಲಿ 13 ಧಾರ್ಮಿಕ ಕೇಂದ್ರ ತೆರವು ಮಾಡಿದ್ದು, ಇನ್ನೂ 2-3 ಧಾರ್ಮಿಕ ಕೇಂದ್ರಗಳ ತೆರವು ಕಾರ್ಯ ಬಾಕಿ ಇದೆ. ನಾವು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ. ಹೈಕೋರ್ಟ್ ಸೂಚನೆಯಂತೆ ನಮ್ಮ ಕರ್ತವ್ಯವನ್ನು ಮಾಡ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:41 pm, Wed, 21 December 22